ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

Public TV
3 Min Read
Scam In Karnataka Valmiki Development Corporation FIR Registered In High Grounds Police Station Bengaluru

– ಬ್ಯಾಂಕ್‌ ವಿರುದ್ಧ ದೂರು ನೀಡಿದ ಎಂಡಿ ರಾಜಶೇಖರ್
– ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್‌, ಮೆಸೇಜ್‌ ಬಂದಿಲ್ಲ
– ಬ್ಯಾಂಕ್‌ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಧೀಕ್ಷಕ ಚಂದ್ರಶೇಖರನ್‌ (Chandrashekaran) ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ (Union Bank of India) ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿದೆ.

ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ಯೂನಿಯನ್ ಬ್ಯಾಂಕ್ ನ ಎಂಡಿ ಹಾಗೂ ಸಿಇಓ ಮನಿಮೇಖಲೈ, ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್, ರಾಮಸುಬ್ರಮಣ್ಯಂ,‌ ಸಂಜಯ್‌ ರುದ್ರ, ಪಂಕಜ್ ದ್ವಿವೇದಿ, ಸುಶಿಚಿತ ರಾವ್ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನ ಆಧಾರದಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ವಿರುದ್ಧ ಐಪಿಸಿ ಸೆಕ್ಷನ್‌ 149 (ಒಂದೇ ಉದ್ದೇಶವನ್ನು ಇಟ್ಟುಕೊಂಡು ಗುಂಪಿನಲ್ಲಿರುವ ಪ್ರತಿಯೊಬ್ಬ ಸದಸ್ಯ ಕೃತ್ಯ ಎಸಗಿರುವುದು), 409( ಸರ್ಕಾರಿ ನೌಕರ ಅಥವಾ ಬ್ಯಾಂಕರ್‌ನಿಂದ ನಂಬಿಕೆ ದ್ರೋಹ), 420 (ವಂಚನೆ), 467 (ಬೆಲೆಯುಳ್ಳ ಭದ್ರತಾ ಪತ್ರ ಇತ್ಯಾದಿಗಳ ಸುಳ್ಳು ಸ್ಪಷ್ಟನೆ), 468 (ವಂಚಿಸುವ ಉದ್ದೇಶದಿಂದಲೇ ಸುಳ್ಳು ಸ್ಪಷ್ಟನೆ), 471(ಸುಳ್ಳು ಸ್ಪಷ್ಟನೆಯ ದಾಖಲೆಯನ್ನು ನೈಜವೆಂದು ಬಳಸುವುದು) ಅಡಿ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಐಟಿ ಕಂಪನಿ ಖಾತೆಗೆ ಅಕ್ರಮ ವರ್ಗಾವಣೆ!


ದೂರಿನಲ್ಲಿ ಏನಿದೆ?
ನಿಗಮದ ಹೆಸರಲ್ಲಿ ವಸಂತನಗರದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ಖಾತೆ ಇತ್ತು. ಫೆ.19, 2024 ರಂದು ಎಂಜಿ ರಸ್ತೆಯಲ್ಲಿರುವ ಬ್ರ್ಯಾಂಚ್‌ ಖಾತೆಯನ್ನು ವರ್ಗಾವಣೆ ಮಾಡಲಾಗಿರುತ್ತದೆ.

ಫೆ.26 ರಂದು ಬ್ಯಾಂಕಿನವರು ನಿಗಮದ ಎಂಡಿ ಹಾಗೂ ಲೆಕ್ಕಾಧಿಕಾರಿಗಳ ಸಹಿಯನ್ನು ಪಡೆದುಕೊಂಡಿರುತ್ತಾರೆ. ನಂತರ ಈ ಖಾತೆಗೆ ನಿಗಮ ಮಾರ್ಚ್‌ 3 ರಂದು 25 ಕೋಟಿ ರೂ., ಮಾರ್ಚ್‌ 6 ರಂದು 44 ಕೋಟಿ ರೂ., ಮಾರ್ಚ್‌ 21 ರಂದು 33 ಕೋಟಿ ರೂ., ಮಾರ್ಚ್‌ 22 ರಂದು 33 ಕೋಟಿ ರೂ., ಮಾರ್ಚ್‌ 21 ರಂದು 50 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿತ್ತು. ಒಟ್ಟು 187.33 ಕೋಟಿ ರೂ. ಹಣ ವರ್ಗಾವಣೆಯಾಗಿತ್ತು

