ಬಿಸಿಲಿನ ಆರ್ಭಟಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ: ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಆರಂಭ

Public TV
1 Min Read
Raichur 1

ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ (Raichur) ದಿನೇ ದಿನೇ ತಾಪಮಾನ ಹೆಚ್ಚಳವಾಗುತ್ತಲೇ ಇದೆ. ತಾಪಮಾನ ಹೆಚ್ಚಳದಿಂದ ಜನ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ (RIMS Hospital) ಹೀಟ್ ಸ್ಟ್ರೋಕ್ ಮ್ಯಾನೇಜ್ಮೆಂಟ್‌ ವಾರ್ಡ್‌‌ ಅನ್ನು ತೆರೆಯಲಾಗಿದೆ. ಬಿಸಿಲಿನ ತಾಪದಿಂದ ಉಂಟಾದ ಕಾಯಿಲೆಗಳ ಚಿಕಿತ್ಸೆಗೆ ರಿಮ್ಸ್ ವೈದ್ಯರು ವಿಶೇಷ ವಾರ್ಡ್ ಆರಂಭಿಸಿದ್ದಾರೆ.

Raichur 2

ಇಡೀ ರಾಜ್ಯದಲ್ಲಿ ಈ ಬಾರಿಯ ಬೇಸಿಗೆ (Summer) ಜನರನ್ನ ನಿತ್ರಾಣ ಮಾಡಿದೆ. ಅದರಲ್ಲೂ ಬಿಸಿಲನಾಡು ರಾಯಚೂರಿನಲ್ಲಿ ದಾಖಲೆಯ ತಾಪಮಾನ‌ ಜನರನ್ನ ಮನೆಯಿಂದ ಹೊರ ಬರದಂತೆ ಮಾಡಿದೆ. ಹೀಗಾಗಿ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಾಯಚೂರಿನ ರಿಮ್ಸ್ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ಅತಿಯಾದ ಶಾಖ (Heat Wave) ಆರೋಗ್ಯ ಸಮಸ್ಯೆಗಳ ವಿಶೇಷ ವಾರ್ಡನ್ನ ತೆರೆಯಲಾಗಿದೆ. ಸದ್ಯ 8 ಹಾಸಿಗೆಗಳ ವಾರ್ಡನ್ನ ಅಗತ್ಯಕ್ಕೆ ತಕ್ಕಂತೆ 20 ಬೆಡ್‌ವರೆಗೆ ವಿಸ್ತರಿಸಲು ರಿಮ್ಸ್ ಆಡಳಿತ ಮಂಡಳಿ ಮುಂದಾಗಿದೆ.

Raichur 3

ವಿಶೇಷ ವಾರ್ಡ್‌ನಲ್ಲಿ ಅಗತ್ಯ ಫ್ಲೂಯಿಡ್ಸ್, ಡಿಫಿಬ್ರಲೇಟರ್ ಸೇರಿದಂತೆ ಅವಶ್ಯಕ ಪರಿಕರಗಳು, ಔಷಧಿ ವ್ಯವಸ್ಥೆ ಮಾಡಲಾಗಿದೆ. ಮಳೆ ಅಭಾವದಿಂದ ಈ ಬಾರಿ ರಣ ಬೇಸಿಗೆ ಇರುವುದರಿಂದ ಮೊದಲ ಬಾರಿಗೆ ಹೀಟ್ ಸ್ಟ್ರೋಕ್ ಮ್ಯಾನೇಜಮೆಂಟ್ ವಾರ್ಡ್‌ನ್ನ ತೆರೆಯಲಾಗಿದೆ. ಬೇಸಿಗೆಯ ಬೇಗೆಯಿಂದ ದೇಹದಲ್ಲಿ ಲವಣಾಂಶಗಳು ಏರುಪೇರಾದರೆ ಕಿಡ್ನಿ, ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆ ವಿಶೇಷ ವಾರ್ಡ್ ತೆರೆಯಲಾಗಿದೆ.

ಇನ್ನೂ ರಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್‌ಗೆ ಈವರೆಗೆ ಯಾವುದೇ ರೋಗಿಗಳು ದಾಖಲಾಗದಿದ್ದರು, ಬಿಸಿಲಿನ ಅಬ್ಬರಕ್ಕೆ ಉರಿ ಮೂತ್ರ ತೊಂದರೆ, ಕಿಡ್ನಿ ಸಮಸ್ಯೆ, ಕಿಡ್ನಿಯಲ್ಲಿ ಕಲ್ಲು, ಡಿಹೈಡ್ರೇಷನ್, ಹೆಚ್ಚು ಸುಸ್ತಾಗುವುದು ಸೇರಿದಂತೆ ನಾನಾ ಸಮಸ್ಯೆಗಳಿಂದ ಹಲವಾರು ಜನ ಬಳಲುತ್ತಿದ್ದು. ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ನಿರ್ಜಲೀಕರಣ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಅನಾರೋಗ್ಯ ಪೀಡಿತರು ಎಡತಾಕುತ್ತಿದ್ದಾರೆ. ಆದ್ದರಿಂದ ಸಾಧ್ಯವಾದಷ್ಟು ಬಿಸಿಲಿನಲ್ಲಿ ಓಡಾಟ ಕಡಿಮೆ ಮಾಡುವಂತೆ, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರು ಬಿಸಿಲಿನಲ್ಲಿ ಹೆಚ್ಚು ಓಡಾಡುವುದು ಅಥವಾ ಕೆಲಸ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ.

Share This Article