ಸಿಎಸ್‌ಕೆಗೆ ಗುಡ್‌ನ್ಯೂಸ್‌, ಆರ್‌ಸಿಬಿಗೆ ಬ್ಯಾಡ್‌ ನ್ಯೂಸ್‌ – ಮುಂದಿನ 5 ದಿನ ಬೆಂಗ್ಳೂರಿನಲ್ಲಿ ಮಳೆ ವಾತಾವರಣ ಹೇಗಿದೆ?

Public TV
2 Min Read
CSK vs RCB 2

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಮಹಾಕಾಳಗ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 18) ನಡೆಯಲಿದೆ. ಈ ಹೈವೋಲ್ಟೇಜ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾದುಕುಳಿತಿರುವ ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳಿಗೆ (RCB Fans) ಮಳೆ ನಿರಾಸೆ ಮೂಡಿಸಲಿದೆಯೇ ಎಂಬ ಆತಂಕ ಶುರುವಾಗಿದೆ.

ಹೌದು. ಬೆಂಗಳೂರಿನಲ್ಲಿ (Bengaluru) ಮುಂದಿನ 5 ದಿನಗಳ ಕಾಲವೂ ಭಾರೀ ಮಳೆಯಾಗಲಿದ್ದು, ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಶನಿವಾರ ನಡೆಯಲಿರುವ ಆರ್‌ಸಿಬಿ VS ಚೆನ್ನೈ (RCB vs CSK) ನಡುವಿನ ನಾಕೌಟ್‌ ಪಂದ್ಯಕ್ಕೆ ಅಡ್ಡಿ ಉಂಟಾಗಲಿದೆ ಎಂದು ಹೇಳಲಾಗಿದೆ.

CSK vs RCB

5 ದಿನಗಳ ವಾತಾವರಣ ಹೇಗಿರಲಿದೆ?
ಬೆಂಗಳೂರಿನಲ್ಲಿ ಶುಕ್ರವಾರ ಗರಿಷ್ಠ 27° ಕನಿಷ್ಠ 21° ಸೆಲ್ಸಿಯಸ್‌ ತಾಪಮಾನ ಇರಲಿದೆ. ಹಾಗೆಯೇ ಶನಿವಾರ ಗರಿಷ್ಠ 28° – ಕನಿಷ್ಠ 22°, ಭಾನುವಾರ ಗರಿಷ್ಠ 28° – ಕನಿಷ್ಠ 22°, ಸೋಮವಾರ ಗರಿಷ್ಠ 28° – ಕನಿಷ್ಠ 21°, ಮಂಗಳವಾರ ಗರಿಷ್ಠ 29° – ಕನಿಷ್ಠ 21° ಸೆಲ್ಸಿಯಸ್‌ ತಾಪಮಾನ ಇರಲಿದ್ದು, ಐದು ದಿನವೂ ಭಾರೀ ಮಳೆಯಾಗಲಿದೆ (Heavy Rain). ಶನಿವಾರ ಸಂಜೆ ವೇಳೆಗೆ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಾಗಿಯೇ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆರ್‌ಸಿಬಿಗೆ ಈ ಪಂದ್ಯ ನಿರ್ಣಾಯಕವಾಗಿರುವುದರಿಂದ ರಾತ್ರಿ 8 ರಿಂದ 12 ಗಂಟೆವರೆಗೆ ಮಳೆ ಬಿಡುವುಕೊಟ್ಟರೆ ಪೂರ್ಣ ಪಂದ್ಯ ನಡೆಯಲಿದೆ.

RCB vs CSK 1

ಪಂದ್ಯವಾಡದೆಯೇ ಪ್ಲೇ ಆಫ್‌ ತಲುಪುತ್ತಾ ಸಿಎಸ್‌ಕೆ?
13 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿರುವ ಸಿಎಸ್‌ಕೆ ಉತ್ತಮ ನೆಟ್‌ ರನ್‌ರೇಟ್‌ನೊಂದಿಗೆ 3ನೇ ಸ್ಥಾನದಲ್ಲಿದೆ. ಒಂದು ವೇಳೆ ಮುಂದಿನ ಪಂದ್ಯ ಮಳೆಯಿಂದ ರದ್ದಾದರೂ ಸಿಎಸ್‌ಕೆ ಒಂದು ಅಂಕ ಪಡೆದು ಪ್ಲೇ ಆಫ್‌ ತಲುಪಲಿದೆ. ಆದ್ರೆ 13 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ 6ನೇ ಸ್ಥಾನದಲ್ಲಿದೆ. ಒಂದು ವೇಳೆ ಆರ್‌ಸಿಬಿ ರನ್‌ ಚೇಸ್‌ ಮಾಡಿದರೆ 18.1 ಓವರ್‌ಗಳ ಒಳಗೆ ಗೆಲ್ಲಬೇಕು. ಮೊದಲು ಬ್ಯಾಟ್‌ ಮಾಡಿದರೆ ಕನಿಷ್ಠ 18 ರನ್‌ಗಳಿಂದ ಗೆಲ್ಲಬೇಕು. ಆಗಷ್ಟೇ ಆರ್‌ಸಿಬಿಗೆ ಗೆಲ್ಲುವ ಅವಕಾಶವಿದೆ ಎಂದು ಕ್ರಿಕೆಟ್‌ ತಜ್ಞರು ಅಂದಾಜಿಸಿದ್ದಾರೆ. ಮಳೆಯಿಂದ ಪಂದ್ಯ ರದ್ದಾದರೆ ಒಂದು ಅಂಕದೊಂದಿಗೆ ಪ್ಲೇ ಆಫ್‌ ನಿಂದ ಹೊರಗುಳಿಯಲಿದೆ.

Chinnaswamy Stadium

ʻಸಬ್‌ ಏರ್‌ ಸಿಸ್ಟಮ್‌ʼ ಕೈ ಹಿಡಿಯುತ್ತಾ?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಿಸಬಹುದಾಗಿದೆ. ಉದಾಹರಣೆಗೆ ಒಂದು ಗಂಟೆ ಭಾರೀ ಮಳೆ ಸುರಿದರೆ ಕೇವಲ 7 ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು. ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನ ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದ್ದರಿಂದ ಮಳೆಯು 9 ಗಂಟೆ ವೇಳೆಗೆ ಬಿಡುವು ಕೊಟ್ಟರು ಕನಿಷ್ಠ ಓವರ್‌ಗಳ ಮಿತಿಯಲ್ಲಿ 9:30 ರಿಂದ ಪಂದ್ಯ ಆರಂಭಿಸಬಹುದಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

Share This Article