‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟ ಭಾವನಾ ಅಪ್ಪು

Public TV
2 Min Read
Bhavana Appu

ರುಣ್ ಅಮುಕ್ತ (Arun Amukta) ನಿರ್ದೇಶನದ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಚಿತ್ರ ಚಿತ್ರೀಕರಣ ಮುಗಿಸಿಕೊಂಡಿದೆ. ಕುಂಬಳ ಕಾಯಿ ಒಡೆದು, ಪೋಸ್ಟ್ ಪ್ರೊಡಕ್ಷನ್ ಕಾರ್ಯದತ್ತ ಹೊರಳಿಕೊಂಡಿರುವ ಈ ಘಳಿಗೆಯಲ್ಲಿ, ಪತ್ರಿಕಾಗೋಷ್ಠಿಯೊಂದನ್ನು ನಡೆಸಲಾಗಿದೆ. ಇದರಲ್ಲಿ ಪಾಲ್ಗೊಂಡಿದ್ದ ಚಿತ್ರತಂಡ, ಕಲಾವಿದರೆಲ್ಲ ಒಂದಷ್ಟು ಬೆರಗಿನ ವಿಚಾರಗಳನ್ನು ಜಾಹೀರು ಮಾಡಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರದ ನಿಜವಾದ ಶಕ್ತಿ ಎಂದರೆ ಕಥೆ ಮತ್ತು ಪಾತ್ರಗಳಿಗೆ ಜೀವ ತುಂಬಿರೋ ಕಲಾವಿದರು. ಅದರಲ್ಲೊಂದು ಮುಖ್ಯ ಪಾತ್ರ ಕಿರುತೆರೆ ನಟಿ ಭಾವನಾ ಅಪ್ಪು ಪಾಲಿಗೆ ಒಲಿದು ಬಂದಿದೆ.

Vidyarthi Vidyarthiniyare 1 2

ಭಾವನಾ ಅಪ್ಪು (Bhavana Appu) ಈಗಾಗಲೇ ಒಂದಷ್ಟು ಸೀರಿಯಲ್ಲುಗಳಲ್ಲಿ, ಕೆಲ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿ ಒಂದಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ನಿರ್ದೇಶಕ ಅರುಣ್ ಅಮುಕ್ತ ನಾಯಕಿಯರಲ್ಲೊಂದಾದ ಪಾತ್ರಕ್ಕೆ ಭಾವನಾರನ್ನೇ ಆಯ್ಕೆ ಮಾಡಿಕೊಂಡಿದ್ದರಂತೆ. ಇಂಥಾದ್ದೊಂದು ಅವಕಾಶ ಕೊಟ್ಟ, ಕಿರುತೆರೆಯಲ್ಲಿದ್ದ ತನಗೆ ಹಿರಿತೆರೆಗೆ ಎಂಟ್ರಿ ಕೊಡಿಸಿದ ನಿರ್ದೇಶಕರಿಗೆ ಧನ್ಯವಾದ ಹೇಳುತ್ತಲೇ ಭಾವನಾ ಮಾತುಗಳನ್ನು ಆರಂಭಿಸಿದರು. ಆ ನಂತರ ತನ್ನ ಪಾತ್ರದ ಕೆಲ ಚಹರೆಗಳನ್ನು ತೆರೆದಿಟ್ಟರು. ಅದರನ್ವಯ ಹೇಳೋದಾದರೆ, ಅವರ ಪಾಲಿಗಿಲ್ಲಿ ಡಿಫರೆಂಟಾದ ಪಾತ್ರವೇ ಒಲಿದು ಬಂದಿದೆ.

Chandan Shetty

ಅದು ಒಂದಷ್ಟು ಬಗೆಯ ಶೇಡ್ಸ್  ಹೊಂದಿರುವ ಪಾತ್ರವಂತೆ. ಕುಣಿಯಲೂ ಸೈ, ಫೈಟಿಂಗಿಗೂ ಸೈ ಅನ್ನುವಂತಹ ಪಾತ್ರ ತನ್ನದೆಂಬುದು ಭಾವನಾ ವಿವರಣೆ. ಸಾಮಾನ್ಯವಾಗಿ ನಾಯಕಿಯರಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗೋದು ಕಷ್ಟ. ಆದರೆ ತನಗೆ ಬಹಳಷ್ಟು ಪ್ರಧಾನ್ಯತೆ ಸಿಕ್ಕಿದೆ ಎಂಬ ತೃಪ್ತಿ ಭಾವನಾರದ್ದು. ಇನ್ನುಳಿದಂತೆ, ಪ್ರತೀ ಹಂತದಲ್ಲಿಯೂ ಪ್ರೋತ್ಸಾಹ ನೀಡುತ್ತಾ ಬಂದಿದ್ದ ಚಂದನ್ ಶೆಟ್ಟಿಗೂ ಭವನಾ ಧನ್ಯವಾದ ಹೇಳಿದ್ದಾರೆ. ಅಂತೂ ಈ ಸಿನಿಮಾ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ಅವಕಾಶ ದೊರಕುತ್ತದೆಂಬ ಭರವಸೆ ಭಾವನಾ ಮಾತುಗಳಲ್ಲಿ ಕಾಣಿಸುತ್ತಿತ್ತು.

 

ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Share This Article