ಬೆಂಗಳೂರು: ಪೊಲೀಸರು ಅಂದ್ರೆ ಕಾನೂನು ಸುವ್ಯವಸ್ಥೆ ಕಾಪಾಡುವಂತವರು. ಲಾ & ಆರ್ಡರ್ ಆಗ್ಲಿ ಟ್ರಾಫಿಕ್ ಆಗ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿ ನೋಡಿಕೊಳ್ಳಲು ಹರಸಾಹಸ ಪಡ್ತಾರೆ. ಆದರೆ ಇಲ್ಲಿ ಪೊಲೀಸರೇ ಅಮಾನವೀಯವಾಗಿ ವರ್ತಿಸಿದ್ದಾರೆ.
ಹೌದು. ನಗರದಲ್ಲಿ ಬಿರು ಬಿಸಿಲು ಇನ್ನಿಲ್ಲದೇ ಕಾಡುತ್ತಿದೆ. ಇಂತಹ ಬಿಸಿಲಲ್ಲಿಯೂ ತಮ್ಮ ಜೀವನ ನಡೆಸಲು ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡ್ತಾರೆ. ಇನ್ನು ನಮ್ಮ ಟ್ರಾಫಿಕ್ ಪೊಲೀಸರು ಸಹ ಬಿಸಿಲು ಮಳೆ ಎನ್ನದೇ ಶ್ರಮವಹಿಸ್ತಾರೆ. ಅದ್ರಲ್ಲಿ ನೋ ಡೌಟ್. ಆದರೆ ಕೆಆರ್ ಮಾರ್ಕೆಟ್ ನಲ್ಲಿ (KR Market) ತಳ್ಳುವ ಬಂಡಿ ಮೇಲೆ ಸೀಬೆ ಹಣ್ಣು ಮಾರುತ್ತಿದ್ದ ಹಿರಿಯ ವ್ಯಾಪಾರಿಯ ತಳ್ಳುವ ಗಾಡಿ ತಳ್ಳಿ, ಸೊಪ್ಪಿನ ಚೀಲವನ್ನ ನೆಲಕ್ಕೆ ಚೆಲ್ಲಿದ ವರ್ತನೆಯನ್ನು ಯಾರೂ ಸಹಿಸಲು ಆಗಲ್ಲ. ಆ ಸಂಪೂರ್ಣ ಘಟನೆ ನಿಮ್ಮ ಪಬ್ಲಿಕ್ ಟಿವಿ ಕ್ಯಾಮೆರಾದ ಕಣ್ಣಿಗೆ ಬಿದ್ದಿದೆ.
ಬೀದಿ ವ್ಯಾಪಾರಿಗಳ ಕಾನೂನಿನ ಪ್ರಕಾರ, ಭಾರತ ದೇಶದ ಪ್ರತಿ ಪ್ರಜೆಗೆ ಬೀದಿಯಲ್ಲಿ ವ್ಯಾಪಾರ ಮಾಡುವ ಹಕ್ಕಿದೆ. ಟ್ರಾಫಿಕ್ ಪೊಲೀಸರಿಗೆ ಏನಾದ್ರೂ ಸಮಸ್ಯೆಯಿದ್ರೆ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಬೇಕು. ಅದನ್ನ ಬಿಟ್ಟು ಈ ರೀತಿ ದೌರ್ಜನ್ಯ ಎಸಗುವುದು ತಪ್ಪು. ನಮ್ಮ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಘನತೆ ಗೌರವ ಕೊಟ್ಟಿದೆ. ಇಲ್ಲಿ ಬೀದಿ ವ್ಯಾಪಾರಿಗಳ ಘನತೆಗೆ ಧಕ್ಕೆ ಜೊತೆಗೆ ವ್ಯಾಪಾರಿಗಳಿಗೆ ಲಾಸ್ ಆಗಿದೆ. ಇದನ್ನೂ ಓದಿ: ಸೆಕ್ಯೂರಿಟಿ ವೈಫಲ್ಯ ಆಗಿಲ್ಲ, ಅವರವರ ರಕ್ಷಣೆಗೆ ಗನ್ ಇಟ್ಕೊಂಡಿರ್ತಾರೆ: ಡಿಕೆಶಿ
ಪೊಲೀಸರು ಈ ರೀತಿ ದೌರ್ಜನ್ಯ ಮಾಡ್ತಿರೋದು ಇದೇ ಮೊದಲಲ್ಲ. ನಾವು ಅಲ್ಲಿಂದ ಬೀದಿ ವ್ಯಾಪಾರಿಯನ್ನ ಎತ್ತಿಸಿದ್ವಿ ಎಂದು ಟ್ರಾಫಿಕ್ ಪೊಲೀಸರು ರಾಜಾರೋಷವಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕ್ತಿದ್ದಾರೆ. ಬೀದಿ ವ್ಯಾಪಾರಿಗಳ ಕಾನೂನಿನ ಪ್ರಕಾರ, ನೋಟಿಸ್ ನೀಡದೇ ಯಾವ ಬೀದಿ ವ್ಯಾಪಾರಿಗಳನ್ನೂ ಎಬ್ಬಿಸುವಂತಿಲ್ಲ. ಬಿಬಿಎಂಪಿ ಪ್ರತಿವಲಯದಲ್ಲೂ ಪಟ್ಟಣ ವ್ಯಾಪಾರ ಸಮಿತಿ ಇರುತ್ತೆ ಬೀದಿ ವ್ಯಾಪಾರದಿಂದ ಸಮಸ್ಯೆಯಾದರೆ ಜಂಟಿ ಆಯುಕ್ತರ ಗಮನಕ್ಕೆ ತರಬೇಕು. ಅದನ್ನ ಬಿಟ್ಟು ಈ ರೀತಿ ದೌರ್ಜನ್ಯ ಅಕ್ಷಮ್ಯ ಎಂದು ಜಿಲ್ಲಾ ಬೀದಿ ಬದಿ ವ್ಯಾಪಾರಿ ಸಂಘದ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಒಟ್ಟಿನಲ್ಲಿ ಟ್ರಾಫಿಕ್ ಪೊಲೀಸರು ಇರೋದೇ ಯಾವುದೇ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು. ಇಲ್ಲಿ ಇದನ್ನ ಬೇರೆ ರೀತಿ ಹ್ಯಾಂಡಲ್ ಮಾಡಬಹುದಿತ್ತು. ಆದರೆ ಅದನ್ನ ಬಿಟ್ಟು ಈ ರೀತಿ ಬೀದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ತಪ್ಪು ಅನ್ನೋದು ಸಾರ್ವಜನಿಕರ ಮಾತು.