ಏನಿದು ಲುಕ್‌ಔಟ್ ನೋಟಿಸ್, ರೆಡ್ ಕಾರ್ನರ್, ಬ್ಲೂ ಕಾರ್ನರ್ ನೋಟಿಸ್? ಇವು ಹೇಗೆ ಕೆಲಸ ಮಾಡುತ್ತವೆ?

Public TV
3 Min Read
Blue Corner Notice

ಬೆಂಗಳೂರು: ದೇಶಾದ್ಯಂತ ಸದ್ಯ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ (Prajwal Pendrive Case) ಭಾರೀ ಸದ್ದು ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆಗೆ ಒಳಪಡಿಸಲು ವಿಶೇಷ ತನಿಖಾ ತಂಡ ಲುಕ್‌ಔಟ್ ನೋಟಿಸ್ ಹೊರಡಿಸಿದೆ. ಆದ್ರೆ ಪ್ರಜ್ವಲ್ ವಿದೇಶದಲ್ಲಿ ಇರೋದ್ರಿಂದ ಅವರ ಪತ್ತೆ ಮತ್ತು ಬಂಧನಕ್ಕೆ ರೆಡ್ ಕಾರ್ನರ್ ಮತ್ತು ಬ್ಲೂ ಕಾರ್ನರ್ ನೋಟಿಸ್‌ಗಳನ್ನು ಹೊರಡಿಸುವಂತೆ ಸಿಬಿಐಗೆ ಮನವಿ ಕಳುಹಿಸಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಅಷ್ಟಕ್ಕೂ ಲುಕ್ ಔಟ್ ನೋಟಿಸ್ (lookout Notice), ರೆಡ್ ಕಾರ್ನರ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ (Blue Corner Notice,) ಎಂದರೇನು? ಯಾವ ಸಂದರ್ಭದಲ್ಲಿ ಇವುಗಳನ್ನು ಬಳಕೆ ಮಾಡಲಾಗುತ್ತದೆ? ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

Blue Corner Notice 2

ಏನಿದು ಲುಕ್ ಔಟ್ ನೋಟಿಸ್?
ಕ್ರಿಮಿನಲ್ ಪ್ರಕರಣಗಳಲ್ಲಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಜಾರಿಗೊಳಿಸಲಾಗುವ ವಿಶೇಷವಾದ ನೋಟಿಸ್ ಇದಾಗಿದೆ. ಇದನ್ನು ಲುಕ್ ಔಟ್ ಸರ್ಕ್ಯೂಲರ್ (LOC) ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದನ್ನು ವಿದೇಶಾಂಗ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಬ್ಯೂರೋ ಆಫ್ ಇಮಿಗ್ರೇಷನ್ (BOI) ಜಾರಿಗೊಳಿಸುತ್ತದೆ. ಯಾವುದೇ ರಾಜ್ಯಗಳಲ್ಲಿ ಸಂಭವಿಸಿದ ಕ್ರಿಮಿನಲ್ ಪ್ರಕರಣಗಳಿಗೆ ಸಂಬAಧಿಸಿದAತೆ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆ ಹಚ್ಚಲು, ಆಯಾ ರಾಜ್ಯ ಸರ್ಕಾರಗಳ ಅಧೀನ ಕಾರ್ಯದರ್ಶಿ ಹಾಗೂ ಅದಕ್ಕೆ ತತ್ಸಮಾನ ಹುದ್ದೆಗಳಲ್ಲಿರುವ ಅಧಿಕಾರಿಗಳು ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ಮನವಿ ಸಲ್ಲಿಸಿದರೆ ಮಾತ್ರ ಇಂಥ ನೋಟಿಸ್ ಜಾರಿಗೊಳಿಸುತ್ತದೆ. ಇದಲ್ಲದೆ, ರಾಜ್ಯ ಸರ್ಕಾರಗಳು ರಚನೆ ಮಾಡುವ ವಿಶೇಷ ತನಿಖಾ ತಂಡಗಳಿಗೂ (SIT) ಇಂಥ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಅವಕಾಶವಿದೆ. ಇದು ಜಾರಿಯಾಗುತ್ತಲೇ ಆ ಆರೋಪಿಯ ಬಗೆಗಿನ ಎಲ್ಲಾ ವಿವರಗಳು, ಯಾವುದೇ ದೇಶವನ್ನು ಪ್ರವೇಶಿಸಲು ಇರುವ ಮಾರ್ಗಗಳಾದ ವಿಮಾನ ನಿಲ್ದಾಣಗಳು, ಬಂದರುಗಳು, ಅಂತಾರಾಷ್ಟ್ರೀಯ ಹೆದ್ದಾರಿಗಳ ಚೆಕ್ ಪಾಯಿಂಟ್ ಗಳನ್ನು ತಲುಪುತ್ತವೆ. ವಿದೇಶದಲ್ಲಿರುವ ಆರೋಪಿಯು ತನ್ನ ವೀಸಾ ಅವಧಿ ಮುಗಿದ ನಂತರ ಇಮಿಗ್ರೇಷನ್ ವಿಭಾಗವನ್ನು ಸಂಪರ್ಕಿಸಲೇಬೇಕು. ಆಗ ಆತನನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ.

