ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು, ವಿರೋಧ ಪಕ್ಷಗಳು ಸಾಕ್ಷಿ ನೀಡಲಿ: ಶಾಸಕ ದದ್ದಲ್

Public TV
1 Min Read
Basanagouda Daddal

ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ಎಚ್ಚೆತ್ತ ರಾಯಚೂರು ಗ್ರಾಮೀಣ ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ (Basanagouda Daddal) ತಮ್ಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಸಾರ್ವಜನಿಕರ ಗಮನಕ್ಕೆ ತರಲು ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿರೋಧ ಪಕ್ಷಗಳು ನನ್ನ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಹಗರಣ ನಡೆದ ಅವಧಿ ಹಾಗೂ ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. 187 ಕೋಟಿ ಹಗರಣದ ತನಿಖೆಯಲ್ಲಿ ಎಸ್ಐಟಿ ಐವರನ್ನ ಬಂಧಿಸಿದೆ. ಸಿಬಿಐ ತನಿಖೆಯು ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿ ಅಂದಿದ್ದಾರೆ, ನನ್ನ ಹೆಸರು ಹೇಳಿಲ್ಲ- ಶರಣ ಪ್ರಕಾಶ್ ಪಾಟೀಲ್ ಫಸ್ಟ್ ರಿಯಾಕ್ಷನ್

Rs 87 Crore Maharshi Valmiki Scheduled Tribe Development Corporation What is the Scam 1

ನಿಗಮದ ಹಣ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾಗಿದ್ದು, ಸಮುದಾಯದ ಅಭಿವೃದ್ಧಿಗೆ ಬಳಸಬೇಕು. ನಿಗಮದ ಹಣ ಯಾರೇ ಕಬಳಿಸಲು ಯತ್ನಿಸಿದ್ದರೂ ತನಿಖೆಯಲ್ಲಿ ಹೊರಬರುತ್ತದೆ. ಸರ್ಕಾರ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ವಿರೋಧ ಪಕ್ಷಗಳು ನನ್ನ ವಿರುದ್ದ ಮಾಡುವ ಆರೋಪಗಳಿಗೆ ಸಾಕ್ಷಿಗಳಿದ್ದರೆ ತನಿಖಾ ಸಂಸ್ಥೆಗಳಿಗೆ ಕೊಡಲಿ. ಸಾಕ್ಷಿ ಕೊಟ್ಟರೆ ತನಿಖೆಗೆ ಅನುಕೂಲವಾಗುತ್ತದೆ. ಸತ್ಯಾಂಶ ಹೊರಬರುತ್ತದೆ. ವಿರೋಧ ಪಕ್ಷಗಳು ವೃತಾ ಆರೋಪ ಮಾಡುವುದನ್ನ ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ಎಸ್‌ಟಿ ಕ್ಷೇತ್ರದಿಂದ ಚುನಾಯಿತನಾಗಿದ್ದು, ಸಮುದಾಯದ ಹಿತ ಕಾಪಾಡುವುದು ನನ್ನ ಕರ್ತವ್ಯ. ಸಮಾಜದ ಹಿತ ಕಾಪಾಡಲು ನನ್ನನ್ನ ನಿಗಮ ಅಧ್ಯಕ್ಷನಾಗಿ ಸರ್ಕಾರ ನೇಮಿಸಿದೆ. ಪಟ್ಟಭದ್ರಹಿತಾಸಕ್ತಿ ವ್ಯಕ್ತಿಗಳಿಂದ ನಿಗಮದ ಅನುದಾನ ದುರ್ಬಳಕೆಯಾಗಿರುವುದು ನನಗೆ ನೋವುಂಟು ಮಾಡಿದೆ. ಸರ್ಕಾರ ಕೂಲಂಕಷವಾಗಿ ತನಿಖೆ ನಡೆಸುತ್ತದೆ. ಆರೋಪಿಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಜರುಗಿಸುತ್ತದೆ ಎಂದು ನಂಬಿದ್ದೇನೆ. ಸದರಿ ಪ್ರಕರಣದಲ್ಲಿ ನಿಗಮದ ಅಧ್ಯಕ್ಷನಾಗಿ ನನ್ನ ಪಾತ್ರ ಏನೂ ಇಲ್ಲ. ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲು ಬಯಸುತ್ತೇನೆ. ಯಾರೇ ಏನೇ ಆರೋಪ ಮಾಡಿದ್ದರೂ ಸತ್ಯಕ್ಕೆ ದೂರವಾಗಿರುತ್ತದೆ ಎಂದು ಹೇಳಿದ್ದಾರೆ.

Share This Article