ಧಾರವಾಡ: ಒಂದು ಕಡೆ ಮಗುವನ್ನು ನೋಡಿಕೊಳ್ಳಬೇಕು. ಇನ್ನೊಂದು ಕಡೆ ಆಟವಾಡಬೇಕು, ಗೆಲ್ಲಬೇಕು ಎನ್ನುವ ತವಕ. ಹಾಕಿ ಆಡುವುದರ ಜೊತೆಗೆ ತನ್ನ ಮಗುವನ್ನ ಸಂಭಾಳಿಸುತ್ತಿರುವ ತಾಯಿಯ ದೃಶ್ಯ ಧಾರವಾಡದಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಡು ಬಂತು.
ರಾಜ್ಯ ಒಲಂಪಿಕ್ ಕ್ರೀಡಾಕೂಟದ ಹಾಕಿ ತಂಡದಲ್ಲಿ ಆಡುತ್ತಿರುವ ಬಳ್ಳಾರಿ ತಂಡದ ಸಯೀದಾ ಅವರ ಕಥೆಯಿದು. ರಾಷ್ಟ್ರಮಟ್ಟದ ಹಾಕಿ ಕ್ರೀಡಾಪಟುವಾಗಿರುವ ಇವರು ಮೂರು ವರ್ಷಗಳ ನಂತರ ಮತ್ತೆ ಹಾಕಿ ತಂಡದಲ್ಲಿ ಆಡಲು ಬಂದಿದ್ದಾರೆ. 10 ತಿಂಗಳ ಮಗು ಜೊತೆ ಧಾರವಾಡದಕ್ಕೆ ಬಂದಿರುವ ಇವರು ಮಗುವಿನ ಆರೈಕೆಯ ಜೊತೆಗೆ ಹಾಕಿ ಆಟವನ್ನು ಆಡುತ್ತಿದ್ದಾರೆ.
ಕಳೆದ 13 ವರ್ಷಗಳಿಂದ ಹಾಕಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಸಯೀದಾ ಹಾಕಿಗಾಗಿ ಮಗುವನ್ನ ಬಿಟ್ಟಿಲ್ಲ. ಹಾಗೇ ಮಗುವಿಗಾಗಿ ಹಾಕಿಯನ್ನ ಬಿಡಲಿಲ್ಲ. ಎರಡನ್ನೂ ಒಟ್ಟಿಗೆ ನಿಭಾಯಿಸುತ್ತಿದ್ದಾರೆ. ಸಯೀದಾ ಅವರು ಆಟದ ಜೊತೆಯಲ್ಲೇ ತನ್ನ ಮಗುವನ್ನ ನೋಡಿಕೊಳ್ಳುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಸಯೀದಾ ಅವರಿಗೆ ಎರಡು ಮಕ್ಕಳಿವೆ. 3 ವರ್ಷದ ಮಗನನ್ನ ಬೆಂಗಳೂರಿನ ಪತಿಯ ಮನೆಯಲ್ಲಿ ಬಿಟ್ಟು ಬಂದಿದ್ದಾರೆ. ಆಟದ ಮಧ್ಯದಲ್ಲಿ ಮಗುಗೆ ಹಾಲುಣಿಸುತ್ತಲೇ ಆಟದ ಮೈದಾನಕ್ಕೆ ಇಳಿಯುತ್ತಾರೆ. ಕಳೆದ 3 ವರ್ಷಗಳಿಂದ ಆಟವಾಡದೇ ಇದ್ರೂ, ಈಗಲೂ ಮೊದಲಿನಷ್ಟು ಹುಮ್ಮಸ್ಸು, ಆಟ ಗೆಲ್ಲಿಸುವ ಶಕ್ತಿ ಇದ್ದೇ ಇದೆ. ಇನ್ನು ಸಯೀದಾ ಹಾಕಿ ತಂಡಕ್ಕೆ ಮರಳಿದ್ದರಿಂದ ಉಳಿದ ಆಟಗಾರರಿಗೆ ಆನೆ ಬಲ ಬಂದಂತಾಗಿದೆ ಎಂದು ಸಯೀದಾರ ಸಹ ಹಾಕಿ ಆಟಗಾರರು ಹೇಳುತ್ತಾರೆ.
ಈಗಾಗಲೇ ಬಳ್ಳಾರಿ ತಂಡ ಹಾಸನ ತಂಡದ ಜೊತೆ ಗೆಲುವು ಸಾಧಿಸಲು ಸಯೀದಾನೇ ಕಾರಣವಾಗಿದ್ದಾರೆ. ಮುಂದೆ ಇನ್ನೂ ಹಲವು ಜಿಲ್ಲೆಗಳ ಜೊತೆ ಇವರು ಸೆಣಸಲಿದ್ದಾರೆ.