76 ದಿನ, 206 ಕಾರ್ಯಕ್ರಮ – ಪ್ರಚಾರ ಆರಂಭಿಸಿದ ಕನ್ಯಾಕುಮಾರಿಯಲ್ಲೇ ಮೋದಿ ಧ್ಯಾನ

Public TV
3 Min Read
PM Narendra Modi Mangalore Roadshow 1

– 2 ದಿನ ಧ್ಯಾನ ಮಾಡಲಿದ್ದಾರೆ 73 ವರ್ಷದ ಪ್ರಧಾನಿ
– 2019ರ ಚುನಾವಣೆಯಲ್ಲಿ 145 ಕಾರ್ಯಕ್ರಮದಲ್ಲಿ ಭಾಗಿ
– ಅತಿ ಹೆಚ್ಚು ಕ್ಷೇತ್ರಗಳಿರುವ ರಾಜ್ಯದಲ್ಲಿ ಹೆಚ್ಚು ಕಾರ್ಯಕ್ರಮ

ನವದೆಹಲಿ: ತಮಿಳುನಾಡಿನ ಕನ್ಯಾಕುಮಾರಿಯಿಂದ (Kanyakumari) ಲೋಕಸಭಾ ಚುನಾವಣೆ (Lok Sabha Election) ಪ್ರಚಾರ ಆರಂಭಿಸಿದ ಮೋದಿ (PM Narendra Modi) ಈಗ ಅದೇ ಕನ್ಯಾಕುಮಾರಿಯಲ್ಲೇ ಎರಡು ದಿನ ಧ್ಯಾನ ಮಾಡುವ ಮೂಲಕ ಈ ಬಾರಿಯ ಚುನಾವಣೆಯನ್ನು ಮುಗಿಸುತ್ತಿದ್ದಾರೆ.

ಹೌದು. ಲೋಕಸಭಾ ಚುನಾವಣೆಗೆ ಮಾರ್ಚ್‌ ಮೊದಲ ವಾರದಿಂದಲೇ ಮೋದಿ ಪ್ರಚಾರ ಆರಂಭಿಸಿದ್ದರೂ ಚುನಾವಣಾ ಆಯೋಗ (Election Commission) ಮಾರ್ಚ್‌ 16 ರಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ದೇಶಾದ್ಯಂತ ನೀತಿ ಸಂಹಿತೆ ಜಾರಿ ಮಾಡಿತ್ತು. ಅಂದೇ ಮೋದಿ ಅವರ ಕನ್ಯಾಕುಮಾರಿಯ ಪ್ರಚಾರ ಸಭೆ ನಿಗದಿಯಾಗಿತ್ತು. ಕನ್ಯಾಕುಮಾರಿಯಲ್ಲಿ ಪ್ರಚಾರ ಆರಂಭಿಸಿದ ಮೋದಿ ಮೇ 30 ರಂದು ಪಂಜಾಬ್‌ನ ಹೋಶಿಯಾಪುರ್‌ ಸಮಾವೇಶದಲ್ಲಿ ಈ ಚುನಾವಣೆಯ ಕೊನೆಯ ಪ್ರಚಾರ ಭಾಷಣ ಮಾಡಿದರು.

PM Narendra Modi Mangalore Roadshow 4

7 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಸುದೀರ್ಘ ಪ್ರಚಾರ ನಡೆಸಿದ 73 ವರ್ಷದ ಮೋದಿ ಎರಡು ದಿನ ಕನ್ಯಾಕುಮಾರಿ ವಿವೇಕಾನಂದ ಸ್ಮಾರಕದಲ್ಲಿ (Vivekananda Rock Memorial)  45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ. ಜೂನ್‌ 1  ರಂದು ಮಧ್ಯಾಹ್ನ 3 ಗಂಟೆಯವರೆಗೆ ಮೋದಿಯವರು ಕನ್ಯಾಕುಮಾರಿಯಲ್ಲೇ ಇರಲಿದ್ದಾರೆ ಎಂದು ವರದಿಯಾಗಿದೆ.

ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ಮೋದಿ 76 ದಿನಗಳಲ್ಲಿ ಒಟ್ಟು 206 ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಪೈಕಿ ಮೂರು ದಿನ ಐದು ಕಾರ್ಯಕ್ರಮ, 22 ದಿನ ನಾಲ್ಕು ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿದ್ದು ಇದೆ. ಚುನಾವಣಾ ಅವಧಿಯಲ್ಲಿ ಒಟ್ಟು 80 ಸಂದರ್ಶನಗಳನ್ನು ನೀಡಿದ್ದಾರೆ. ಮತದಾನ ಆರಂಭವಾದಾಗಿನಿಂದ ಸರಾಸರಿ ದಿನಕ್ಕೆ ಒಂದಕ್ಕಿಂತ ಹೆಚ್ಚು ಸಂದರ್ಶನ ಕೊಟ್ಟಿದ್ದಾರೆ.  ಇದನ್ನೂ ಓದಿ: ಕನ್ಯಾಕುಮಾರಿ ತಲುಪಿದ ಪ್ರಧಾನಿ ನರೇಂದ್ರ ಮೋದಿ

2019 ರ ಚುನಾವಣೆಯಲ್ಲಿ ಪ್ರಧಾನಿ ಅವರು ಸುಮಾರು 145 ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಈ ಬಾರಿ ಈ ದಾಖಲೆಯನ್ನು ಮೀರಿ ಮೋದಿ ಭರ್ಜರಿಯಾಗಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.

PM Narendra Modi Mangalore Roadshow 3

4 ರಾಜ್ಯಗಳಲ್ಲಿ ಹೆಚ್ಚು ಕಾರ್ಯಕ್ರಮ
ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಮೋದಿ ಅವರ ಹೆಚ್ಚಿನ ಕಾರ್ಯಕ್ರಮ ನಿಗದಿಯಾಗಿತ್ತು. ಉತ್ತರ ಪ್ರದೇಶದಲ್ಲಿ ಬರೋಬ್ಬರಿ 31 ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇಲ್ಲಿ 80 ಲೋಕಸಭಾ ಕ್ಷೇತ್ರಗಳಿದ್ದು 2019 ರ ಚುನಾವಣೆಯಲ್ಲಿ 64 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. ಬಿಹಾರ 20, ಮಹಾರಾಷ್ಟ್ರ 19, ಪಶ್ಚಿಮ ಬಂಗಾಳದೊಂದಿಗೆ 18 ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಂಡಿದ್ದರು.

ಒಡಿಶಾದಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ಕಾರಣ 10 ರ‍್ಯಾಲಿಯಲ್ಲಿ ಭಾಗವಹಿಸಿ ಪುರಿಯಲ್ಲಿ ದೊಡ್ಡ ರೋಡ್‌ ಶೋ ನಡೆಸಿದ್ದಾರೆ. ಮಧ್ಯಪ್ರದೇಶ 10, ಜಾರ್ಖಂಡ್ 7, ರಾಜಸ್ಥಾನ 5 ಮತ್ತು ಛತ್ತೀಸ್‌ಗಢದಲ್ಲಿ 4 ಮೋದಿ ಕಾರ್ಯಕ್ರಮ ನಿಗದಿಯಾಗಿತ್ತು.  ಇದನ್ನೂ ಓದಿ: ಕುಟುಂಬದ ಜೊತೆ ವಿಶ್ರಾಂತಿಗೆ ತೆರಳಿದ ಹೆಚ್‌ಡಿಕೆ

PM Narendra Modi Mangalore Roadshow 2

ಮೋದಿ ಅವರು ಕರ್ನಾಟಕ ಮತ್ತು ತೆಲಂಗಾಣದಲ್ಲಿ ತಲಾ 11 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಂಗಳೂರಿನಲ್ಲಿ ದೊಡ್ಡ ರೋಡ್‌ ಶೋ ನಡೆಸಿ ಮೋದಿ ಮತಯಾಚನೆ ನಡೆಸಿದ್ದರು. ತಮಿಳುನಾಡಿನಲ್ಲಿ 7 ಸೇರಿದಂತೆ ಐದು ದಕ್ಷಿಣದ ರಾಜ್ಯಗಳಲ್ಲಿ 35 ಚುನಾವಣಾ ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಿದ್ದರು.

ಪ್ರಧಾನಿಯವರ ತವರು ರಾಜ್ಯ ಗುಜರಾತ್‌ನಲ್ಲಿ 5, ಪಂಜಾಬ್‌ನಲ್ಲಿ 5, ಹರ್ಯಾಣದಲ್ಲಿ 3 ಕಾರ್ಯಕ್ರಮ, ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ತಲಾ 2 ರ‍್ಯಾಲಿ ನಡೆಸಿದರು. ಈಶಾನ್ಯ ರಾಜ್ಯಗಳಲ್ಲಿ 2 ಜಮ್ಮು ಕಾಶ್ಮೀರದಲ್ಲಿ ಒಂದು ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡಿದ್ದರು.

Share This Article