ಚಿತ್ರದುರ್ಗ: ಸೋಷಿಯಲ್ ಮೀಡಿಯಾದಲ್ಲಿ (Social Media) ಫೇಮಸ್ ಆಗಿ ರೀಲ್ಸ್ ಸ್ಟಾರ್ ಎನಿಸಿದ್ದ ಚಿತ್ರದುರ್ಗ (Chitradurga) ಜಿಲ್ಲೆಯ ಹೊಸದುರ್ಗದ ಗೊರವಿಕಲ್ಲು ಬಡಾವಣೆಯ ಶಿಕ್ಷಕಿ ಗೀತಾಶ್ರೀ (Geetashree) ಶವ ನೇಣು ಅವರ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗೀತಾಶ್ರೀ ನಿಗೂಢ ಸಾವು ಹಲವು ಅನುಮಾನಗಳನ್ನು ಸೃಷ್ಟಿಸಿದ್ದು, ಆಕೆಯ ಗಂಡನೇ (Husband) ಕೊಲೆಗೈದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
7 ವರ್ಷದ ಹಿಂದೆ ತುಮಕೂರು ಮೂಲದ ಗೀತಾಶ್ರೀ ಹಾಗೂ ಹೊಸದುರ್ಗದ ಪ್ರಭುಕುಮಾರ್ ವಿವಾಹವಾಗಿದ್ದರು. ಅಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ಆದರ್ಶ ದಂಪತಿಗಳಂತೆ ಪೋಸ್ ನೀಡುತ್ತಾ ಎಲ್ಲರ ಗಮನ ಸೆಳೆದಿದ್ದರು.
ವಿವಾಹದ ಸಮಯದಲ್ಲಿ ತನಗೆ ಸರ್ಕಾರಿ ಉದ್ಯೋಗವಿದೆ ಎಂದು ಪ್ರಭುಕುಮಾರ್ ಸುಳ್ಳು ಹೇಳಿದ್ದ. ಮದುವೆಯಾದ ನಂತರ ಸಂಸಾರದ ಬಂಡಿ ಸಾಗಿಸಲು ಸ್ವತಃ ಗೀತಾಶ್ರೀ ಖಾಸಗಿ ಶಾಲೆಯ ಶಿಕ್ಷಕಿಯಾಗಿ ರೀಲ್ಸ್ ಮಾಡುತ್ತಾ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಪ್ರಭುಕುಮಾರ್ ಪದೇ ಪದೇ ತವರು ಮನೆಯಿಂದ ಹಣ, ಬಂಗಾರ ತರುವಂತೆ ಕಿರುಕುಳ ನೀಡುತ್ತಾ ವರದಕ್ಷಿಣೆಯ ಬಾಕಿ ಹಣನೀಡುವಂತೆ ಹಿಂಸೆ ನೀಡುತ್ತಿದ್ದ ಎಂದು ಗೀತಾಶ್ರೀಯ ಸಹೋದರ ನಿರಂಜನ್ ಆರೋಪ ಮಾಡಿದ್ದಾರೆ.
ನಮ್ಮ ಅಕ್ಕ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡಿಲ್ಲ.ಇದು ಕೊಲೆಯೆಂಬ ಶಂಕೆಯಿದೆ. ಆದ್ದರಿಂದ ಪೊಲೀಸರು ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಪತ್ನಿಯ ಸಾವಿನ ವಿಷಯವನ್ನು ಆಕೆಯ ತವರು ಮನೆಗೆ ತಿಳಿಸಿದ ಬಳಿಕ ಪ್ರಭುಕುಮಾರ್ ಪರಾರಿಯಾಗಿದ್ದಾನೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.