ಸತತ ಸೋಲುಗಳ ನಡವೆ ನಭಕ್ಕೆ ಚಿಮ್ಮಿ ಬೆಳೆದ ಅಗ್ನಿಬಾನ್ – ಏನಿದರ ವಿಶೇಷ? 

Public TV
4 Min Read
Space startup AgniKul rockets into history books with Agnibaan liftoff

ಚೆನ್ನೈ (Chennai) ಮೂಲದ ಬಾಹ್ಯಾಕಾಶ ಸ್ಟಾರ್ಟ್‍ಅಪ್ ಅಗ್ನಿಕುಲ್ ಕಾಸ್ಮೊಸ್ (Space startup AgniKul) ಇತ್ತೀಚೆಗೆ ತನ್ನ 3ಡಿ ಮುದ್ರಿತ ಸೆಮಿ-ಕ್ರಯೋಜೆನಿಕ್ ರಾಕೆಟ್ ಅಗ್ನಿಬಾನ್‌ ರಾಕೆಟ್‌ನ್ನು (Agnibaan Rocket) ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. ಉಡಾವಣೆಯನ್ನು ಶ್ರೀಹರಿಕೋಟಾದ ಲಾಂಚ್ ಪ್ಯಾಡ್‍ನಿಂದ ನಡೆಸಲಾಗಿದ್ದು, ಇದನ್ನು ಸಾಧಿಸಿದ ಭಾರತದ ಎರಡನೇ ಖಾಸಗಿ ಕಂಪನಿಯಾಗಿ ಅಗ್ನಿಕುಲ್ ಕಾಸ್ಮೋಸ್ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ಸ್ಕೈರೂಟ್ ಏರೋಸ್ಪೇಸ್ ಎಂಬ ಖಾಸಗಿ ಕಂಪನಿ 2022ರಲ್ಲಿ ವಿಕ್ರಮ್ ಎಸ್‍ನ್ನು ಕಕ್ಷೆಗೆ ಸೇರಿಸುವ ಈ ವಿಶೇಷ ಸಾಧನೆಗೈದಿತ್ತು. 

ನಾಲ್ಕು ಸೋಲುಗಳಿಗೆ ಸೋಲುಣಿಸಿದ ಐದನೇ ಯತ್ನ!

ಇದು ಅಗ್ನಿಕುಲ್ ಕಾಸ್ಮೋಸ್ ನಡೆಸಿದ 5ನೇ ಪ್ರಯತ್ನವಾಗಿತ್ತು. ಈ ಹಿಂದೆ ರಾಕೆಟ್‌ ಉಡಾವಣೆ ಮಾಡಲು 4 ಬಾರಿ ಪ್ರಯತ್ನ ನಡೆದಿತ್ತಾದರೂ ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಯಿಂದ ರದ್ದುಗೊಳಿಸಲಾಗಿತ್ತು. ಈ ಬಾರಿ 575 ಕೆಜಿ ತೂಕ ಮತ್ತು 6.2 ಮೀಟರ್ ಉದ್ದದ ರಾಕೆಟ್ ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಿ ಯಶಸ್ವಿಯಾಗಿ ಬಂಗಾಳ ಕೊಲ್ಲಿಯಲ್ಲಿ ಲ್ಯಾಂಡ್‌ ಆಯಿತು. ಪರೀಕ್ಷಾ ಹಾರಾಟವನ್ನು ಯಾವುದೇ ಲೈವ್ ಸ್ಟ್ರೀಮಿಂಗ್ ಇಲ್ಲದೆ ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಶ್ರೀಹರಿಕೋಟಾ ಉಡಾವಣಾ ಪ್ಯಾಡ್‍ನಲ್ಲಿ ಗಣ್ಯರ ಸಮ್ಮುಖದಲ್ಲಿ ಮಾಡಲಾಯಿತು.