PRAJWAL REVANNA 2 1

ಏನಿದು ಇಂಟರ್‌ಪೋಲ್ ರೆಡ್ ನೋಟಿಸ್ ಅಥವಾ ರೆಡ್ ಕಾರ್ನರ್ ನೋಟಿಸ್?
ರೆಡ್ ಕಾರ್ನರ್ ನೋಟಿಸ್ ಎನ್ನುವುದು ಹಸ್ತಾಂತರ, ಶರಣಾಗತಿ ಅಥವಾ ಅಂತಹದ್ದೇ ಕಾನೂನು ಕ್ರಮಕ್ಕೆ ಬಾಕಿ ಇರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸುವುದಕ್ಕೆ ವಿಶ್ವಾದ್ಯಂತ ಕಾನೂನು ಜಾರಿಗೊಳಿಸಲು ಮಾಡುವ ವಿನಂತಿಯಾಗಿದೆ. ಇದು ಕೋರುವ ದೇಶದಲ್ಲಿ ನ್ಯಾಯಾಂಗ ಅಧಿಕಾರಿಗಳು ನೀಡಿದ ಬಂಧನದ ವಾರಂಟ್ ಅಥವಾ ನ್ಯಾಯಾಲಯದ ಆದೇಶವನ್ನು ಇದಕ್ಕಾಗಿ ಒದಗಿಸಬೇಕು. ಆದಾಗ್ಯೂ, ಆ ವ್ಯಕ್ತಿಯನ್ನು ಬಂಧಿಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವಾಗ ಸದಸ್ಯ ರಾಷ್ಟ್ರಗಳು ತಮ್ಮದೇ ಆದ ಕಾನೂನುಗಳ ಪ್ರಕಾರ ನಡೆದುಕೊಳ್ಳುತ್ತವೆ. ರೆಡ್ ನೋಟಿಸ್ ಎಂಬುದು ಬೇಕಾಗಿರುವ ವ್ಯಕ್ತಿಗೆ (ವಾಂಟೆಡ್) ನೀಡುವ ಅಂತಾರಾಷ್ಟ್ರೀಯ ಎಚ್ಚರಿಕೆ ಮಾತ್ರ, ಇದು ಬಂಧನದ ವಾರಂಟ್ ಅಲ್ಲ. ಆದ್ದರಿಂದ ಅಗತ್ಯವಿರುವ ವ್ಯಕ್ತಿಯನ್ನು ಗುರುತಿಸಲು ಮಾಹಿತಿ, ಅವರ ಹೆಸರು, ಹುಟ್ಟಿದ ದಿನಾಂಕ, ರಾಷ್ಟ್ರೀಯತೆ, ಕೂದಲು ಮತ್ತು ಕಣ್ಣಿನ ಬಣ್ಣ, ಛಾಯಾಚಿತ್ರಗಳು ಮತ್ತು ಬೆರಳಚ್ಚುಗಳು ಲಭ್ಯವಿದ್ದರೆ ಅವುಗಳನ್ನು ಒದಗಿಸುತ್ತಾರೆ

interpol

ಏನಿದು ಬ್ಲೂ ಕಾರ್ನರ್ ನೋಟಿಸ್?
ವಿದೇಶಗಳಲ್ಲಿ ಅಡಗಿಕೊಂಡಿರುವ ಆರೋಪಿಗಳ ಮಾಹಿತಿ ಸಂಗ್ರಹಕ್ಕೆ ಇಂಟರ್‌ಪೋಲ್‌ಗಳ ಮೂಲಕ ಹೊರಡಿಸುವ ನೋಟಿಸ್ ಇದಾಗಿದೆ. ಇಂಟರ್‌ಪೋಲ್ ತನ್ನ ಸದಸ್ಯ ರಾಷ್ಟ್ರಗಳಲ್ಲಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿ ಆರೋಪಿಯ ಗುರುತು, ಸ್ಥಳ, ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕುತ್ತದೆ. ಇಂಟರ್ ಪೋಲ್ ಒಟ್ಟು 7 ರೀತಿಯ ನೋಟಿಸ್‌ಗಳನ್ನು ನೀಡಬಹುದು. ಅದರಲ್ಲಿ ಬ್ಲೂ ಕಾರ್ನರ್ ನೋಟಿಸ್ ಆರೋಪಿಯ ವಿರುದ್ಧ ಮಾಹಿತಿ ಸಂಗ್ರಹಕ್ಕೆ, ರೆಡ್ ಕಾರ್ನರ್ ಬಂಧನಕ್ಕೆ, ಯೆಲ್ಲೋ ಕಾರ್ನರ್ ನೋಟಿಸ್ ನಾಪತ್ತೆಯಾದವನ ಪತ್ತೆಗೆ ಬಳಸಲಾಗುತ್ತದೆ. ಆದ್ರೆ ಭಾರತದಲ್ಲಿ ಇಂಟರ್ ಪೋಲ್‌ಗೆ ಸಿಬಿಐ ನೋಡಲ್ ಏಜೆನ್ಸಿಯಾಗಿದ್ದು, ಯಾವುದೇ ತನಿಖಾ ಸಂಸ್ಥೆಗಳು ನೋಟಿಸ್ ನೀಡಲು ಮೊದಲು ಸಿಬಿಐಗೆ ಮನವಿ ಸಲ್ಲಿಸಬೇಕಾಗುತ್ತದೆ.

Share This Article