ಮುಸ್ಲಿಂ-ಹಿಂದೂ ವಿವಾಹ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯವಲ್ಲ: ಮಧ್ಯಪ್ರದೇಶ ಹೈಕೋರ್ಟ್

Public TV
2 Min Read
Madhya Pradesh High Court

ಭೋಪಾಲ್: ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ (Madhyapradesh Highcourt) ಮಹತ್ವದ ತೀರ್ಪು ನೀಡಿದೆ.

1954ರ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಅಂತರ್ ಧರ್ಮೀಯ ವಿವಾಹವನ್ನು (Inter-faith Marriage) ಮಾನ್ಯ ಮಾಡಿ ಪೊಲೀಸ್ ರಕ್ಷಣೆಗಾಗಿ ಸಲ್ಲಿಸಲಾದ ಮನವಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರ ಪೀಠವು, ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾಗಿದ್ದರೂ ಮುಸ್ಲಿಂ ಪುರುಷ (Muslim Man) ಮತ್ತು ಹಿಂದೂ ಮಹಿಳೆಯ (Hindu Woman) ನಡುವಿನ ವಿವಾಹವನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.

HINDU MUSLIM MARRIAGE

ಮೇ 27 ರಂದು ಹೈಕೋರ್ಟ್ ನೀಡಿದ ಆದೇಶದಲ್ಲಿ ಮಹಮ್ಮದೀಯ ಕಾನೂನಿನ ಪ್ರಕಾರ, ವಿಗ್ರಹಾರಾಧಕ ಅಥವಾ ಅಗ್ನಿಯನ್ನು ಪೂಜಿಸುವ ಯುವತಿಯೊಂದಿಗೆ ಮುಸ್ಲಿಂ ಯುವಕನ ವಿವಾಹವು ಮಾನ್ಯವಲ್ಲ. ದಂಪತಿ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ವಿವಾಹವನ್ನು ನೋಂದಾಯಿಸಿದರೂ ಸಹ ಇದು ಅಮಾನ್ಯ (ಫಾಸಿದ್) ಮದುವೆಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಸಿಕ್ಕಿಂನಿಂದ 150 ಕಿಮೀ ದೂರದ ಗಡಿಯಲ್ಲಿ ಚೀನಾ ಅತ್ಯಾಧುನಿಕ ಫೈಟರ್ ಜೆಟ್ ನಿಯೋಜನೆ!

ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆ ದಂಪತಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಮಹಿಳೆಯ ಮನೆಯವರು ಅಂತರ್ ಧರ್ಮೀಯ ಸಂಬಂಧವನ್ನು ವಿರೋಧಿಸಿದ್ದರು. ಯಾಕೆಂದರೆ ಮದುವೆಯಾದರೆ ಸಮಾಜದಿಂದ ಬಹಿಷ್ಕಾರ ಹಾಕುತ್ತಾರೆ ಎಂಬ ಆತಂಕ ಅವರಲ್ಲಿತ್ತು.

ದಂಪತಿ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆಯಾಗಲು ಬಯಸಿದ್ದರು. ಆದರೆ ಇಬ್ಬರೂ ಧರ್ಮ ಬದಲಾಯಿಸಲು ತಯಾರಿಲ್ಲ. ಹೀಗಾಗಿ ಮಹಿಳೆ ಹಿಂದೂ ಧರ್ಮ ಹಾಗೂ ಪುರುಷ ಮುಸ್ಲಿಂ ಧರ್ಮ ಮುಂದುವರಿಸಲಿದ್ದಾರೆ ಎಂದು ವಕೀಲರು ಕೋರ್ಟ್‍ಗೆ ತಿಳಿಸಿದರು. ಅಲ್ಲದೇ ವಿಶೇಷ ವಿವಾಹ ಕಾಯ್ದೆಯ ಅಡಿ ವಿವಾಹ ನೋಂದಣಿ ಮಾಡಿಕೊಳ್ಳಲು ಹೋಗುವಾಗ ದಂಪತಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ವಾದಿಸಿದರು.

ನಾವಿಬ್ಬರು ಧರ್ಮವನ್ನು ಬದಲಾಯಿಸಲು ಸಿದ್ಧರಿಲ್ಲ. ಆದರೆ ಮದುವೆಯನ್ನು ಮಾನ್ಯಗೊಳಿಸಬೇಕೆಂದು ದಂಪತಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿದೆ. ವಿಶೇಷ ವಿವಾಹ ಕಾಯ್ದೆಯಡಿ ವಿವಾಹವನ್ನು ಧಾರ್ಮಿಕ ವಿಧಿಗಳನ್ನು ಮಾಡದಿದ್ದಕ್ಕಾಗಿ ಪ್ರಶ್ನಿಸಲಾಗದಿದ್ದರೂ, ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಈ ವಿವಾಹವು ಮಾನ್ಯವಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Share This Article