ಮತ ಹಾಕಲು ಬಂದಾಗ ಹೃದಯ ಸ್ತಂಭನ- ಮಹಿಳೆಯ ಪ್ರಾಣ ಉಳಿಸಿದ ವೈದ್ಯರು

Public TV
1 Min Read
DOCTOR

ಬೆಂಗಳೂರು: ಲೋಕಸಭಾ ಚುನಾವಣೆಯ (Loksabha Elections 2024) ಮೊದಲ ಹಂತದ ಮತದಾನ ಅತ್ಯಂತ ಬಿರುಸಿನಿಂದ ನಡೆಯುತ್ತಿದೆ. ಸೆಲೆಬ್ರಿಟಿಗಳು, ವೃದ್ಧರು ಸೇರಿದಂತೆ ಮತದಾರರು ಬೇಗಬೇಗನೇ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಮತದಾನ ಮಾಡಲು ಬಂದಾಗ ಮಹಿಳೆಯೊಬ್ಬರಿಗೆ ಹೃದಯ ಸ್ತಂಭನವಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ಆಕೆಯ ಜೀವವನ್ನು ಉಳಿಸಿದ್ದಾರೆ.

ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ತಜ್ಞ ವೈದ್ಯ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ಜೆ.ಪಿ.ನಗರ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ 50 ವರ್ಷ ಆಸುಪಾಸಿನ ಮಹಿಳೆಯೊಬ್ಬರು ಏಕಾಏಕಿ ಕುಸಿದುಬಿದ್ದರು. ಈ ವೇಳೆ ಅಲ್ಲೇ ಇದ್ದ ಕೆಲವರು ಮಹಿಳೆಗೆ ನೀರು ಕುಡಿಸಿದರು. ಈವಿಚಾರ ಡಾ. ಗಣೇಶ್‌ ಗಮನಕ್ಕೆ ಬರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾಗಿ ಮಹಿಳೆಯ ಪ್ರಾಣವನ್ನು ಉಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 38.23% ಮತದಾನ -ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಮತದಾನ

ಬಳಿಕ ಮಾತನಾಡಿದ ವೈದ್ಯ, ಮಹಿಳೆ ಕುಸಿದು ಬೀಳುತ್ತಿದ್ದಂತೆಯೇ ಅವರ ನಾಡಿಮಿಡಿತವನ್ನು ಪರಿಶೀಲಿಸಿದೆ. ಅವರ ದೇಹವು ಯಾವುದೇ ಪ್ರತಿಕ್ರಿಯೆಯನ್ನು ತೋರಿಸಲಿಲ್ಲ. ಜೊತೆಗೆ ಅವರಿಗೆ ಉಸಿರುಗಟ್ಟುತ್ತಿತ್ತು. ನಾನು ತಕ್ಷಣ CPR ಮಾಡಿದ್ದೇನೆ. ಬಳಿಕ ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದರು. ನಂತರ ಅಂಬುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಸದ್ಯ ಅವರ ಸ್ಥಿತಿ ಸುಧಾರಿಸಿದೆ. ಸ್ವಲ್ಪ ತಡವಾಗುತ್ತಿದ್ದರೂ ಹೆಚ್ಚು ಕಡಿಮೆ ಆಗುತ್ತಿತ್ತು ಎಂದು ಅವರು ತಿಳಿಸಿದರು.

Share This Article