ಬೇಸಿಗೆಯಲ್ಲಿ ಪ್ರವಾಸ ಮಾಡುವವರು ಅನುಸರಿಸಬೇಕಾದ ಸಲಹೆಗಳು

Public TV
3 Min Read
Summer

ಬೇಸಿಗೆ ರಜೆ ಬಂತೆಂದರೆ ಸಾಕು, ಪೋಷಕರು ತಮ್ಮ ಮಕ್ಕಳು, ಕುಟುಂಬದೊಂದಿಗೆ ಪ್ರವಾಸ ಕೈಗೊಂಡು ಎಂಜಾಯ್ ಮಾಡುತ್ತಾರೆ. ಆದರೆ ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಮನೆಯಿಂದ ಹೊರಹೋಗುವುದು ಸ್ವಲ್ಪ ಕಷ್ಟಕರವಾಗಿದೆ. ಅದರಲ್ಲೂ ಬಿಸಿಲಿನ ತಾಪದಿಂದ ಮಕ್ಕಳು ಮಾತ್ರವಲ್ಲದೇ ದೊಡ್ಡವರೂ ಸಹ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಕೆಲವೊಂದು ಟಿಪ್ಸ್ ಅನುಸರಿಸುವುದರಿಂದ ನಿಮ್ಮ ಟ್ರಿಪ್ ಅನ್ನು ಆನಂದಿಂದ ಅನುಭವಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಿದ್ರೆ ಬೇಸಿಗೆಯಲ್ಲಿ ಹೊರಹೋಗುವವರು ಅನುಸರಿಸಬೇಕಾದ ಸಲಹೆಗಳು ಯಾವುವು? ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಹೋಗಬೇಕಾದ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ:
ಪ್ರವಾಸ ಹೋಗುವುದಕ್ಕೂ ಮೊದಲು ನೀವು ಹೋಗಾಬೇಕಾದ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡರೆ ಉತ್ತಮ. ಅಲ್ಲಿನ ವಾತಾವರಣ ಹೇಗಿದೆ? ಯಾವ ಸಮಯದಲ್ಲಿ ಹೋದರೆ ಉತ್ತಮ ಎಂಬುದರ ಬಗ್ಗೆ ಮೊದಲು ಅರಿತುಕೊಳ್ಳಿ. ಎಲ್ಲಾ ಸ್ಥಳದಲ್ಲೂ ಬಿಸಿಲು ಒಂದೇ ರೀತಿಯಾಗಿ ಇರುವುದಿಲ್ಲ. ಆದ್ದರಿಂದ ನೀವು ಹೋಗಬೇಕೆಂದಿರುವ ಸ್ಥಳದಲ್ಲಿ ಬಿಸಿಲು ಯಾವ ರೀತಿಯಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದು ಬಿಸಿಲು ಕಡಿಮೆ ಇರುವ ಜಾಗವನ್ನು ಆಯ್ದುಕೊಂಡರೆ ನಿಮ್ಮ ಪ್ರವಾಸವನ್ನು ಆನಂದಿಸಬಹುದು.

SUMMER 2

ಬಿರುಬಿಸಿಲಿನಲ್ಲಿ ಸುತ್ತಾಟ ಒಳ್ಳೆಯದಲ್ಲ:
ಬಿರುಬಿಸಿಲು ಅಂದರೆ ಬಿಸಿಲು ಹೆಚ್ಚಾಗಿರುವ ಸಮಯದಲ್ಲಿ ಸುತ್ತಾಟ ನಿಮಗೆ ಮತ್ತು ನಿಮ್ಮ ಮನಸ್ಸಿಗೆ ಮುದ ನೀಡುವುದಿಲ್ಲ. ಆದ್ದರಿಂದ ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಹಾಗೂ ಸಂಜೆ 5 ಗಂಟೆಯ ಮೇಲೆ ಹೊರಹೋಗುವುದು ಒಳ್ಳೆಯದು. ಆದಷ್ಟು ಮಧ್ಯಾಹ್ನ 12-4 ಗಂಟೆಯವರೆಗಿನ ಬಿಸಿಲಿನಲ್ಲಿ ಒಡಾಡುವುದನ್ನು ಕಡಿಮೆ ಮಾಡಿ. ಇದರಿಂದ ನಿಮ್ಮ ದೇಹದಲ್ಲಿ ಚೈತನ್ಯ ಹಾಗೇ ಇರುತ್ತದೆ ಮತ್ತು ನಿಮ್ಮ ಪ್ರವಾಸವನ್ನು ಎಂಜಾಯ್‌ ಮಾಡಬಹುದಾಗಿದೆ.

