ಚಂಡೀಗಢ: ಸೋನಿಪತ್ (Sonipat) ಜಿಲ್ಲೆಯ ರಾಯ್ ಕೈಗಾರಿಕಾ ಪ್ರದೇಶದ ರಬ್ಬರ್ ಕಾರ್ಖಾನೆಯಲ್ಲಿ (Rubber Factory) ಇಂದು ಭಾರೀ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸಿಲಿಂಡರ್‌ಗಳು (Cylinder) ಸ್ಫೋಟಗೊಂಡಿದ್ದು, 40ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ.
ಅಗ್ನಿ ಅವಘಡದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಸಿಲುಕಿದ್ದ ನೌಕರರನ್ನು ರಕ್ಷಿಸಲಾಗಿದೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಎಣ್ಣೆ ಬೇಡ ಎಂದಿದ್ದಕ್ಕೆ ಸ್ನೇಹಿತನೇ ಮನೆಯ ಟೆರೇಸ್‌ನಿಂದ ತಳ್ಳಿದ!
ಕಾರ್ಖಾನೆಯಲ್ಲಿ ರಬ್ಬರ್ ಇದ್ದ ಕಾರಣ ಬೆಂಕಿ ವೇಗವಾಗಿ ವ್ಯಾಪಿಸಿದೆ. 16 ಮಂದಿ ಕಾರ್ಮಿಕರು ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ 8 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಉನ್ನತ ಮಟ್ಟದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನೂ ಕೆಲವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ತುರ್ತು ಕರ್ತವ್ಯಕ್ಕೆ ವೈದ್ಯರನ್ನು ಕರೆಸಲಾಗಿದೆ ಎಂಬುದಾಗಿ ವರದಿಯಾಗಿದೆ.