ಬೆಂಗಳೂರು: ಸಂಪುಟ ಪುನಾರಚನೆ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಸದ್ಯಕ್ಕೆ ಸಂಪುಟ ಪುನಾರಚನೆ ಇಲ್ಲ. ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ ಅಂತಾ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಮಿನಿಮಮ್ 15, ಮ್ಯಾಕ್ಸಿಮಮ್ 20 ಗೆಲ್ತೀವಿ. ಬಿಜೆಪಿ ಅವರ ರೀತಿ, ಯಡಿಯೂರಪ್ಪ ರೀತಿ 28ಕ್ಕೆ 28 ಗೆಲ್ತೀವಿ ಅಂತೇಳಲ್ಲ ಎಂದು ಬಿಎಸ್ ವೈ ರೀತಿ ಮಿಮಿಕ್ರಿ ಮಾಡಿದ್ರು.
ಇದೇ ವೇಳೆ ನೀವು ಪ್ರಧಾನ ಮಂತ್ರಿ ರೇಸ್ ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರಧಾನಿ ಅಭ್ಯರ್ಥಿ ಅಂತಾ ಕರ್ನಾಟಕದಿಂದ ಯಾರೂ ಇಲ್ಲ. ಕೇಂದ್ರದಲ್ಲಿ INDIA ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಮ್ಮ ಕಾರ್ಯಕ್ರಮಗಳ ಜಾರಿ ಆಧಾರದಲ್ಲಿ ಚರ್ಚಿಸಿ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ ಅಂತಾ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಪ್ರಜ್ವಲ್ ತಪ್ಪು ಮಾಡದೇ ಇದ್ದರೆ ಜೆಡಿಎಸ್‌ನಿಂದ ಅಮಾನತು ಮಾಡಿದ್ದು ಯಾಕೆ : ಸಿಎಂ ಪ್ರಶ್ನೆ
ಜಾತಿ ಗಣತಿಯನ್ನ (Caste Census) ಸ್ವೀಕಾರ ಮಾಡಿದ್ದೇವೆ. ನಾನು ವರದಿಯನ್ನು ನೋಡಿಯೂ ಇಲ್ಲ. ಕ್ಯಾಬಿನೆಟ್ ಮುಂದೆ ಇಟ್ಟು ಚರ್ಚೆ ಆಗಬೇಕು. ಆ ಬಳಿಕ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ ಅಂತೇಳಿದ್ರು. ಅಲ್ಲದೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನ ಮುಸ್ಲಿಮರಿಗೆ ಕಿತ್ತು ಕೊಟ್ಟಿದ್ದಾರೆ ಎಂಬುದು 100ಕ್ಕೆ 100 ಸುಳ್ಳು. ಭಾವನಾತ್ಮಕವಾಗಿ ಜನರನ್ನ ಕೆರಳಿಸಿ ವೋಟ್ ತೆಗೆದುಕೊಳ್ಳುವುದಲ್ಲ. ಹೀಗಿರುವ ಮೀಸಲಾತಿ ವ್ಯವಸ್ಥೆ ಯಥಾಸ್ಥಿತಿ ಮುಂದುವರಿಯಲಿದೆ ಅಂತಾ ಸಿಎಂ ಹೇಳಿದ್ರು.