ಅಪರಾಧಿ ಮುಸ್ಲಿಂ ಆಗಿದ್ದರೆ ಮಾತ್ರ ಮಹಿಳಾ ರಕ್ಷಣೆ ಬಗ್ಗೆ ಜನರು ಮಾತನಾಡುತ್ತಾರೆ ಎಂದು ಹೇಳುವ ಮೂಲಕ ಪ್ರಜ್ವಲ್ ರೇವಣ್ಣ ಪ್ರಕರಣದ ವಿಶ್ಲೇಷಣೆ ಮಾಡಿದ್ದಾರೆ ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ (Swara Bhaskar). ತಪ್ಪು ಮಾಡಿರುವ ವ್ಯಕ್ತಿ ಯಾವ ಧರ್ಮದವನು ಎನ್ನುವುದರ ಮೇಲೆ ಹೋರಾಟಗಳು ಆಗುತ್ತವೆ ಎಂದು ಮಾತನಾಡಿದ್ದಾರೆ. ಪ್ರಜ್ವಲ್ ಜಾಗದಲ್ಲಿ ಮುಸ್ಲಿಂ ವ್ಯಕ್ತಿ ಇದ್ದಿದ್ದರೆ ಹೋರಾಟ ಬೇರೆಯ ಸ್ವರೂಪವನ್ನೇ ಪಡೆದುಕೊಳ್ಳುತ್ತಿತ್ತು ಎಂದಿದ್ದಾರೆ ಸ್ವರಾ.
ಶಿವರಾಜ್ ಕುಮಾರ್ ನಟನೆಯ ಬಂಧು ಬಳಗ ಸಿನಿಮಾ ಸೇರಿದಂತೆ ನಾನಾ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಪೂನಂ ಕೌರ್ (Poonam Kaur) ಸಿಡಿದೆದ್ದಿದ್ದಾರೆ. ಪ್ರಜ್ವಲ್ ರೇವಣ್ಣರಂಥ ನೀಚ ವ್ಯಕ್ತಿಗಳನ್ನು ಗೆಲ್ಲಿಸಬೇಕಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ದೇಶದಾದ್ಯಂತ ಪ್ರಜ್ವಲ್ ಅವರ ವಿಡಿಯೋ ಎನ್ನಲಾದ ವಿಡಿಯೋಗಳು ಹರಿದಾಡುತ್ತಿವೆ. ಈ ಸಂದರ್ಭದಲ್ಲಿ ಪೂನಂ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮಹಿಳೆಯರಿಗೆ ಬೆದರಿಕೆ ಹಾಕಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವಿರಾರು ವಿಡಿಯೋಗಳು (Video) ಹರಿದಾಡುತ್ತಿವೆ. ಹಣ ಮತ್ತು ರಾಜಕೀಯ ಕಾರಣದಿಂದಾಗಿ ಅವರು ತಪ್ಪಿಸಿಕೊಂಡು ಹೋಗಿದ್ದಾರೆ. ಜರ್ಮನಿಯಲ್ಲಿ ಪ್ರಜ್ವಲ್ ನೆಮ್ಮದಿಯಾಗಿದ್ದಾರೆ. ಇವರಿಗೆ ಶಿಕ್ಷೆ ಆಗಬೇಕು ಎಂದರೆ ಜನರು ತಿರುಗಿ ಬೀಳಬೇಕು ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ (Prajwal Revanna) ಅವರ ಮೇಲಿನ ಆರೋಪ ರಾಜಕೀಯವಾಗಿಯೂ ನಾನಾ ರೀತಿಯ ತಿರುವು ಪಡೆದುಕೊಳ್ಳುತ್ತದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿ ಮತ್ತು ಜೆಡಿಎಸ್ ಮೇಲೆ ಮುಗಿಬಿದ್ದಿವೆ. ಸ್ವತಃ ಕೇಂದ್ರದ ಗೃಹ ಸಚಿವರು ಕೂಡ ಈ ಕುರಿತಂತೆ ಮಾತನಾಡಿದ್ದಾರೆ. ಹಾಗಾಗಿ ಪ್ರಜ್ವಲ್ ರೇವಣ್ಣ ಪ್ರಕರಣ ದೇಶದಾದ್ಯಂತ ಕಾವು ಹೆಚ್ಚಿಸಿದೆ.