ಸ್ಟೆಪ್‌ಲ್ಯಾಡರ್ ಎಡವಟ್ಟು- ವಿಮಾನದಿಂದ ಇಳಿಯಲು ಯತ್ನಿಸಿ ಕೆಳಗೆ ಬಿದ್ದ ಸಿಬ್ಬಂದಿ ವೀಡಿಯೋ ವೈರಲ್‌

Public TV
1 Min Read
INDONESIA

ಜಕಾರ್ತ: ವಿಮಾನದಿಂದ ಇಳಿಯುತ್ತಿದ್ದ ಸಂದರ್ಭದಲ್ಲಿ ಸ್ಟೆಪ್‌ಲ್ಯಾಡರ್ (Stepladder) ಅನ್ನು ಮುಂದಕ್ಕೆ  ತಳ್ಳಿದ ಪರಿಣಾಮ ಸಿಬ್ಬಂದಿ‌ಯೊಬ್ಬರು ವಿಮಾನದಿಂದ ಕೆಳಗೆ ಬಿದ್ದ ಘಟನೆಯೊಂದು ಇಂಡೋನೇಷ್ಯಾದ ಜಕಾರ್ತ ವಿಮಾನ ನಿಲ್ದಾಣದಲ್ಲಿ  ನಡೆದಿದೆ.

ಸಾಮಾನ್ಯವಾಗಿ ವಿಮಾನದಿಂದ ಇಳಿಯಲು ಹಾಗೂ ಹತ್ತಲು ಕೃತಕ ಏಣಿಯನ್ನು ಬಳಸುತ್ತಾರೆ. ಅಂತೆಯೇ ಇಲ್ಲಿಯೂ ಏಣಿಯನ್ನು ಇಡಲಾಗಿದ್ದು, ಕೆಲ ಹೊತ್ತಿನ ಬಳಿಕ ಸಿಬ್ಬಂದಿ ಅಲ್ಲಿಂದ ತೆಗೆದಿದ್ದಾರೆ. ಇದನ್ನು ಗಮನಿಸದ ವಿಮಾನದ ಒಳಗಡೆ ಇದ್ದ ಸಿಬ್ಬಂದಿ ಇಳಿಯಲು ಯತ್ನಿಸಿದ್ದಾರೆ. ಮೆಟ್ಟಿಲು ಇದೆ ಎಂದು ಭಾವಿಸಿ ಕಾಲಿಟ್ಟಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

ಇಂಡೋನೇಷ್ಯಾದ ಟ್ರಾನ್ಸ್‌ನುಸಾ  ವಿಮಾನದಿಂದ (Indonesia’s Transnusa plane) ವ್ಯಕ್ತಿ ಹೊರಬರುತ್ತಿದ್ದಂತೆಯೇ ಕೆಳಗಡೆ ಇದ್ದ ಇತರ ಇಬ್ಬರು ಕಾರ್ಮಿಕರು ಸ್ಟೆಪ್‌ಲ್ಯಾಡರ್ ಅನ್ನು ಮುಂದಕ್ಕೆ ತಳ್ಳಿದ್ದಾರೆ. ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನೆಯಿಂದ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದಾಗಿ ವರದಿಯಾಗಿದೆ.

ಈ ಸಿಬ್ಬಂದಿ ವಿಮಾನದಿಂದ ಕೆಳಕ್ಕೆ ಬೀಳುತ್ತಿರುವ ವೀಡಿಯೋವನ್ನು ವೈಮಾನಿಕ ಸಲಹೆಗಾರ ಸಂಜಯ್ ಲಾಜರ್ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡ ಬಳಿಕ ನೆಟ್ಟಿಗರ ಗಮನಸೆಳೆಯಿತು. ಅಲ್ಲದೇ ಕೂಡಲೇ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದೆ. ವಿಡಿಯೋ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ.

ವೈರಲ್‌ ವೀಡಿಯೋದಲ್ಲೇನಿದೆ..?: ಹಸಿರು ಜಾಕೆಟ್ ಧರಿಸಿದ ಸಿಬ್ಬಂದಿ Airbus A320 ಒಳಗಡೆ ಇದ್ದವರ ಜೊತೆ ಮಾತನಾಡಿಕೊಂಡು ಹೊರಬರಲು ಪ್ರಯತ್ನಿಸುತ್ತಿರುತ್ತಾರೆ. ಇತ್ತ ವಿಮಾನದಿಂದ ಇಳಿಯಲು ಬಳಸುವ ಏಣಿಯನ್ನು ಇಬ್ಬರು ತಳ್ಳಿಕೊಂಡು ಹೋಗುತ್ತಿದ್ದು, ಇದೇ ಸಂದರ್ಭದಲ್ಲಿ ಸಿಬ್ಬಂದಿ ಇಳಿಯಲು ಯತ್ನಿಸಿ ಕೆಳಗೆ ಬೀಳುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಸಿಬ್ಬಂದಿ ಕೈಯಲ್ಲಿದ್ದ ಪೇಪರ್‌ಗಳು ಚೆಲ್ಲಾಪಿಲ್ಲಿಯಾಗಿ ಬೀಳುವುದನ್ನು ಕೂಡ ನಾವು ವೀಡಿಯೋದಲ್ಲಿ ಕಾಣಹುದಾಗಿದೆ.

ವಿಮಾನದ ಬಾಗಿಲು ಹಾಕದೇ ಸ್ಟೆಪ್‌ಲ್ಯಾಡರ್ ಅನ್ನು ಹೇಗೆ ತೆಗೆದರು ಎಂದು ವೀಡಿಯೋ ನೋಡಿದ ನೆಟ್ಟಿಗರು ಪ್ರಶ್ನಿಸಿದ್ದಾರೆ. ಯಾವುದೇ ಸೂಚನೆಯಿಲ್ಲದೆ ಏಣಿಯನ್ನು ತೆಗೆದುಹಾಕಲಾಗಿದೆಯೇ? ಅವರು ಸುರಕ್ಷಿತವಾಗಿದ್ದಾರೆ ಎಂದು ಭಾವಿಸುವುದಾಗಿ ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.

TransNusa ಜಕಾರ್ತದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕಡಿಮೆ-ವೆಚ್ಚದ ವಿಮಾನವಾಗಿದೆ. ದೇಶೀಯವಾಗಿ ಜೊತೆಗೆ ಚೀನಾ, ಮಲೇಷಿಯಾ ಮತ್ತು ಸಿಂಗಾಪುರಕ್ಕೆ ವಿಮಾನಗಳನ್ನು ಹೊಂದಿದೆ.

Share This Article