IPL 2024: ಕೊನೇ ಓವರ್ ಥ್ರಿಲ್ಲರ್ – ರೋಚಕ ಪಂದ್ಯದಲ್ಲಿ ಡೆಲ್ಲಿಗೆ 4 ರನ್‌ಗಳ ಜಯ; ಹೋರಾಡಿ ಸೋತ ಟೈಟಾನ್ಸ್!

Public TV
2 Min Read
Rishabh Pant

ನವದೆಹಲಿ: ರಶೀದ್ ಖಾನ್ ಅವರ ಸಿಕ್ಸರ್, ಬೌಂಡರಿ ಆಟದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

ಕೊನೇ ಓವರ್ ಥ್ರಿಲ್ಲಿಂಗ್?
ಕೊನೇ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ರಶೀದ್ ಖಾನ್ ಮೊದಲ 2 ಎಸೆತಗಳಲ್ಲಿ ಭರ್ಜರಿ ಬೌಂಡರಿ ಬಾರಿಸಿದ್ದರು. 3-4ನೇ ಎಸೆತದಲ್ಲಿ ರನ್ ಕದಿಯುವಲ್ಲಿ ವಿಫಲರಾದರು. 2 ಎಸೆತಗಳಲ್ಲಿ 11 ರನ್ ಬೇಕಿದ್ದಾಗಲೇ 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದರು, ಇದರಿಂದ ಕೊನೇ ಕ್ಷಣದವರೆಗೂ ಗುಜರಾತ್‌ಗೆ ಗೆಲುವಿನ ಆಸೆ ಜೀವಂತವಾಗಿತ್ತು. ಆದ್ರೆ ಕೊನೇ ಎಸೆತದಲ್ಲಿ ಬೌಂಡರಿಗೆ ಯತ್ನಿಸಿದ ರಶೀದ್ ಖಾನ್ ಒಂದು ರನ್ ಕದಿಯುವಲ್ಲಿ ಮಾತ್ರ ಸಫಲರಾದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್‌ಗೆ 4 ರನ್‌ಗಳ ರೋಚಕ ಗೆಲುವು ಸಿಕ್ಕಿತು.

GT vs DC

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಚೇಸಿಂಗ್ ಆರಂಭಿಸಿದ ಗುಜರಾತ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಉತ್ತಮ ರನ್ ಕಲೆಹಾಕಿತ್ತು. ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ನೆರವಾಗಿತ್ತು. ಇವರಿಬ್ಬರ ವಿಕೆಟ್ ಉರುಳುತ್ತಿದ್ದಂತೆ ರನ್ ವೇಗವೂ ಕಡಿಮೆಯಾಯಿತು.

ಟೈಟಾನ್ಸ್ ಪರ ಸಾಯಿ ಸುದರ್ಶನ್ 65 ರನ್ (39 ಎಸೆತ, 2 ಸಿಕ್ಸರ್, 7 ಬೌಂಡರಿ), ಡೇವಿಡ್ ಮಿಲ್ಲರ್ 55 ರನ್ (23 ಎಸೆತ, 3 ಸಿಕ್ಸರ್, 6 ಬೌಂಡರಿ), ವೃದ್ಧಿಮಾನ್ ಸಾಹಾ 39 ರನ್, ಶುಭಮನ್ ಗಿಲ್ 6 ರನ್, ಅಜ್ಮತುಲ್ಲಾ ಒಮರ್ಜಾಯ್ 1 ರನ್, ಎಂ. ಶಾರೂಖ್ ಖಾನ್ 8 ರನ್, ರಾಹುಲ್ ತೆವಾಟಿಯಾ 8 ರನ್, ಸಾಯಿ ಕಿಶೋರ್ 13 ರನ್, ರಶೀದ್ ಖಾನ್ 21 ರನ್ ಗಳಿಸಿದರು.

GT vs DC 2

ಟಾಸ್ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಫೋಟಕ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದ 200 ರನ್‌ಗಳ ಗಡಿ ತಲುಪುವುದೂ ಕಷ್ಟವಾಗಿತ್ತು. ಆದ್ರೆ ಕೊನೇ 2 ಓವರ್‌ಗಳಲ್ಲಿ ರಿಷಭ್ ಪಂತ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಕೊನೇ 10 ಎಸೆತಗಳಲ್ಲಿ ಸ್ಟಬ್ಸ್ ಮತ್ತು ಪಂತ್ ಜೋಡಿ ಬರೋಬ್ಬರಿ 51 ರನ್ ಚಚ್ಚಿತ್ತು. ಇದರಲ್ಲಿ ಬರೋಬ್ಬರಿ 6 ಸಿಕ್ಸರ್ ಹಾಗೂ 3 ಬೌಂಡರಿಗಳೂ ಸೇರಿದ್ದವು.

Sai Sudharsan David Miller

ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ 88 ರನ್ (43 ಎಸೆತ, 8 ಸಿಕ್ಸರ್, 5 ಬೌಂಡರಿ), ಅಕ್ಷರ್ ಪಟೇಲ್ 66 ರನ್ (43 ಎಸೆತ, 4 ಸಿಕ್ಸರ್. 5 ಬೌಂಡರಿ), ಟ್ರಿಸ್ಟಾನ್ ಸ್ಟಬ್ಸ್ 26 ರನ್ (2 ಸಿಕ್ಸರ್, 3 ಬೌಂಡರಿ), ಜೇಕ್ ಫ್ರೇಸರ್-ಮ್ಯಾಕ್‌ಗಾರ್ಕ್ 23 ರನ್, ಪೃಥ್ವಿ ಶಾ 11 ರನ್, ಶಾಯ್ ಹೋಪ್ 5 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ಪರ ಮಾರಕ ದಾಳಿ ನಡೆಸಿದ ಸಂದೀಪ್ ವಾರಿಯರ್ಸ್ 3 ವಿಕೆಟ್ ಕಿತ್ತರೆ, ನೂರ್ ಅಹ್ಮದ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

Share This Article