ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದ ಕೊಳವೆ ಬಾವಿಗೆ (Borewell) ಬಿದ್ದ 2 ವರ್ಷದ ಸಾತ್ವಿಕ್ ಕೊನೆಗೆ ಸಾವಿನ ದವಡೆಯಿಂದ ಪಾರಾಗಿದ್ದು ಲಕ್ಷಾಂತರ ಜನರ ಪ್ರಾರ್ಥನೆ ಫಲಿಸಿದೆ.
ಸದ್ಯ ಕೊಳವೆ ಬಾವಿಯಿಂದ ಹೊರತೆಗೆದು ಬಾಲಕನನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಬಾಲಕ ಕೊಳವೆ ಬಾವಿಗೆ ಬೀಳುತ್ತಿದ್ದಂತೆಯೇ ರಕ್ಷಣೆಗಾಗಿ ಅಹೋರಾತ್ರಿಯಿಂದಲೇ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕ್ಯಾಮೆರಾದಲ್ಲಿ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿತ್ತು.
ಇದೀಗ ಸತತ ಸತತ 20 ಗಂಟೆಗಳ ಎನ್‌ಡಿಆರ್‌ಎಫ್,ಎಸ್‌ಡಿಆರ್‌ಎಫ್ ಕಾರ್ಯಾಚರಣೆ ಯಶಸ್ವಿಯಾಗಿದೆ. ತಲೆ ಕೆಳಗೆ ಬಿದ್ದ ಮಗು ಬದುಕಿ ಉಳಿಯುತ್ತಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಆದರೆ ಪವಾಡ ಎಂಬಂತೆ ಸಾತ್ವಿಕ್ ಬದುಕಿ ಉಳಿದಿದ್ದು ಅಳುತ್ತಿರುವ ಧ್ವನಿ ಕೇಳಿಸಿದಾಗ ಎಲ್ಲರೂ ನಿಟ್ಟಿಸಿರು ಬಿಟ್ಟಿದ್ದರು.
20 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆಗೆ ಕೊಳವೆಬಾವಿ ಪಕ್ಕದಲ್ಲಿ ಸಮಾನಾಂತರವಾಗಿ 2 ಜೆಸಿಬಿ ಬಳಸಿ ಗುಂಡಿಯನ್ನು ತೋಡಲಾಗಿತ್ತು. ಕೊಳವೆ ಬಾವಿಗೆ ಕ್ಯಾಮೆರಾ ಇಳಿಬಿಟ್ಟು ಬಾಲಕನ ಚಲನವಲನ ಗಮನಿಸಲಾಗುತ್ತಿತ್ತು. ಇದನ್ನೂ ಓದಿ: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ
ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ ಪಿ ಋಷಿಕೇಶ ಸೋನಾವಣೆ, ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆ ಗಮನಿಸಿದ್ದರು.
ಸತೀಶ್-ಪೂಜಾ ದಂಪತಿಗೆ ನಾಲ್ಕು ಎಕರೆ ಜಮೀನಿದ್ದು, ನಿಂಬೆ ಮತ್ತು ಕಬ್ಬಿಗೆ ನೀರಿನ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಕೊಳವೆ ಬಾವಿ ಕೊರೆಸಿದ್ದರು. ನೀರು ಸಿಕ್ಕಿದ ಹಿನ್ನೆಲೆಯಲ್ಲಿ ಅದನ್ನು ಹಾಗೆಯೇ ಬಿಟ್ಟಿದ್ದರು.