WEATHER 1

ಹೆಚ್ಚಿನ ನೀರು ಸೇವನೆ:
ಬೇಸಿಗೆಯಲ್ಲಿ ಹೆಚ್ಚಿನ ನೀರು ಸೇವಿಸುವುದರಿಂದ ನಮ್ಮ ದೇಹದಲ್ಲಿ ನಿರ್ಜಲೀಕರಣ ಆಗುವುದನ್ನು ತಡೆಯಬಹುದು. ಪ್ರವಾಸದ ಸಂದರ್ಭದಲ್ಲಿ ಹೆಚ್ಚಿನ ನೀರನ್ನು ಸೇವಿಸುವುದರ ಜೊತೆಗೆ ತಂಪು ಪಾನೀಯಗಳು, ಎಳನೀರು, ಫ್ರೆಶ್‌ ಜ್ಯೂಸ್‌ ಸೇವಿಸಿ. ಇದರಿಂದ ದಣಿವಾರುವುದಲ್ಲದೇ ದೇಹದಲ್ಲಿನ ಶಕ್ತಿ ಹೆಚ್ಚಿಸಲು ಸಹಾಯವಾಗುತ್ತದೆ. ಅಲ್ಲದೇ ಶುದ್ಧವಾದ ನೀರನ್ನೇ ಸೇವಿಸಿ.

HOT WATER 1

ಬೀದಿಬದಿ ಆಹಾರ ಸೇವನೆಯನ್ನು ಕಡಿಮೆ ಮಾಡಿ:
ಪ್ರವಾಸದ ಸಮಯದಲ್ಲಿ ಎಲ್ಲೆಂದರಲ್ಲಿ ತಿನ್ನುವುದರಿಂದ ಆರೋಗ್ಯ ಹದಗೆಡಬಹುದು. ಆದ್ದರಿಂದ ಬೀದಿಬದಿ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ ಶುಚಿತ್ವದ ಕಡೆ ಗಮನಹರಿಸಿ. ಧೂಳು, ಮಾಲಿನ್ಯ ಇರುವ ಕಡೆ ಆಹಾರ ಸೇವನೆ ಒಳ್ಳೆಯದಲ್ಲ. ಇದರಿಂದ ನಿಮ್ಮ ಹಾಗೂ ನಿಮ್ಮ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. 

street food

ಎಮರ್ಜೆನ್ಸಿ ಕಿಟ್‌ ನಿಮ್ಮ ಬಳಿ ಇರಲಿ:
ಪ್ರವಾಸ ತೆರಳುವುದಕ್ಕೂ ಮೊದಲು ನಿಮ್ಮ ಬ್ಯಾಗ್‌ನಲ್ಲಿ ಎಮರ್ಜೆನ್ಸಿ ಕಿಟ್‌ ಇಟ್ಟುಕೊಳ್ಳಲೇಬೇಕು. ಪ್ರವಾಸ ತೆರಳಿದ ಸಂದರ್ಭ ನಿಮಗೆ ಮತ್ತು ನಿಮ್ಮ ಮಕ್ಕಳಿಗೆ  ಅನಾರೋಗ್ಯ ಉಂಟಾದರೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮೊದಲೇ ಮಾಡಿಕೊಳ್ಳಿ. ಗ್ಲುಕೋಸ್‌, ಒಆರ್‌ಎಸ್‌, ಪ್ಲಾಸ್ಟರ್‌, ನೋವಿನ ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳು ನಿಮ್ಮ ಬ್ಯಾಗ್‌ನಲ್ಲಿರಲಿ.

