– ಬಂಧನ ಭೀತಿಯಿಂದ ಪಾರಾದ ಮಾಜಿ ಸಿಎಂ ಯಡಿಯೂರಪ್ಪ
ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ (B.S.Yediyurappa) ರಿಲೀಫ್ ಸಿಕ್ಕಿದೆ. ಮುಂದಿನ ವಿಚಾರಣೆ ತನಕ ಯಡಿಯೂರಪ್ಪ ವಿರುದ್ಧ ಒತ್ತಾಯದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಸೂಚಿಸಿದೆ.
ಒತ್ತಾಯದ ಕ್ರಮ ಕೈಗೊಳ್ಳುವಂತಿಲ್ಲ ಎಂದಿರುವ ನ್ಯಾಯಾಲಯ, ಜೂನ್ 17 ರಂದು ಯಡಿಯೂರಪ್ಪ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ. ಇದನ್ನೂ ಓದಿ: ಚುನಾವಣೆ ಸೋಲು ಅರಗಿಸಿಕೊಳ್ಳಲಾಗದೇ ಬಿಎಸ್‌ವೈ ಮೇಲೆ ರಾಜಕೀಯ ವೈಷಮ್ಯ: ಜೋಶಿ ಆಕ್ರೋಶ
ಪೋಕ್ಸೊ (POCSO) ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಹಾಗೂ ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಮುಂದಿನ ವಿಚಾರಣೆ ತನಕ ಬಲವಂತದ ಕ್ರಮಕೈಗೊಳ್ಳುವಂತಿಲ್ಲ ಎಂದು ಸೂಚಿಸಿದೆ.
ಯಡಿಯೂರಪ್ಪ ಪರ ವಾದ ಮಂಡಿಸಿದ ವಕೀಲ ನಾಗೇಶ್, ಲೈಂಗಿಕ ದೌರ್ಜನ್ಯ ಪ್ರಕರಣ ಜಾಮೀನು ಸಹಿತ ಪ್ರಕರಣ. ಜಾಮೀನು ನೀಡಬಹುದಾದ ಪ್ರಕರಣ. ಪ್ರಕರಣದಲ್ಲಿ ಆರೋಪಿಗೆ ಪೊಲೀಸ್ ಠಾಣೆಯಲ್ಲಿಯೇ ಜಾಮೀನು ನೀಡಬಹುದು. 7 ವರ್ಷದ ಕೆಳಗೆ ಶಿಕ್ಷೆ ಇರುವ ಪ್ರಕರಣ ಇದು. ಇದರಲ್ಲಿ ಬಂಧನದ ಅನಿವಾರ್ಯತೆ ಇಲ್ಲ. ಬಂಧನ ಮಾಡುವ ಪ್ರಕರಣ ಅಲ್ಲ. ಇಷ್ಟೆಲ್ಲಾ ರಕ್ಷಣೆ ಇದ್ದರೂ ಕೂಡ ಸಿಐಡಿ ಬಂಧನ ಮಾಡಲು ಆತುರದಲ್ಲಿ ಇದೆ. 41(0) ಅಡಿಯಲ್ಲಿ ನೋಟಿಸ್ ನೀಡಿದೆ. 7 ವರ್ಷದ ಶಿಕ್ಷೆ ಇರುವ ಪ್ರಕರಣಕ್ಕೆ ಬಂಧನ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಏನಿದು ಬಿಎಸ್‌ವೈ ವಿರುದ್ಧದ ಪೋಕ್ಸೊ ಕೇಸ್? – ಇಲ್ಲಿದೆ ನೋಡಿ ಟೈಮ್‌ಲೈನ್..
ಅಡ್ವೊಕೇಟ್ ಜನರಲ್ ಶಶಿಕಿರಣ್, ನೋಟಿಸ್ ನೀಡಿದ ಬಳಿಕ ಯಡಿಯೂರಪ್ಪ ಅವರು ದೆಹಲಿಗೆ ಟಿಕೆಟ್ ಬುಕ್ ಮಾಡಿದ್ರು. ಅವರ ಉದ್ದೇಶ ಬೆಂಗಳೂರು ಬಿಟ್ಟು ಹೋಗುವುದು ಆಗಿತ್ತು. ಮೊದಲು ದೆಹಲಿಗೆ ಹೋಗುವ ಉದ್ದೇಶ ಇರಲಿಲ್ಲ. ನೋಟಿಸ್ ಕೊಟ್ಟ ಕೂಡಲೇ ಟಿಕೆಟ್ ಬುಕ್ ಮಾಡಿದ್ರು. ರಾತ್ರಿ 9:30 ಕ್ಕೆ ಹೋದರು ಎಂದು ವಾದ ಮಂಡಿಸಿದರು.
ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ರು. ರಾಜಕೀಯ ಕೆಲಸಗಳು ಇರಬಹುದು ಅಲ್ಲವಾ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಸರ್ಕಾರಿ ವಕೀಲ ಜಗದೀಶ್, ಪ್ರಕರಣದ ಸಾಕ್ಷ್ಯವನ್ನು ನಾಶ ಮಾಡಿದ್ದಾರೆ. ಆರೋಪಿಗಳು ಸಂತ್ರಸ್ತೆಯ ಮೇಲೆ ಒತ್ತಡ ಬೀರಿದ್ದಾರೆ ಎಂದು ವಾದ ಮಂಡಿಸಿದರು.
ವಾರೆಂಟ್ ನೋಡಿದರೆ ಅನುಮಾನ ಬರುತ್ತದೆ ಎಂದು ನ್ಯಾಯಾಧೀಶರು ಕೇಳಿದರು. ಅದಕ್ಕೆ ಅಡ್ವೊಕೇಸ್ ಜನರಲ್, ಯಾವುದೇ ಅನುಮಾನಪಡುವ ಅಗತ್ಯವಿಲ್ಲ. ತನಿಖಾಧಿಕಾರಿಗೆ ಬಂಧನ ಅಗತ್ಯವಿದೆ ಎಂದು ಅನಿಸಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪೋಕ್ಸೋ ಕೇಸ್: ಬಿಎಸ್‌ವೈ ವಿರುದ್ಧ ಅರೆಸ್ಟ್ ವಾರಂಟ್ ಜಾರಿ – ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ!
ಇದಕ್ಕೆ ನ್ಯಾಯಾಧೀಶರು, ಅವರು ಮಾಜಿ ಮುಖ್ಯಮಂತ್ರಿ. ಕರ್ನಾಟಕಕ್ಕೆ ವಾಪಸ್ ಬರಲೇಬೇಕು ಅಲ್ಲವಾ? ಬಿಎಸ್‌ವೈ ಜೂನ್ 17ರಂದು ಬರುತ್ತೇನೆ ಎಂದಿದ್ದಾರೆ. ಅದಾಗ್ಯೂ, ಅವರನ್ನು ಬಂಧಿಸಬೇಕೆ? ಯಾರನ್ನು ಸಂತುಷ್ಟಗೊಳಿಸಲು ಎಂದು ಪ್ರಶ್ನಿಸಿದರು. ಅದಕ್ಕೆ ಅಡ್ವೊಕೇಟ್ ಜನರಲ್ ಮಾತನಾಡಿ, ಅವರ ವಿರುದ್ಧ ಬಲವಾದ ಸಾಕ್ಷ್ಯಗಳು ಇದ್ದಾವೆ. ಅದಕ್ಕಾಗಿಯೇ ವಾರೆಂಟ್ ಪಡೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಬಿಎಸ್‌ವೈ ಪರ ವಕೀಲ ನಾಗೇಶ್ ಮಾತನಾಡಿ, ಬಲವಂತದ ಕ್ರಮ ತೆಗೆದುಕೊಳ್ಳದಂತೆ ಸೂಚನೆ ನೀಡಿ. ಈಗಾಗಲೇ ಆರೋಪಿ ವಿರುದ್ಧ ಅರೆಸ್ಟ್ ವಾರೆಂಟ್ ಮಾಡಿಸಿಕೊಂಡಿದ್ದಾರೆ. ಪ್ರಕರಣದ ವಿಚಾರಣೆಯನ್ನೇ ಮಾಡಬಾರದು ಎಂದು ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಕೃಷ್ಣ ದೀಕ್ಷಿತ್ ಪೀಠವು, ಮುಂದಿನ ವಿಚಾರಣೆ ತನಕ ಒತ್ತಾಯದ ಕ್ರಮ ಮಾಡುವಂತಿಲ್ಲ. ಜೂನ್ 17ರಂದು ಯಡಿಯೂರಪ್ಪ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ಅಗತ್ಯ ಬಿದ್ದರೆ ಬಿಎಸ್‍ವೈ ಅರೆಸ್ಟ್: ಪರಮೇಶ್ವರ್