T20 ವಿಶ್ವಕಪ್‌ ಟೂರ್ನಿ ಮೇಲೆ ಉಗ್ರರ ಕರಿನೆರಳು – ಪಾಕ್‌ನಿಂದ ಭಯೋತ್ಪಾದಕ ದಾಳಿ ಬೆದರಿಕೆ!

Public TV
2 Min Read
T20 World Cup 2

– ಜೂನ್‌ 9ರಂದು ನ್ಯೂಯಾರ್ಕ್‌ನಲ್ಲಿ ಭಾರತ – ಪಾಕ್‌ ಮುಖಾಮುಖಿ!

ವಾಷಿಂಗ್ಟನ್‌: ಐಸಿಸಿ ಟಿ20 ವಿಶ್ವಕಪ್‌ (T20 World Cup 2024) ಟೂರ್ನಿಗೆ ಕೆಲವೇ ದಿನಗಳು ಬಾಕಿಯಿದೆ. ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ವಿಶ್ವಕಪ್‌ ಟೂರ್ನಿ ನಡೆಯುತ್ತಿದ್ದು, ಚುಟುಕು ಕ್ರಿಕೆಟ್ ಕೂಟವನ್ನು ಯಶಸ್ವಿಯಾಗಿ ನಡೆಸಲು ಐಸಿಸಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹೊತ್ತಿನಲ್ಲೇ ಅದ್ಧೂರಿ ಕ್ರೀಡಾಕೂಟಕ್ಕೆ ಉಗ್ರರ ಕರಿನೆರಳು ಬಿದ್ದಿದೆ.

ಹೌದು. ಜಾಗತಿಕ ಕ್ರಿಕೆಟ್ ಟೂರ್ನಿಗೆ ಉತ್ತರ ಪಾಕಿಸ್ತಾನದದಿಂದ (North Pakistan) ಭಯೋತ್ಪಾದಕರ ದಾಳಿ ಬೆದರಿಕೆ ಬಂದಿದೆ. ಪ್ರೋ-ಇಸ್ಲಾಮಿಕ್ ಸ್ಟೇಟ್‌ನಿಂದ ಭದ್ರತಾ ಬೆದರಿಕೆ (Terror Threat) ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ಮುಂದಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‌ ತಂಡದಿಂದ ರಾಹುಲ್‌ ಬಿಟ್ಟಿದ್ದೇಕೆ? ಕೊಹ್ಲಿ ಸ್ಟ್ರೈಕ್‌ರೇಟ್‌ ಬಗ್ಗೆ ರೋಹಿತ್‌ ಹೇಳಿದ್ದೇನು?

T20 World Cup

ಇದಕ್ಕೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಸಿಇಒ ಜಾನಿ ಗ್ರೇವ್ಸ್, ನಾವು ಆತಿಥೇಯ ದೇಶಗಳು ಮತ್ತು ನಗರಗಳಲ್ಲಿನ ಅಧಿಕಾರಿಗಳೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದ್ದೇವೆ. ನಮ್ಮ ಕಾರ್ಯಕ್ರಮಕ್ಕೆ ಗುರುತಿಸಲಾದ ಅಪಾಯಗಳನ್ನು ತಗ್ಗಿಸಲು ಸೂಕ್ತವಾದ ಯೋಜನೆಗಳು ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಿಷಭ್‌ ಪಂತ್‌ ಮದುವೆಯಾಗ್ತೀರಾ? – ನೋ ಕಾಮೆಂಟ್ಸ್‌ ಎಂದು ಪಾಕ್‌ ಬೌಲರ್‌ ಹೊಗಳಿದ ಊರ್ವಶಿ ರೌಟೇಲಾ

ಈ ನಡುವೆ ಪ್ರೊ-ಇಸ್ಲಾಮಿಕ್‌ ಸ್ಟೇಟ್ಸ್‌ (IS) ಮಾಧ್ಯಮ ಮೂಲಗಳು ಕ್ರೀಡಾಕೂಟಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಅಭಿಯಾನಗಳನ್ನು ಪ್ರಾರಂಭಿಸಿವೆ. ಇದರಲ್ಲಿ ಅಫ್ಘಾನಿಸ್ತಾನ-ಪಾಕಿಸ್ತಾನ ಶಾಖೆಯ ವೀಡಿಯೊ ಸಂದೇಶಗಳು ಸೇರಿವೆ. ಇದು ಹಲವಾರು ದೇಶಗಳಲ್ಲಿ ನಡೆದ ದಾಳಿಗಳನ್ನು ಎತ್ತಿ ತೋರಿಸಿವೆ. ಅಲ್ಲದೇ ಬೆಂಬಲಿಗರನ್ನು ಅವರ ದೇಶಗಳಲ್ಲಿ ಯುದ್ಧಭೂಮಿಗೆ ಸೇರುವಂತೆ ಒತ್ತಾಯಿಸಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ.

Ind vs Pak Match

ವಿಶ್ವಕಪ್‌ ಟೂರ್ನಿ ಎಲ್ಲಿ? ಯಾವಾಗ?
ಜೂನ್‌ 1 ರಿಂದ ಜೂನ್‌ 29ರ ವರೆಗೆ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಜೂನ್‌ 9ರಂದು ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್‌-12 ಹಂತವನ್ನು ಸೂಪರ್‌-8ಗೆ ಇಳಿಸಲಾಗಿದೆ. ಸೂಪರ್‌-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಜೂನ್‌ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್‌ 19 ರಿಂದ 24ರ ವರೆಗೆ ಸೂಪರ್‌-8 ಪಂದ್ಯಗಳು, ಜೂನ್‌ 26 ಮತ್ತು ಜೂನ್‌ 27 ರಂದು ಸೆಮಿಫೈನಲ್‌ ಪಂದ್ಯಗಳು ನಡಯೆಲಿದ್ದು, ಜೂನ್‌ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

IND vs PAK 10

ಯಾವ ಗುಂಪಿನಲ್ಲಿ-ಯಾವ ತಂಡಗಳು?

ಗುಂಪು-ಎ:
ಭಾರತ, ಪಾಕಿಸ್ತಾನ, ಐರ್ಲೆಂಡ್‌, ಕೆನಡಾ, ಯುಎಸ್‌ಎ

ಗ್ರೂಪ್‌-ಬಿ:
ಇಂಗ್ಲೆಂಡ್‌, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‌ಲೆಂಡ್‌, ಒಮನ್‌

ಗ್ರೂಪ್‌-ಸಿ:
ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ

ಗ್ರೂಪ್‌-ಡಿ:
ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್‌, ನೇಪಾಳ

Share This Article