Breaking: ದೇಶದ ಪ್ರತಿ ಜಿಲ್ಲೆಯಲ್ಲೂ ಉಗ್ರರ ಜಾಲ ರೂಪಿಸಲು ಬಳ್ಳಾರಿಯಲ್ಲಿ ಸಂಚು – NIA ಚಾರ್ಜ್‌ಶೀಟ್‌ನಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಸ್ಫೋಟ!

Public TV
2 Min Read
ISIS 2

ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಕುಳಿತು ದೇಶದ ಪ್ರತಿಯೊಂದು ಜಿಲ್ಲೆಗಳಲ್ಲೂ ಐಸಿಸ್‌ ಉಗ್ರರ (ISIS Terrorists) ಜಾಲ ರೂಪಿಸಬೇಕು ಎಂದು ಸಂಚು ರೂಪಿಸಿದ್ದ 7 ಶಂಕಿತ ಉಗ್ರರನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಜಾರ್ಜ್‌ಶೀಟ್‌ನಲ್ಲಿ ಹಲವು ಸ್ಫೋಟಕ ರಹಸ್ಯಗಳನ್ನು ಎನ್‌ಐಎ (NIA) ಉಲ್ಲೇಖಿಸಿದ್ದು, ಇಡೀ ರಾಜ್ಯ, ದೇಶದ ಜನರನ್ನು ಬೆಚ್ಚಿಬೀಳುವಂತೆ ಮಾಡಿವೆ.

image

ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಕರ್ನಾಟಕದಲ್ಲಿ ಬಂಧಿನಕ್ಕೊಳಗಾಗಿದ್ದ ಮೊಹಮ್ಮದ್‌ ಮುನಿರುದ್ದೀನ್‌, ಸೈಯದ್‌ ಅಮೀರ್‌, ಎಂ.ಡಿ.ಮುಜಮಿಲ್‌ ಹಾಗೂ ಮಹಾರಾಷ್ಟ್ರದ ನಾಲ್ವರು ಉಗ್ರರ ವಿರುದ್ಧ ನ್ಯಾಯಾಲಯಕ್ಕೆ ಎನ್‌ಐಎ ಚಾರ್ಜ್‌ಶೀಟ್‌ (NIA Charge Sheet) ಸಲ್ಲಿಸಿದೆ.

ಉಗ್ರರ ಜಾಲವು ದೇಶದ ಪ್ರತಿ ಜಿಲ್ಲೆಯಲ್ಲೂ ಯುವಕರನ್ನು ಐಸಿಎಸ್‌ ಉಗ್ರ ಸಂಘಟನೆಗೆ ನೇಮಿಸುವ ಉದ್ದೇಶ ಹೊಂದಿತ್ತು. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಯುವಕರನ್ನು ಸ್ಲೀಪರ್‌ಸೆಲ್‌ಗಳನ್ನಾಗಿ ನೇಮಕ ಮಾಡಿಕೊಂಡು, 2025ರ ವೇಳೆ ದೇಶಾದ್ಯಂತ ಐಸಿಸ್‌ ಉಗ್ರ ಸಂಘಟನೆಯ ಜಾಲವನ್ನು ವಿಸ್ತರಣೆ ಮಾಡಬೇಕು ಎಂಬುದು ಅವರ ಉದ್ದೇಶವಾಗಿತ್ತು. ಅದಕ್ಕಾಗಿಯೇ ಬಳ್ಳಾರಿಯ ಮೂವರು ಹಾಗೂ ಮಹಾರಾಷ್ಟ್ರದ ನಾಲ್ವರು ಶಂಕಿತರು ಭಾರೀ ಸಂಚು ರೂಪಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಚಾರ್ಜ್‌ಶೀಟ್‌ ಅನ್ನು ಎನ್‌ಐಎ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಎಲ್ಲಾ ಶಾಲೆಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯ!

ISIS

ಐಸಿಸ್‌ ಉಗ್ರ ಸಂಘಟನೆಯ ಸುಲೇಮಾನ್‌ ಅಲಿಯಾಸ್‌ ಮಿನಾಜ್‌ ಎಂಬಾತನಿಂದ 7 ಉಗ್ರರು ಪ್ರತಿಜ್ಞೆ ಪಡೆದುಕೊಂಡಿದ್ದರು. ಭಾರತದಾದ್ಯಂತ ಐಸಿಸ್‌ ಜಾಲವನ್ನು ವಿಸ್ತರಿಸುವುದಾಗಿ ಇವರು ಪ್ರತಿಜ್ಞೆ ಸ್ವೀಕರಿಸಿದ್ದರು. ಐಸಿಸ್‌ ಉಗ್ರ ಸಂಘಟನೆಯ ಜೊತೆ ನಿರಂತರವಾಗಿ ಇವರು ಸಂಪರ್ಕದಲ್ಲಿದ್ದರು. ಜಿಲ್ಲೆಗಳಲ್ಲಿ ಸ್ಲೀಪರ್ ಸೆಲ್‌ಗಳನ್ನು ಬಳಸಿ ಗೆರಿಲ್ಲಾ ಮಾದರಿಯ ದಾಳಿಗೆ ಷಡ್ಯಂತ್ರ ರೂಪಿಸಿದ್ದರು.

ಅಷ್ಟೇ ಅಲ್ಲ ಸುಧಾರಿತ ಸ್ಫೋಟಕ ಸಾಧನಗಳ (IED) ಮೂಲಕ ದಾಳಿ ನಡೆಸುವುದು, ಬಳ್ಳಾರಿಯನ್ನು ಉಗ್ರ ಸಂಘಟನೆಯ ಜಾಲದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು, ಇಲ್ಲಿಯೇ ಪ್ರಾಯೋಗಿಕವಾಗಿ ಸ್ಫೋಟಿಸುವುದು ಸೇರಿ ಹಲವು ಕುತಂತ್ರಗಳನ್ನು ಹೆಣೆದಿದ್ದರು. 2025ರ ವೇಳೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ಸ್ಲೀಪರ್‌ಸೆಲ್‌ಗಳನ್ನು ನೇಮಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರುವ ಉದ್ದೇಶ ಹೊಂದಿದ್ದರು ಎಂದು ಎನ್‌ಐಎ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಗೇಮಿಂಗ್ ಝೋನ್‍ನಲ್ಲಿ ಅಗ್ನಿ ದುರಂತ – ಪುರಸಭೆ ಆಯುಕ್ತರು ನಿದ್ರಿಸುತ್ತಿದ್ದಾರೆ: ಹೈಕೋರ್ಟ್ ಚಾಟಿ

ಅಷ್ಟೇ ಅಲ್ಲದೇ ಧಾರ್ಮಿಕ ಮುಖಂಡರು, ದೇಶದ ಯೋಧರು, ಪೊಲೀಸರು ಸೇರಿ ಹಲವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಉದ್ದೇಶ ಹೊಂದಿದ್ದರು ಎಂದು ತಿಳಿದುಬಂದಿದೆ. ಇವರ ಬಳಿಯಿಂದ ಹಲವು ಡಿವೈಸ್‌ಗಳ ಜತೆಗೆ ಜಿಹಾದ್‌ ಕುರಿತ ಪುಸ್ತಕಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಹೇಳಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.

Share This Article