ಧಾರವಾಡ: ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಕೊಲೆ ಪ್ರಕರಣದ ಆರೋಪಿ ಫಯಾಜ್‍ನನ್ನು ಇಂದು ಸಿಐಡಿ (CID) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಆರು ದಿನಗಳ ಕಾಲ ಫಯಾಜ್‍ನನ್ನು ಸಿಐಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಧಾರವಾಡ ಜೈಲಿನಿಂದ ವಶಕ್ಕೆ ಪಡೆದ ಬಳಿಕ ತಮ್ಮ ಬೊಲೆರೋ ವಾಹನದಲ್ಲಿ ಕರೆದುಕೊಂಡು ಹೋದರು. ಈ ವೇಳೆ ಎರಡು ಕ್ರೂಸರ್ ವಾಹನದಲ್ಲಿ ಪ್ರತ್ಯೇಕವಾಗಿ ಭದ್ರತಾ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದರು.
ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದ ಬಳಿಕ ಜೈಲಿನಿಂದ ನೇರವಾಗಿ ತಪಾಸಣೆಗೆ ಕರೆತರಲಾಯಿತು. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆತನ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ತಪಾಸಣೆಯ ಬಳಿಕ ಸಿಐಡಿ ಅಧಿಕಾರಿಗಳು ಫಯಾಜ್‍ನನ್ನು (Fayaz) ಹುಬ್ಬಳ್ಳಿ ಬಿವಿಬಿ ಕ್ಯಾಂಪಸ್‍ಗೆ ಕರೆದೊಯ್ದರು. ಅಧಿಕಾರಿಗಳು ಹುಬ್ಬಳ್ಳಿಯ ಬಿವಿಬಿ ಕಾಲೇಜಿಗೆ ಆಗಮಿಸುತ್ತಿದ್ದಂತೆಯೇ ಕಾಲೇಜಿನ ಸುತ್ತಮುತ್ತ ಬಿಗಿಪೊಲೀಸ್ ಬಂದೋಬಸ್ತ್ ಒದಗಿಸಲಾಯಿತು. ಅಲ್ಲಿ ಸ್ಥಳ ಮಹಜರು ನಡೆಸಲಾಯಿತು. ಈ ವೇಳೆ ಎಡಿಜಿಪಿ ಬಿ.ಕೆ ಸಿಂಗ್ ಹಾಜರಿದ್ದರು.
ಕೊಲೆ ನಡೆದ ಸ್ಥಳದಲ್ಲಿಯೇ ಅಧಿಕಾರಿಗಳು 3 ಗಂಟೆ ತನಿಖೆ ನಡೆಸಿದರು. ಸ್ಥಳ ಮಹಜರು ಜೊತೆಗೆ ಮಹತ್ವದ ವಿಚಾರಣೆಯನ್ನು ಸಹ ಮಾಡಿದ್ದಾರೆ. ಇದಾದ ಬಳಿಕ ಧಾರವಾಡ ನಗರಕ್ಕೆ ಬಾರದೇ ಅಧಿಕಾರಿಗಳು ಫಯಾಜ್‍ನನ್ನು ನೇರವಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ಅಜ್ಞಾತ ಸ್ಥಳದಲ್ಲೇ ಫಯಾಜ್ ಹೆಚ್ಚಿನ ವಿಚಾರಣೆಯನ್ನು ಅಧಿಕಾರಿಗಳು ನಡೆಸಲಿದ್ದಾರೆ. ಇದನ್ನೂ ಓದಿ: 9 ಅಲ್ಲ 14 ಬಾರಿ ನೇಹಾಳನ್ನು ಇರಿದು ಕೊಂದ ಫಯಾಜ್- ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನಿದೆ?