– ಇತ್ತ ಬಳ್ಳಾರಿಯಲ್ಲಿ ಬೂದಿಗುಡ್ಡ ಸಂರಕ್ಷಣೆ ಕೂಗು
ಬಳ್ಳಾರಿ,ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ, ಸಸ್ಯಕಾಶಿ ಕಪ್ಪತ್ತಗುಡ್ಡದ ಸಂರಕ್ಷಣೆಗಾಗಿ ಹೋರಾಟ ತೀವ್ರಗೊಂಡಿದೆ. ಕಪ್ಪತ್ತಗುಡ್ಡ ಬಗೆಯಲು ಹವಣಿಸುತ್ತಿರುವ ಬಲ್ದೋಟಾ ಕಂಪನಿ ವಿರುದ್ಧದ ಹೋರಾಟಕ್ಕೆ ಹೊಸ ರೂಪು ನೀಡಲಾಗಿದೆ. ಅಹೋರಾತ್ರಿ ಧರಣಿ ಜೊತೆಗೆ ಮೂರು ದಿನಗಳ ಕಾಲ ಉಪವಾಸಕ್ಕೆ ತೀರ್ಮಾನಿಸಲಾಗಿದೆ.
ಇದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಚ್‍ಎಸ್ ದೊರೆಸ್ವಾಮಿ, ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಎಸ್.ಆರ್ ಹಿರೇಮಠ್, ತೋಂಟದಾರ್ಯ ಸ್ವಾಮೀಜಿ ಭಾಗವಹಿಸುತ್ತಿದ್ದಾರೆ. ಬೆಳಗ್ಗೆ ತೋಂಟದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ತೋಂಟದಾರ್ಯ ಮಠದಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಧರಣಿ ವೇಳೆ ಬೀದಿನಾಟಕ, ಜನಪರ ಗೀತೆ ಹಾಡಿ ಸಾರ್ವಜನಿಕರನ್ನು ಜಾಗೃತಿಗೊಳಿಸಲಾಗಿದೆ.
ಇತ್ತ ಬಳ್ಳಾರಿ ಹೊಸಪೇಟೆಯಲ್ಲೂ ಬೂದಿಗುಡ್ಡ ರಕ್ಷಣೆಗಾಗಿ ಸ್ಥಳೀಯರು ಸಿಡಿದೆದ್ದಿದ್ದಾರೆ. ತೋರಣಗಲ್ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಣೆ ಮಾಡಲಾಗ್ತಿದೆ. ಆದ್ರೆ ಈ ಕಾಮಗಾರಿಯಿಂದ ಸಾವಿರಾರು ವರ್ಷಗಳ ಇತಿಹಾಸವಿರುವ ಬೂದಿಗುಡ್ಡ ನಾಶವಾಗುವ ಪರಿಸ್ಥಿತಿ ಬಂದಿದೆ. ಹೀಗಾಗಿ ಶಿಲಾಯುಗ ಕಾಲದ ಬೂದಿಗುಡ್ಡವನ್ನು ರಕ್ಷಣೆಗಾಗಿ ಕೂಗು ಜೋರಾಗಿದೆ. ಬೂದಿಗುಡ್ಡ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸುಪರ್ದಿಗೆ ಬರುತ್ತದೆ. ಜಿಲ್ಲಾಡಳಿತ ಈ ಹಿಂದೆ ಇದರ ಸುತ್ತಮುತ್ತ ಸಂರಕ್ಷಣಾ ಗೋಡೆ ಸಹ ನಿರ್ಮಿಸಿದೆ. ಆದ್ರೆ ಈಗ ರಾಷ್ಠೀಯ ಹೆದ್ದಾರಿ ಪ್ರಾಧಿಕಾರ ಬೂದಿಗುಡ್ಡವನ್ನು ಒಡೆದು ಹಾಕಿ ರಸ್ತೆ ಅಗಲೀಕರಣಕ್ಕೆ ಮುಂದಾಗಿರೋದು ಹೇಗೆ ಅನ್ನೋದು ಎಲ್ಲರ ಪ್ರಶ್ನೆ.