ಕಳಪೆ ಪ್ರದರ್ಶನದಿಂದ ಶಾಹೀನ್‌ ಶಾಗೆ ತಲೆದಂಡ – ಮತ್ತೆ ನಾಯಕನ ಪಟ್ಟಕ್ಕೇರಿದ ಬಾಬರ್‌ ಆಜಂ

Public TV
2 Min Read
Babar Azam

ಇಸ್ಲಾಮಾಬಾದ್‌: 2023ರ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ನಾಯಕತ್ವದಿಂದ ಕೆಳಗಿಳಿದಿದ್ದ ಪಾಕ್‌ ಕ್ರಿಕೆಟಿಗ ಬಾಬರ್‌ ಆಜಂ (Babar Azam) ಅವರಿಗೆ ಮತ್ತೆ ವೈಟ್‌ಬಾಲ್‌ ಕ್ರಿಕೆಟ್‌ (T20 and ODI) ನಾಯಕತ್ವದ ಹೊಣೆ ನೀಡಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇದೇ ವರ್ಷ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿ ಗಮನದಲ್ಲಿಟ್ಟು ವೇಗಿ ಶಾ ಅಫ್ರಿದಿ ಅವರನ್ನ ಕೆಳಗಿಳಿಸಿದೆ. ಮತ್ತೆ ಸ್ಟಾರ್‌ ಬ್ಯಾಟರ್‌ ಬಾಬರ್‌ ಆಜಂಗೆ ನಾಯಕತ್ವದ ಹೊಣೆ ನೀಡಿದೆ.  

ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿಯಲ್ಲಿ ಎದುರಿಸಿದ ಹೀನಾಯ ಸೋಲು ಹಾಗೂ 2024ರ ಪಾಕಿಸ್ತಾನ್‌ ಸೂಪರ್‌ ಲೀಗ್‌ (PSL) ಟೂರ್ನಿಯಲ್ಲಿ ನೀಡಿರುವ ಕಳಪೆ ಪ್ರದರ್ಶನದಿಂದಾಗಿ ಪಿಸಿಬಿ, ಶಾಹೀನ್‌ ಶಾ ಅಫ್ರಿದಿ ಅವರನ್ನ ಕ್ಯಾಪ್ಟನ್‌ ಪಟ್ಟದಿಂದ ಕಿತ್ತೊಗೆದಿದೆ. ಶಾಹೀನ್‌ ಶಾ ಅಫ್ರಿದಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ಯಾಪ್ಟನ್ಸಿ ಅಭಿಯಾನ ಬಹುಬೇಗ ಅಂತ್ಯಗೊಂಡಿದ್ದು, ಕೇವಲ ಒಂದು ಸರಣಿಗೆ ಮಾತ್ರವೇ ಸೀಮಿತವಾಗಿದೆ. ಇದೇ ವರ್ಷ ಆರಂಭದಲ್ಲಿ ನ್ಯೂಜಿಲೆಂಡ್‌ ಎದುರು 5 ಪಂದ್ಯಗಳ ಟಿ20 ಕ್ರಿಕೆಟ್‌ (T20 Cricket) ಸರಣಿಯಲ್ಲಿ ಅಫ್ರಿದಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದರು. ಸರಣಿಯಲ್ಲಿ ಪಾಕ್ 1-4 ಅಂತರದ ಹೀನಾಯ ಸೋಲನುಭವಿಸಿತ್ತು.

Babar azam

ಕಳೆದೆ ಬಾರಿ ಲಾಹೋರ್‌ ಕಲಂದರ್ಸ್‌ ತಂಡಕ್ಕೆ ಪಾಕಿಸ್ತಾನ್‌ ಸೂಪರ್‌ ಲೀಗ್‌ ಕಿರೀಟ ಗೆದ್ದುಕೊಟ್ಟಿದ್ದ ಶಾಹೀನ್‌ ಶಾ ಅಫ್ರಿದಿ ಈ ಬಾರಿ ಅಂಥದ್ದೇ ಫಲಿತಾಂಶ ತರಲು ಸಂಪೂರ್ಣ ವಿಫಲರಾದರು. ಪಿಎಸ್‌ಎಲ್‌ 2024 ಟೂರ್ನಿಯಲ್ಲಿ ಲಾಹೋರ್‌ ಕಲಂದರ್ಸ್‌ ತಂಡ ಆಡಿದ 10 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಮಾತ್ರವೇ ಗೆಲ್ಲಲು ಶಕ್ತವಾಯಿತು. ಪರಿಣಾಮ ಶಾಹೀನ್‌ ಶಾ ಅಫ್ರಿದಿ ಪಾಕಿಸ್ತಾನ ತಂಡದ ಕ್ಯಾಪ್ಟನ್ಸಿ ಕಳೆದುಕೊಂಡಿದ್ದಾರೆ.

ಕಳಪೆ ಪ್ರದರ್ಶನದಿಂದ ತಲೆದಂಡ:
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಬಾಬರ್‌ ಆಜಂ ನಾಯಕತ್ವದ ಪಾಕ್‌ ತಂಡ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತ್ತು. ಬಾಬರ್‌ ಆಜಂ 9 ಪಂದ್ಯಗಳಲ್ಲಿ 40 ಸರಾಸರಿಯೊಂದಿಗೆ 82.90 ಸ್ಟ್ರೈಕ್‌ರೇಟ್‌ನಲ್ಲಿ 320 ರನ್ ಗಳಿಸಿದ್ದರು. ಇದಕ್ಕೆ ತಲೆದಂಡವಾಗಿ ಬಾಬರ್‌ ಅವರನ್ನ ನಾಯಕ ಸ್ಥಾನದಿಂದ ಕಿತ್ತೊಗೆಯಲಾಗಿತ್ತು.

Share This Article