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದ ಹಿನ್ನೆಲೆಯಲ್ಲಿ ಬ್ಯಾಂಕ್‌ ಜೊತೆ ನಿಗಮದಿಂದ ಯಾವುದೇ ಪತ್ರ ವ್ಯವಹಾರ ನಡೆಸಿರುವುದಿಲ್ಲ. ಹೀಗಿದ್ದರೂ ನಕಲಿ ದಾಖಲೆ ಸೃಷ್ಟಿಸಿ 94,73,08,500 ರೂ. ಹಣವನ್ನು ವರ್ಗಾವಣೆ ಮಾಡಲಾಗಿದೆ. ಇಷ್ಟೊಂದು ಹಣ ವರ್ಗಾವಣೆಯಾದರೂ ನಿಗಮದ ನೊಂದಾಯಿಸಿದ ಇಮೇಲ್‌, ಮೊಬೈಲಿಗೆ ಯಾವುದೇ ಮಸೇಜ್‌ ಬಂದಿರುವುದಿಲ್ಲ.

 

ಚಂದ್ರಶೇಖರನ್‌ ಅವರು ಬ್ಯಾಂಕ್‌ ದೃಢೀಕರಣ ಚೆಕ್‌, ಆರ್‌ಟಿಜಿಎಸ್‌, ಬ್ಯಾಂಕ್‌ ಹೇಳಿಕೆಗಳನ್ನು ಸಮನ್ವಯಗೊಳಿಸುವ ಕೆಲಸ ಮಾಡುತ್ತಿದ್ದರು. ಈ ರೀತಿ ಹಣ ವರ್ಗಾವಣೆಯಾದ ವಿಚಾರ ಗೊತ್ತಾದ ಬಳಿಕ ನಿಗಮ ಪ್ರಶ್ನೆ ಮಾಡಿದ್ದಕ್ಕೆ ಬ್ಯಾಂಕ್‌ ತಕ್ಷಣ 5 ಕೋಟಿ ರೂ. ಹಣವನ್ನು ಖಾತೆಗೆ ಹಾಕಿದೆ. ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳನ್ನು ನೀಡುವಂತೆ ಕೋರಿದ್ದು ಇಲ್ಲಿಯವರೆಗೆ ಬ್ಯಾಂಕ್‌ ಯಾವುದೇ ಸಿಸಿಟಿವಿ ದೃಶ್ಯ ನೀಡಿಲ್ಲ.

ಬ್ಯಾಂಕ್‌ನ ಲೋಪದಿಂದಲೇ ಈ ಅಕ್ರಮ ವ್ಯವಹಾರ ನಡೆದಿದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ನಡೆದ ಈ ಲೋಪಗಳಿಗೆ ಮುನ್ನೆಚ್ಚರಿಕೆ ತಗೆದುಕೊಳ್ಳುವಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾದ ಉನ್ನತ ಆಡಳಿತವೇ ಜವಾಬ್ದಾರರಾಗಿದ್ದಾರೆ. ಯಾವುದೇ ಪರಿಶೀಲನೆ ನಡೆಸದೇ ಬ್ಯಾಂಕ್‌ನಿಂದ ಓವರ್ ಡ್ರಾಫ್ಟ್‌ ಸೌಲಭ್ಯವನ್ನು ಸೃಷ್ಟಿಸಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಅಧಿಕೃತವಾಗಿ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ನಿಗಮಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಈ ಕೃತ್ಯಕ್ಕೆ ಕಾರಣದವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇನೆ.

 

Share This Article