ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳಿಗೆ ತೆರಿಗೆ ಇಲ್ಲ- GST ಸಭೆಯಲ್ಲಿ ಮಹತ್ವದ ನಿರ್ಧಾರ

Public TV
2 Min Read
GST MEETING

ನವದೆಹಲಿ: ಭಾರತೀಯ ರೈಲ್ವೆಯು ಸಾಮಾನ್ಯ ಜನರಿಗೆ ಒದಗಿಸುವ ಸೇವೆಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟ, ಕೊಠಡಿಗಳ ಸೌಲಭ್ಯ, ಕ್ಲೋಕ್‌ರೂಮ್ ಸೇವೆಗಳು ಹಾಗೂ ಬ್ಯಾಟರಿ ಚಾಲಿತ ಕಾರು ಸೇವೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಹೇಳಿದರು.

ಕೇಂದ್ರ ಹಣಕಾಸು ಸಚಿವೆಯ ಅಧ್ಯಕ್ಷತೆಯಲ್ಲಿ ಇಂದು ಸರಕು ಮತ್ತು ಸೇವಾ ತೆರಿಗೆ (GST) ಕೌನ್ಸಿಲ್‌ನ 53ನೇ ಸಭೆ ನಡೆಯಿತು. ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೀತಾರಾಮನ್, ಭಾರತೀಯ ರೈಲ್ವೆಯು ಸಾಮಾನ್ಯ ಜನರಿಗೆ ಒದಗಿಸುವ ಸೇವೆಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟ, ಕೊಠಡಿಗಳ ಸೌಲಭ್ಯ, ಕ್ಲೋಕ್‌ರೂಮ್ ಸೇವೆಗಳು ಹಾಗೂ ಬ್ಯಾಟರಿ ಚಾಲಿತ ಕಾರು ಸೇವೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರದ ಉದ್ದೇಶ ಸ್ಪಷ್ಟವಾಗಿದೆ. ಇಂಧನದ ಮೇಲಿನ ಜಿಎಸ್‌ಟಿ ದರವನ್ನು ನಿರ್ಧರಿಸಲು ರಾಜ್ಯಗಳಿಗೆ ಬಿಟ್ಟಿದೆ ಎಂದರು.

ಸೋಲಾರ್ ಕುಕ್ಕರ್‌ಗಳ ಮೇಲೆ 12%ರಷ್ಟು ಜಿಎಸ್‌ಟಿ ವಿಧಿಸಲು ಅನುಮೋದನೆ ನೀಡಲಾಗಿದೆ. GST ಕಾಯಿದೆಯ ಸೆಕ್ಷನ್ 73 ರ ಅಡಿಯಲ್ಲಿ ನೀಡಲಾದ ಬೇಡಿಕೆಯ ನೋಟೀಸ್‌ಗಳಿಗೆ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಶಿಫಾರಸು ಮಾಡಲಾಗಿದೆ. ಇದಲ್ಲದೇ ನಕಲಿ ಇನ್‌ವಾಯ್ಸ್‌ಗಳನ್ನು ತಡೆಯಲು ಹಂತಹಂತವಾಗಿ ದೇಶಾದ್ಯಂತ ಬಯೋಮೆಟ್ರಿಕ್‌ ದೃಢೀಕರಣವನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಶಿಕ್ಷಣ ಸಂಸ್ಥೆಗಳ ಹೊರಗಿರುವ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೂ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ವಸತಿ ಸೇವೆಗಳ ಪೂರೈಕೆಯ ಮೌಲ್ಯವು ಪ್ರತಿ ವ್ಯಕ್ತಿಗೆ 20 ಸಾವಿರ ರೂ. ಸೇವೆಗಳನ್ನು 90 ದಿನಗಳ ಕನಿಷ್ಠ ನಿರಂತರ ಅವಧಿಗೆ ಸರಬರಾಜು ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಹಾಲಿನ ಕ್ಯಾನ್‌ಗಳ ಮೇಲೆ 12% ರಷ್ಟು ಏಕರೂಪದ ದರವನ್ನು ನಿಗದಿಪಡಿಸಲು ಕೌನ್ಸಿಲ್ ಶಿಫಾರಸು ಮಾಡಿದೆ. ಅಲ್ಲದೇ ಎಲ್ಲಾ ರಟ್ಟಿನ ಪೆಟ್ಟಿಗೆಗಳ ಮೇಲೆ 12% ರಷ್ಟು ದರವನ್ನು ನಿಗದಿಪಡಿಸಿದೆ. ಫೈರ್‌ ಸ್ಪಿಂಕ್ಲರ್‌ಗಳು ಸೇರಿದಂತೆ ಎಲ್ಲಾ ರೀತಿಯ ಸ್ಪಿಂಕ್ಲರ್‌ಗಳ ಮೇಲೆ 12% ದರವು ಅನ್ವಯಿಸುತ್ತದೆ. ಎಲ್ಲಾ ದೌರ ಕುಕ್ಕರ್‌ಗಳ ಮೇಲೆ 12% ಪ್ರತಿಶತ ಜಿಎಸ್‌ಟಿ ದರ ಅನ್ವಯಿಸುತ್ತದೆ ಎಂದು ಸೀತಾರಾಮನ್‌ ತಿಳಿಸಿದರು.

ಸಣ್ಣ ತೆರಿಗೆದಾರರಿಗೆ ಸಹಾಯ ಮಾಡುವ ಸಲುವಾಗಿ ಏಪ್ರಿಲ್ 30 ರಿಂದ ಜೂನ್ 30 ರವರೆಗೆ ಜಿಎಸ್‌ಟಿಆರ್ 4 ನಮೂನೆಯಲ್ಲಿ ವಿವರಗಳನ್ನು ಮತ್ತು ರಿಟರ್ನ್‌ಗಳನ್ನು ಒದಗಿಸಲು ಸಮಯ ಮಿತಿಯನ್ನು ವಿಸ್ತರಿಸಲು ಕೌನ್ಸಿಲ್ ಶಿಫಾರಸು ಮಾಡಿದೆ ಎಂದರು.

Share This Article