ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚರಿಸುವ ಚಾಲಕರೇ ಎಚ್ಚರವಾಗಿರಿ – ಕೇವಲ 16 ದಿನದಲ್ಲಿ 12 ಸಾವಿರ ಕೇಸ್‌ ದಾಖಲು

Public TV
2 Min Read
Trial run of Artificial Intelligence based Cameras on Bengaluru Mysuru

– ಪಕ್ಕದಲ್ಲಿ ಕುಳಿತ ವ್ಯಕ್ತಿ ಸೀಟ್‌ ಬೆಲ್ಟ್‌ ಧರಿಸದೇ ಇದ್ದರೂ ಬೀಳುತ್ತೆ ಕೇಸ್‌
– ಮನೆಗೆ ಬರುತ್ತೆ ದಂಡದ ನೋಟಿಸ್‌

ಬೆಂಗಳೂರು: ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru-Mysuru Expressway) ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಚಾಲಕರೇ ಎಚ್ಚರವಾಗಿರಿ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋಗುವಾಗ ಮೈಮರೆತು ಸಂಚಾರ ನಿಯಮ ಉಲ್ಲಂಘನೆ (Traffic Rules violation) ಮಾಡಿಕೊಂಡು ಹೋಗಿರುವ ವಾಹನ ಮಾಲೀಕರ ಮೇಲೆ ಬರೋಬ್ಬರಿ 12 ಸಾವಿರಕ್ಕೂ ಅಧಿಕ ಕೇಸ್‌ ದಾಖಲಾಗಿದೆ.

ಮೇ 1 ರಿಂದ ಮೇ 16 ವರೆಗೆ ಒಟ್ಟು 12,192 ಕೇಸ್‌ಗಳು ದಾಖಲಾಗಿದೆ. ಹೆದ್ದಾರಿಯಲ್ಲಿ ಅಳವಡಿಸಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳ ಆಧಾರದ ಮೇಲೆ ಕೇಸ್ ಮಾಡಲಾಗಿದೆ.

ಅತಿಯಾದ ವೇಗ, ಚಾಲಕರು ಚಾಲಕ ಸೀಟ್ ಬೆಲ್ಟ್ ಧರಿಸದೇ ಇರುವುದು ಹಾಗೂ ಪಕ್ಕದಲ್ಲಿ ಕುಳಿತುಕೊಂಡಿರೋ ವ್ಯಕ್ತಿ ಸೀಟ್ ಬೆಲ್ಟ್ ಧರಿಸದೇ ಇರುವುದು ಈ ಎಲ್ಲಾ ಸಂಚಾರಿ ನಿಯಮ ಉಲ್ಲಂಘನೆ ಮೇಲೆ ಪೊಲೀಸರು ಸಂಬಂಧಪಟ್ಟ ಮಾಲೀಕನ ವಿಳಾಸಕ್ಕೆ ನೋಟಿಸ್ ಕಳುಹಿಸಿದ್ದಾರೆ.

ಸಂಚಾರಿ ಪೊಲೀಸರು ಕಳುಹಿಸಿದ ನೋಟಿಸ್ ತಲುಪಿದ 7 ದಿನದಲ್ಲಿ ಸಂಬಂಧಪಟ್ಟ ಸಂಚಾರಿ ಠಾಣೆಗೆ ಹೋಗಿ ದಂಡ ಪಾವತಿಸಬೇಕು. ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ದಂಡ ಕಟ್ಟದೇ ಮೊಂಡಾಟ ಮಾಡಿದರೆ 6 ತಿಂಗಳು ಜೈಲು ಅಥವಾ 5,000 ರೂ. ದಂಡ ವಿಧಿಸುವ ಎಚ್ಚರಿಕೆಯನ್ನು ನೋಟಿಸ್‌ನಲ್ಲಿ ನೀಡಲಾಗಿದೆ.  ಇದನ್ನೂ ಓದಿ: ಕೇಂದ್ರದ ಸಾಧನೆ ಹಾಡಿಹೊಗಳಿದ ರಶ್ಮಿಕಾ ಮಂದಣ್ಣಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

ಏನಿದು ತಂತ್ರಜ್ಞಾನ?
ಎಕ್ಸ್‌ಪ್ರೆಸ್‌ವೇಯಲ್ಲಿ ವೇಗ ನಿಯಂತ್ರಣಕ್ಕೆ ಪೊಲೀಸರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಮೊರೆ ಹೊಗಿದ್ದು ಎಐ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ. ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಆದೇಶದ ಮೇರೆಗೆ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (Automatic Number Plate Recognition – ANPR) ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿದೆ. ವಾಹನದ ನಂಬರ್‌ನಿಂದ ಆರ್‌ಟಿಒ ಸಂಪರ್ಕ ಪಡೆದು ಮೊಬೈಲಿಗೆ ದಂಡ ಪಾವತಿಸುವಂತೆ ನೋಟಿಸ್ ಬರುತ್ತದೆ.

ಅಪಘಾತ ಇಳಿಕೆ:
ಎಕ್ಸ್‌ಪ್ರೆಸ್‌ವೇನಲ್ಲಿ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀ ನಿಗದಿ ಪಡಿಸಲಾಗಿದೆ. ಅಷ್ಟೇ ಅಲ್ಲದೇ ರೆಡಾರ್ ಗನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ವೇಗ ಮಿತಿ ದಾಟಿದರೆ 1000 ರೂ. ದಂಡ ಹಾಗೂ ಡಿಎಲ್ ರದ್ದುಪಡಿಸುವ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ನಿಯಮ ಉಲ್ಲಂಘನೆಯ ಫೋಟೋ ಹಾಗೂ ನೋಟಿಸ್ ನೀಡಿ ದಂಡ ವಸೂಲಿ ಮಾಡಲಾಗುತ್ತಿದೆ. ಈ ಕಠಿಣ ಕ್ರಮದಿಂದಾಗಿ ಈಗ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆ ಭಾರೀ ಇಳಿಕೆಯಾಗಿದೆ.

 

Share This Article