ಸನ್‌ಸ್ಕ್ರೀನ್‌ ಬಳಸಿ:
ಬಿಸಿಲಿಗೆ ಹೋಗುವ ಮೊದಲು ಸನ್‌ಸ್ಕ್ರೀನ್‌ ಹಾಗೂ ಬಾಡಿ ಲೋಶನ್ ಬಳಸುವುದು ಅತಿ ಅಗತ್ಯ. ಇದನ್ನು ಬಳಸುವ ಮೊದಲು ವೈದ್ಯರ ಬಳಿ ನಿಮ್ಮ ದೇಹಕ್ಕೆ ಯಾವರೀತಿಯ ಸನ್‌ಸ್ಕ್ರೀನ್‌ ಹೊಂದಿಕೊಳುತ್ತದೆ ಎಂಬುದನ್ನು ಪರಿಶೀಲಿಸಿ ಅವರ ಸಲಹೆಯ ಮೇರೆಗೆ ಸನ್‌ಸ್ಕ್ರೀನ್‌ಗಳನ್ನು ಬಳಸಿ. ಅಂತೆಯೇ ನಿಮ್ಮ ಮಕ್ಕಳಿಗೂ ವೈದ್ಯರ ಸಲಹೆಯಂತೆ ಸನ್‌ಸ್ಕ್ರೀನ್‌ ಕ್ರೀಮ್‌ಗಳನ್ನು ಹಚ್ಚಿ. ಇದರಿಂದ ನಿಮ್ಮ ತ್ವಚೆಯನ್ನು ಬಿಸಿಲಿನಿಂದ ಕಾಪಾಡಿಕೊಳ್ಳಬಹುದು. ಸನ್‌ಸ್ಕ್ರೀನ್‌ ಹಾಗೂ ಬಾಡಿ ಲೋಶನ್‌ಗಳನ್ನು ಬಳಸುವುದರಿಂದ ಚರ್ಮ ಒಣಗುವುದು, ಬಿರುಕು ಬಿಡುವುದನ್ನು ತಡೆಯಬಹುದು.  ‌

Sun Screen

ಬಿಸಿಲಿನಿಂದ ರಕ್ಷಣೆ ಪಡೆಯಲು ಇವುಗಳನ್ನು ಬಳಸಿ:
ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿ ಇರುವುದರಿಂದ ಬಿಸಿಲಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು. ಛತ್ರಿ, ಟೋಪಿ, ಸನ್‌ಗ್ಲಾಸ್‌ ಮುಂತಾದ ವಸ್ತುಗಳನ್ನು ಬಳಸುವುದರಿಂದ ಬಿಸಿಲಿನಿಂದ ನಿಮ್ಮ ದೇಹವನ್ನು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನೆತ್ತಿ ಸುಡುವ ಬಿಸಿಲು ತಲೆನೋವು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡಬಹುದು. ಜೊತೆಗೆ ಸೂರ್ಯನ ಕಿರಣಗಳಿಂದ ಕಣ್ಣುಗಳಿಗೂ ಹಾನಿಯಾಗಬಹುದು. ಆದ್ದರಿಂದ ಛತ್ರಿ, ಟೋಪಿಯಂತಹ ವಸ್ತುಗಳನ್ನು ಬಳಸಿ ನೆರಳನ್ನು ಪಡೆದುಕೊಳ್ಳಿ.

Summer 3

ಯಾವ ರೀತಿಯ ಬಟ್ಟೆ ಧರಿಸಿದರೆ ಉತ್ತಮ?
ಬೇಸಿಗೆಯಲ್ಲಿ ಆದಷ್ಟು ತಿಳಿಬಣ್ಣದ ಬಟ್ಟೆ ಧರಿಸಿದರೆ ಉತ್ತಮ. ಕಪ್ಪು ಬಣ್ಣದ ಬಟ್ಟೆಯನ್ನು ಆದಷ್ಟು ದೂರವಿರಿಸಿ. ಅದರಲ್ಲೂ ತೆಳ್ಳನೆಯ ಹತ್ತಿ ಬಟ್ಟೆಗೆ ಆದ್ಯತೆ ನೀಡಿ. ತುಂಬು ತೋಳಿನ, ಪಾದದವರೆಗೆ ಮುಚ್ಚಿರುವ ಬಟ್ಟೆ ಧರಿಸಿ. ಇದರಿಂದ ಚರ್ಮ ಟ್ಯಾನ್‌ ಆಗುವುದನ್ನು ತಡೆಯಬಹುದು.

Share This Article