Space startup AgniKul rockets into history books with Agnibaan liftoff 1

ಕಡಿಮೆ ಭೂಮಿಯ ಕಕ್ಷೆಯಲ್ಲಿ ಸುಮಾರು 6 ಕಿ.ಮೀ ಎತ್ತರದ ಗುರಿಯನ್ನು ತಲುಪಿದ ನಂತರ ಇದು ಸುರಕ್ಷಿತವಾಗಿ ಬಂಗಾಳ ಕೊಲ್ಲಿಯಲ್ಲಿ ಇಳಿಯಿತು. ಅರೆ-ಕ್ರಯೋಜೆನಿಕ್ ಅಗ್ನಿಲೆಟ್ ಎಂಜಿನ್‍ನಿಂದ ನಡೆಸಲ್ಪಡುವ ಏಕ-ಹಂತದ ರಾಕೆಟ್ ಇದಾಗಿತ್ತು. ಅಗ್ನಿಬಾನ್ 300 ಕೆಜಿಯ ಪೇಲೋಡ್‌ನ್ನು 700 ಕಿ.ಮೀ ಕಕ್ಷೆಗೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.ಅಲ್ಲದೇ 3ಡಿ ಪ್ರಿಂಟಿಂಗ್ ಬಳಸಿ ತಯಾರಿಸಲಾದ ಸೆಮಿ-ಕ್ರಯೋಜೆನಿಕ್ ಲಿಕ್ವಿಡ್ ಎಂಜಿನ್‍ನ ಮೊದಲ ಹಾರಾಟ ಇದಾಗಿದ್ದು ,ಇದರ ಮತ್ತೊಂದು ವಿಶೇಷವಾಗಿದೆ. 

3ಡಿ ಮುದ್ರಣ ತಂತ್ರಜ್ಞಾನ- ಸೆಮಿ-ಕ್ರಯೋಜೆನಿಕ್ ಎಂಜಿನ್

ಈ ರಾಕೆಟ್‌ ವಿಶ್ವದ ಮೊದಲ 3 ಡಿ ಮುದ್ರಿತ ಸಿಂಗಲ್ ಪೀಸ್ ಎಂಜಿನ್‌ನಿಂದ ತಯಾರಾಗಿದೆ. ಅಲ್ಲದೇ ಸೆಮಿ ಕ್ರಯೋ ಎಂಜಿನ್ ಹೊಂದಿರುವ ಭಾರತದ ಮೊದಲ ರಾಕೆಟ್‌ ಎನಿಸಿಕೊಂಡಿದೆ. ಆಗ್ನಿಲೆಟ್ ಎಂಜಿನ್ ಅರೆ-ತಂಪಾದ ದ್ರವ ಆಮ್ಲಜನಕವನ್ನು ಬಳಸುವ ವಿಶ್ವದ ಮೊದಲ ಸೆಮಿ-ಕ್ರಯೋಜೆನಿಕ್ ರಾಕೆಟ್ ಎಂಜಿನ್ ಆಗಿದೆ. ಇದನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಎಂಜಿನ್ ಸಬ್ ಕೂಲ್ಡ್ ಲಿಕ್ವಿಡ್ ಆಕ್ಸಿಜನ್ ಮತ್ತು ಏವಿಯೇಷನ್ ಟರ್ಬೈನ್ ಫ್ಯೂಯಲ್‍ ಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ರಾಕೆಟ್‌ ನಿಯಂತ್ರಣಕ್ಕೆ ನಾಲ್ಕು ಕಾರ್ಬನ್ ಸಂಯೋಜಿತ ರೆಕ್ಕೆಗಳನ್ನು ಹೊಂದಿದೆ.

ಸೆಮಿ-ಕ್ರಯೋಜೆನಿಕ್ ಎಂಜಿನ್ ತಂಪಾದ ದ್ರವ ಆಮ್ಲಜನಕವನ್ನು ಮತ್ತು ಸೀಮೆಎಣ್ಣೆ ಅಥವಾ ಎಟಿಎಫ್‍ನಂತಹ ನಿಯಮಿತ ಇಂಧನವನ್ನು ಬಳಸುತ್ತದೆ. ಕ್ರಯೋಜೆನಿಕ್ ಎಂಜಿನ್ ದ್ರವ ಆಮ್ಲಜನಕ ಮತ್ತು ದ್ರವ ಹೈಡ್ರೋಜನ್ ಎರಡನ್ನೂ ಬಳಸುತ್ತದೆ. ಇವೆರಡೂ ಅತ್ಯಂತ ತಂಪಾಗಿರುತ್ತವೆ. ಅರೆ-ಕ್ರಯೋಜೆನಿಕ್ ಎಂಜಿನ್‍ಗಳು ಕಡಿಮೆ ತಂಪಾದ ಇಂಧನವನ್ನು ಬಳಸುತ್ತದೆ ಮತ್ತು ಕ್ರಯೋಜೆನಿಕ್ ಎಂಜಿನ್‍ಗಳಿಗೆ ಹೋಲಿಸಿದರೆ ಅವುಗಳ ನಿರ್ವಹಣೆ ಮತ್ತು ಸಂಗ್ರಹಣೆ ಪ್ರಕ್ರಿಯೆ ಸರಳ ಮತ್ತು ಕಡಿಮೆ ಖರ್ಚಿನದ್ದಾಗಿದೆ.

