ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ಫೋಟೋ ಹಾಗೂ ವೀಡಿಯೋಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅನುಮಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಒಳಗೆ ಇರುವ ವೀಡಿಯೋ ಹಾಗೂ ಫೋಟೋಗಳು ಅಸಲಿಯಾ? ನಕಲಿಯಾ? ಅನ್ನೋದು ಗೊತ್ತಾಗಬೇಕಿದೆ. ಚುನಾವಣೆಗಾಗಿ ಈ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಇರುವವರು ಅವರೇನಾ ಅಥವಾ ಬೇರೆ ಅವರ ಫೋಟೋ ಅಂಟಿಸಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಅನುಮಾನ ಹೊರಹಾಕಿದ್ದಾರೆ.
ಸೋಶಿಯಲ್ ಮೀಡಿಯಾಕ್ಕೆ ವೀಡಿಯೋ ಬಿಟ್ಟ ಪುಣ್ಯಾತ್ಮರು ಮಹಿಳೆಯರ ಮುಖ ಬ್ಲರ್ ಮಾಡಬೇಕಿತ್ತು. ಇದರಿಂದ ಆ ಮಹಿಳೆಯ ಮಾನ ಮರ್ಯಾದೆ ಕುಟುಂಬದ ಮರ್ಯಾದೆ ಉಳಿಯುತಿತ್ತು. ಈ ಪ್ರಕರಣದಲ್ಲಿ ಎಲ್ಲರನ್ನೂ ತನಿಖೆಗೆ ಒಳಪಡಿಸಬೇಕು. ಸಿಎಂ ಡಿಸಿಎಂ ಯಾವ ಅಧಿಕಾರಿಗಳಿಗೆ ಯಾವ ಸೂಚನೆ ಕೊಟ್ಟಿದ್ದಾರೆ?. ಯಾರ ಜೊತೆ ಸಭೆಗಳನ್ನು ಮಾಡಿದ್ದಾರೆ ಎಂದು ಹೆಚ್‍ಡಿಕೆ ಪ್ರಶ್ನೆ ಮಾಡಿದ್ದಾರೆ.
ಎಲ್ಲಾ ಮಾಹಿತಿ ನನ್ನ ಬಳಿ ಇದೆ. ಅವರ ಅಕ್ಕ-ಪಕ್ಕ ಇದ್ದವರೇ ಮಾಹಿತಿ ನೀಡಿದ್ದಾರೆ. ಅವರ ಬಳಿ ಇರುವವರು ನಮ್ಮ ಅಭಿಮಾನಿಗಳಿದ್ದಾರೆ. ಫೋನ್ ಟ್ಯಾಪಿಂಗ್ ಅನುಮಾನ ಅಲ್ಲ ಅದು ಪಕ್ಕಾ ಮಾಹಿತಿ ಎಂದು ಮೈಸೂರಿನಲ್ಲಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.