ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್‌

Public TV
1 Min Read
pakistan cricket team

– ಅಮೆರಿಕ, ಐರ್ಲೆಂಡ್‌ ಪಂದ್ಯ ಮಳೆಗೆ ಬಲಿ
– ಸೂಪರ್‌  8ಕ್ಕೆ  ಪ್ರವೇಶ ಪಡೆದ ಅಮೆರಿಕ

ಫ್ಲೋರಿಡಾ: ಈ ಬಾರಿ ಟಿ20 ವಿಶ್ವಕಪ್‌ (T20 World Cup) ಗೆಲ್ಲಲೇಬೇಕೆಂದು ಸೇನಾ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದ ಪಾಕಿಸ್ತಾನ (Pakistan) ಈಗ ಟೂರ್ನಿಯಿಂದಲೇ ಔಟ್‌ ಆಗಿದೆ.

ಅಮೆರಿಕ, ಐರ್ಲೆಂಡ್‌ ಪಂದ್ಯ ಮಳೆಯಿಂದ (Rain) ರದ್ದಾಗಿದೆ. ಪರಿಣಾಮ ಅಮೆರಿಕ (USA) ಅಧಿಕೃತವಾಗಿ ಸೂಪರ್‌ 8 ಪ್ರವೇಶಿಸಿದ್ದು ಪಾಕ್‌ ಕನಸು ನುಚ್ಚು ನೂರಾಗಿದೆ. ಅಷ್ಟೇ ಅಲ್ಲದೇ ಮೊದಲ ಟಿ20 ವಿಶ್ವಕಪ್‌ನಲ್ಲೇ ಸೂಪರ್‌ 8 ಹಂತ ಪ್ರವೇಶಿಸಿದ ಸಾಧನೆ ಮಾಡಿದೆ.

Pakistan cricket Team

ಎ ಗುಂಪಿನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿ 6 ಅಂಕಗಳನ್ನು ಪಡೆದು ಭಾರತ (Team India) ಈಗಾಗಲೇ ಸೂಪರ್‌ 8 (Super 8) ಪ್ರವೇಶಿಸಿದ್ದರೆ ಅಮೆರಿಕ ಮತ್ತು ಪಾಕ್‌ ಮಧ್ಯೆ ತೀವ್ರ ಸ್ಪರ್ಧೆ ಇತ್ತು. ಅಮೆರಿಕ ಎರಡು ಪಂದ್ಯ ಗೆದ್ದಿದ್ದರೆ ಪಾಕ್‌ ಒಂದು ಪಂದ್ಯ ಗೆದ್ದಿತ್ತು.

ಶುಕ್ರವಾರದ ಪಂದ್ಯ ರದ್ದಾದ ಕಾರಣ ಇತ್ತಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ. ಇದರಿಂದಾಗಿ 5 ಅಂಕದೊಂದಿಗೆ ಅಮೆರಿಕ ಸೂಪರ್‌ 8 ಪ್ರವೇಶಿಸಿತು. ಒಂದು ವೇಳೆ ಅಮೆರಿಕ ಈ ಪಂದ್ಯವನ್ನು ಸೋತಿದ್ದರೆ ಪಾಕ್‌ಗೆ ಒಂದು ಅವಕಾಶವಿತ್ತು. ಇದನ್ನೂ ಓದಿ: ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌!

ಪಾಕಿಸ್ತಾನ 3 ಪಂದ್ಯವಾಡಿ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ. ಭಾನುವಾರ ಐರ್ಲೆಂಡ್‌ ವಿರುದ್ಧ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೂ 4 ಅಂಕ ಮಾತ್ರ ಸಂಪಾದಿಸುವುದರಿಂದ ಪಾಕ್‌ ಸೂಪರ್‌ 8 ಪ್ರವೇಶಿಸಲು ವಿಫಲವಾಯಿತು. ಪಾಕ್‌ ಜೊತೆಗೆ ಎ ಗುಂಪಿನಲ್ಲಿದ್ದ ಕೆನಡಾ ಮತ್ತು ಐರ್ಲೆಂಡ್‌ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ.

2026ರ ವಿಶ್ವಕಪ್‌ಗೂ ಅಮೆರಿಕ ನೇರ ಪ್ರವೇಶ ಪಡೆಯಿತು.  ಸೂಪರ್‌-8 ಹಂತಕ್ಕೇರುವ ಎಲ್ಲಾ 8 ತಂಡಗಳು 2026ರ  ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ.  ಈ ವಿಶ್ವಕಪ್‌ ಟೂರ್ನಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿದೆ. ಶ್ರೀಲಂಕಾ ಸೂಪರ್‌ 8 ಹಂತಕ್ಕೆ ಅರ್ಹತೆ ಪಡೆಯದೇ ಇದ್ದರೂ ಆತಿಥ್ಯ ವಹಿಸಿದ ಕಾರಣ ಅರ್ಹತೆ ಪಡೆಯಲಿದೆ.

Share This Article