ಬೆಂಗಳೂರು: ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದು ಪೊಲೀಸ್ ಠಾಣೆಯನ್ನು ಶಾಮಿಯಾನದಿಂದ ಮುಚ್ಚಿದ ಪ್ರಸಂಗ ನಡೆದಿದೆ.
ಹೌದು. ಚಿತ್ರದುರ್ಗದ ರೇಣುಕಾಸ್ವಾಮಿ (Renukaswamu Murder Case) ಕೊಲೆಗಡುಕರು ಇರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ (Annapoorneshwari Police Station) ಶಾಮಿಯಾನ ಹೊದಿಸುವಂತೆ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದಾರೆ. ಅದರಂತೆ ಠಾಣೆಯ ಸುತ್ತ ಸೈಡ್ ವಾಲ್ ಗಳನ್ನ ಕಟ್ಟಿ, ಆರೋಪಿಗಳು ಕಾಣದಂತೆ ಮಾಡಲಾಗಿದೆ. ಸದ್ಯ ಆಯುಕ್ತರು ಕೂಡ ಪೊಲೀಸ್ ಠಾಣೆಯಲ್ಲಿಯೇ ಇದ್ದಾರೆ. ಜೊತೆಗೆ ಠಾಣೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿನ್ನೆಯವರೆಗೆ ಅಭಿಮಾನಿಗಳು ಠಾಣೆಯ ಮುಂದೆ ಜಮಾಯಿಸಿದ್ದರು. ಈ ವೇಳೆ ಠಾಣೆ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಆದರೆ ಇಂದು ಅಭಿಮಾನಿಗಳು ಕೂಡ ಠಾಣೆಯತ್ತ ಸುಳಿದಿಲ್ಲ. ಆದರೂ ಠಾಣೆಯ ಕಾಂಪೌಂಡ್‌ಗೆ ಶಾಮಿಯಾನ ಕಟ್ಟಿದ್ದು, ಭಾರೀ ಅನುಮಾನ ಹುಟ್ಟಿಸಿದೆ. ಮೊನ್ನೆ ಆರೋಪಿಗಳಿಗೆ ಠಾಣೆ ಒಳಗೆ ಬಿರಿಯಾನಿ ಕೊಟ್ಟಿದ್ದರು ಎಂದು ಹೇಳಲಾಗುತ್ತಿತ್ತು. ಈ ಬೆನ್ನಲ್ಲೇ ಇಂದು ಶಾಮಿಯಾನದಿಂದ ಮುಚ್ಚಿರುವುದು ಠಾಣೆ ಒಳಗಡೆ ಆರೋಪಿಗಳಿಗೆ ರಾಜಮರ್ಯಾದೆ ಕೊಡಲಾಗುತ್ತಿದೆಯಾ..? ಇವುಗಳನ್ನು ಮಾಧ್ಯಮಗಳಿಂದ ಮುಚ್ಚಿಡಲು ಈ ರೀತಿ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ನಟ ದರ್ಶನ್ ಮನೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್
ಸಾರ್ವಜನಿಕರಿಗೂ ಪ್ರವೇಶ ನಿರ್ಬಂಧಿಸಿ ಠಾಣೆ ಕ್ಲೋಸ್ ಮಾಡಲಾಗಿದೆ. ಇನ್ನೊಂದೆಡೆ ತುರ್ತು ವಿಚಾರಗಳಿಗೆ ಠಾಣೆಗೆ ಸಂಪರ್ಕ ಮಾಡಲು ಬಂದವರಿಗೂ ಪೊಲೀಸರು ಪ್ರತಿಕ್ರಿಯೆ ನೀಡುತ್ತಿಲ್ಲ. ಸಾರ್ವಜನಿಕ ಆಸ್ತಿಯಾಗಿರೋ ಪೊಲೀಸ್ ಠಾಣೆಗೆ ಸೈಡ್ ವಾಲ್ ಕಟ್ಟೋದೇನಿದೆ..!?, ಯಾರನ್ನ ಮೆಚ್ಚಿಸೋಕೆ ಪೊಲೀಸರು ಈ ಕೆಲಸ ಮಾಡುತ್ತಿದ್ದಾರೆ ಎಂಬ ಆಕ್ರೋಶದ ಪ್ರಶ್ನೆಗಳು ಎದ್ದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಮರ್ಡರ್ ಪ್ರಕರಣ ಸಂಬಂಧ ಇದೀಗ ಪೊಲೀಸರು ಸ್ಯಾಂಡಲ್‌ವುಡ್ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan), ಗೆಳತಿ ಪವಿತ್ರಾ ಗೌಡ (Pavithra Gowda) ಸೇರಿದಂತೆ 14 ಮಂದಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳೆಲ್ಲರೂ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿದ್ದು, ಇಂದು ಕೂಡ ಸ್ಥಳ ಮಹಜರು ಪ್ರಕ್ರಿಯೆ ನಡೆಯಲಿದೆ.