AGNI BAAN

ಕ್ರಯೋಜೆನಿಕ್ ಎಂಜಿನ್‍ಗಳು ಸಾಮಾನ್ಯವಾಗಿ ಹೆಚ್ಚು ಶಕ್ತಿಯುತವಾಗಿರುತ್ತವೆ. ದ್ರವ ಹೈಡ್ರೋಜನ್ ಹೆಚ್ಚಿನ ಶಕ್ತಿ ಒದಗಿಸುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಇದು ದೂರದ ಕಾರ್ಯಾಚರಣೆಗಳು ಅಥವಾ ಭಾರವಾದ ಪೇಲೋಡ್‍ಗಳನ್ನು ಸುಲಭವಾಗಿ ಕಕ್ಷೆಗೆ ಸೇರಿಸಲು ಅನುಕೂಲವಾಗಲಿದೆ. ಅರೆ-ಕ್ರಯೋಜೆನಿಕ್ ಎಂಜಿನ್‍ಗಳನ್ನು ರಾಕೆಟ್‍ನ ಆರಂಭಿಕ ಹಂತಗಳಲ್ಲಿ ಅವುಗಳ ಸರಳ ನಿರ್ವಹಣೆಗಾಗಿ ಬಳಸಲಾಗುತ್ತದೆ. ಆದರೆ ಕ್ರಯೋಜೆನಿಕ್ ಎಂಜಿನ್‍ಗಳನ್ನು ನಂತರದ ಹಂತಗಳಲ್ಲಿ ಅವುಗಳ ಹೆಚ್ಚಿನ ದಕ್ಷತೆ ಮತ್ತು ಹೆಚ್ಚಿನ ಶಕ್ತಿಗಾಗಿ ಉಪಗ್ರಹಗಳನ್ನು ಉನ್ನತ ಕಕ್ಷೆಗಳಿಗೆ ಅಥವಾ ಬಾಹ್ಯಾಕಾಶಕ್ಕೆ ಸೇರಿಸಲು ಬಳಸಲಾಗುತ್ತದೆ.

ಸೆಮಿ-ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನವನ್ನು ಇಸ್ರೋ ತನ್ನ ಯಾವುದೇ ರಾಕೆಟ್‍ಗಳಲ್ಲಿ ಇದುವರೆಗೂ ಬಳಸಿಲ್ಲ. 

ಎತರ್ನೆಟ್ ಆಧಾರಿತ ಏವಿಯಾನಿಕ್ಸ್ ಸಿಸ್ಟಮ್

ಮೊದಲ ಬಾರಿಗೆ ಎತರ್ನೆಟ್ ಆಧಾರಿತ ಏವಿಯಾನಿಕ್ಸ್ ಸಿಸ್ಟಮ್ ಮತ್ತು ಸ್ವಯಂ ಪೈಲಟ್ ಸಾಫ್ಟ್‌ವೇರ್ ಬಳಸಿ ಸಂಪೂರ್ಣವಾಗಿ ಭಾರತದಲ್ಲಿ ಈ ರಾಕೆಟ್ ಅಭಿವೃದ್ಧಿಪಡಿಸಲಾಗಿದೆ. ಎತರ್ನೆಟ್ ತಂತ್ರಜ್ಞಾನವು ನೆಟ್‍ವರ್ಕ್‍ನಲ್ಲಿ ಕಂಪ್ಯೂಟರ್‌ಗಳು ಮತ್ತು ಸಾಧನಗಳನ್ನು ಸಂಪರ್ಕಿಸಲು ಬಳಸುವ ಸಾಮಾನ್ಯ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆ ಪರಸ್ಪರ ತ್ವರಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ವಾಹನದ ವಿವಿಧ ಆನ್‍ಬೋರ್ಡ್ ಸಿಸ್ಟಮ್‍ಗಳನ್ನು ಸಂಪರ್ಕಿಸಲು ಮತ್ತು ನಿಯಂತ್ರಿಸಲು ಈ ತಂತ್ರಜ್ಞಾನ ಅತ್ಯಂತ ಪ್ರಯೋಜನಕಾರಿಯಾಗಿದೆ.

