– ಪ್ರಕರಣದಲ್ಲಿ ಏನಾಗ್ತಿದೆ ಅಂತ ಜನ ದುರ್ಬೀನು ಹಾಕಿಕೊಂಡು ನೋಡ್ತಿದ್ದಾರೆ ಎಂದ ಕಿಚ್ಚ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ (Darshan) ಅವರನ್ನ ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದ್ದು, ಈ ಬಗ್ಗೆ ನಟ ಕಿಚ್ಚ ಸುದೀಪ್ (Kichcha Sudeep) ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ಯಾನ್ ಮಾಡಲು ನಾವ್ಯಾರು ಕಾನೂನು ಅಲ್ಲ. ಕೇಸ್‌ನಿಂದ ಹೊರಗೆ ಬಂದ್ರೆ ಬ್ಯಾನ್ ಅನ್ನೋದು ಬರೋದೆ ಇಲ್ಲ. ಇಲ್ಲಿ ಬ್ಯಾನ್ ಅನ್ನೋದಕ್ಕಿಂತ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು ಅನ್ನೋದು ಮುಖ್ಯ. ಕೆಲ ವಾರಗಳ ಹಿಂದೆಯಷ್ಟೇ ನನ್ನ ಮೇಲೂ ಬ್ಯಾನ್ ಎಂಬ ಕೂಗು ಕೇಳಿಬಂದಿತ್ತು. ಹಾಗಾಗಿ ಬ್ಯಾನ್ ಮಾಡೋದು ಮುಖ್ಯ ಅಲ್ಲ ನ್ಯಾಯ ಅನ್ನೋದು ಮುಖ್ಯ. ಪೊಲೀಸರು, ಮಾಧ್ಯಮಗಳು ಹೇಗೆ ಕೆಲಸ ಮಾಡ್ತಿವೆ? ಕೋರ್ಟ್‌ನಲ್ಲಿ ಏನಾಗ್ತಿದೆ ಅನ್ನೋದರ ಬಗ್ಗೆ ಎಲ್ಲರೂ ದುರ್ಬೀನು ಹಾಕಿಕೊಂಡು ನೋಡ್ತಿದ್ದಾರೆ. ಗಮನ ಅಲ್ಲಿರಬೇಕು ಅಂತ ಹೇಳಿದ್ದಾರೆ. ಇದನ್ನೂ ಓದಿ: ಸೆಲೆಬ್ರಿಟಿ ಅಂದ ತಕ್ಷಣ ದೇವ್ರು ಅಂತ ಭಾವಿಸಬೇಡಿ – ಫ್ಯಾನ್ಸ್‌ಗೆ ಕಿಚ್ಚನ ಸಲಹೆ
ಇಂತಹ ವಿಚಾರದಲ್ಲಿ ಪರ ವಿರೋಧ ಮಾತನಾಡುವುದು ತಪ್ಪಾಗುತ್ತದೆ. ಮುಖ್ಯವಾಗಿ ರೇಣುಕಾಸ್ವಾಮಿ ಕುಟುಂಬಕ್ಕೆ, ಮಗುವಿಗೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಾದ ರೇಣುಕಾಸ್ವಾಮಿ ಅವರಿಗೆ, ಮುಂದೆ ಹುಟ್ಟುವ ಅವರ ಮಗುವಿಗೆ ನ್ಯಾಯ ಸಿಗಬೇಕು. ನ್ಯಾಯದ ಮೇಲೆ ಜನರಿಗೆ ನಂಬಿಕೆ ಬರಬೇಕೆಂದರೆ, ಈ ಪ್ರಕರಣದಲ್ಲಿ ಒಳ್ಳೆ ನ್ಯಾಯ ಸಿಗಬೇಕು ಎಂದು ಸುದೀಪ್ ನೊಂದ ಕುಟುಂಬಕ್ಕೆ ದನಿಯಾಗಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲಿ ಹೀರೋ ಹುಟ್ಟುತ್ತಾರೆ ಅದೇ ತಲೆನೋವು- ಕಾರ್ತಿಕ್ ಕಾಲೆಳೆದ ಕಿಚ್ಚ
ಮುಂದುವರಿದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಧ್ಯಮಗಳಲ್ಲಿ ಏನು ತೋರಿಸುತ್ತಿದ್ದೀರೋ ಅದರಿಂದಲೇ ನಾನು ತಿಳಿದುಕೊಳ್ಳುತ್ತಿದ್ದೇನೆ. ಸತ್ಯಾಂಶ ಹೊರತರಬೇಕು ಅನ್ನೋ ನಿಟ್ಟಿನಲ್ಲಿ ಮಾಧ್ಯಮಗಳು, ಪೊಲೀಸರು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಅವರು ಹಠ ಹಿಡಿದು ಕುಳಿತಿದ್ದಾರೆ ಅಂದ್ರೆ, ಎಲ್ಲರೂ ಸರಿಯಾದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ಅರ್ಥ. ನಾನು ಅವರ ಪರ ಇವರ ಪರ ಮಾತಾಡೋದಿಲ್ಲ. ಒಟ್ಟಿನಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ, ಅವ್ರ ಪತ್ನಿ, ಮಗುವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Breaking: ಚಿತ್ರರಂಗಕ್ಕೆ ಕಪ್ಪುಚುಕ್ಕೆ ಬರಬಾರದು – ದರ್ಶನ್ ಬಂಧನ ವಿಚಾರದಲ್ಲಿ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್