Space startup AgniKul rockets into history books with Agnibaan liftoff 2

ಅಗ್ನಿಕುಲ್ ಸಂಸ್ಥೆಯ ಬಗ್ಗೆ

ಚೆನ್ನೈ ಮೂಲದ ಸ್ಟಾರ್ಟ್-ಅಪ್‌ನ್ನು 2017 ರಲ್ಲಿ ಶ್ರೀನಾಥ್ ರವಿಚಂದ್ರನ್, ಮೊಯಿನ್ ಎಸ್‌ಪಿಎಂ ಮತ್ತು ಸತ್ಯ ಚಕ್ರವರ್ತಿ ಅವರು ಸ್ಥಾಪಿಸಿದರು ಮತ್ತು ಇನ್-ಸ್ಪೇಸ್ ಉಪಕ್ರಮದ ಅಡಿಯಲ್ಲಿ ಇಸ್ರೋ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಮೊದಲ ಕಂಪನಿ ಇದಾಗಿದೆ. 

ಅಗ್ನಿಕುಲ್ ತಂಡವು 200 ಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು ಒಳಗೊಂಡಿದೆ ಮತ್ತು ಐಐಟಿ ಮದ್ರಾಸ್‌ನಲ್ಲಿ ದಹನ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಕೇಂದ್ರದೊಂದಿಗೆ ಸಂಬಂಧ ಹೊಂದಿದೆ. ಹೆಚ್ಚುವರಿಯಾಗಿ ಇಸ್ರೋದ 45 ಮಾಜಿ ವಿಜ್ಞಾನಿಗಳು ಈ ತಂಡಕ್ಕೆ ಮಾರ್ಗದರ್ಶನ ನೀಡುತ್ತಾರೆ.

ಈ ಮಹತ್ವದ ಉಡಾವಣೆಯು ಇತ್ತೀಚೆಗೆ ಪರಿಚಯಿಸಲಾದ ಭಾರತೀಯ ಬಾಹ್ಯಾಕಾಶ ನೀತಿ 2023 ರ ಅನುಷ್ಠಾನಕ್ಕೆ IN-SPAce ಮತ್ತು ಹೊಸ ಎಫ್‌ಡಿಐ ನಿಯಮಗಳ ಜೊತೆಗೆ ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮ ಮತ್ತು ಅದರ ಬೆಳೆಯುತ್ತಿರುವ ಸಾಮರ್ಥ್ಯಗಳಲ್ಲಿ ಜಾಗತಿಕ ವಿಶ್ವಾಸವನ್ನು ನಿಸ್ಸಂದೇಹವಾಗಿ ಹೆಚ್ಚಿಸಲಿದೆ.

ಅಗ್ನಿಬಾನ್‌ಗೆ ಯಶಸ್ಸಿಗೆ ಮೋದಿ ಶ್ಲಾಘನೆ

ಅಗ್ನಿಬಾನ್ ರಾಕೆಟ್‌ ಉಡಾವಣೆ ಇಡೀ ರಾಷ್ಟ್ರ ಹೆಮ್ಮೆಪಡುವ ಗಮನಾರ್ಹ ಸಾಧನೆಯಾಗಿದೆ. ವಿಶ್ವದ ಮೊದಲ ಸಿಂಗಲ್-ಪೀಸ್ 3D-ಮುದ್ರಿತ ಸೆಮಿ-ಕ್ರಯೋಜೆನಿಕ್ ಎಂಜಿನ್‌ ಅಗ್ನಿಬಾನ್ ರಾಕೆಟ್‌ನ ಯಶಸ್ವಿ ಉಡಾವಣೆಯು ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಒಂದು ಮಹತ್ವದ ಕ್ಷಣವಾಗಿದ್ದು, ನಮ್ಮ ಯುವ ಶಕ್ತಿಯ ಗಮನಾರ್ಹ ಜಾಣ್ಮೆಗೆ ಸಾಕ್ಷಿಯಾಗಿದೆ. ಈ ತಂಡದ ಮುಂದಿನ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

Share This Article