20 ಬಾಲ್‌ಗೆ ರಸೆಲ್‌ ಫಿಫ್ಟಿ – ಹೈದರಾಬಾದ್‌ ವಿರುದ್ಧ ಕೆಕೆಆರ್‌ಗೆ 4 ರನ್‌ಗಳ ರೋಚಕ ಜಯ

Public TV
2 Min Read
Andre Russell

ಕೋಲ್ಕತ್ತಾ: ಆ್ಯಂಡ್ರೆ ರಸೆಲ್‌ ಹಾಗೂ ಫಿಲಿಪ್‌ ಸ್ಟಾಲ್‌ ಅರ್ಧಶತಕ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

ಕೋಲ್ಕತ್ತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಐಪಿಎಲ್‌ ಟಿ-20 ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿ 20 ಓವರ್‌ಗೆ 208 ರನ್‌ ಗಳಿಸಿತ್ತು. 209 ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಹೈದರಾಬಾದ್‌ ಕೊನೆವರೆಗೂ ಹೋರಾಡಿ 20 ಓವರ್‌ ಮುಕ್ತಾಯಕ್ಕೆ 7 ವಿಕೆಟ್‌ ನಷ್ಟಕ್ಕೆ 204 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

Heinrich Klaasen

ಟಾಸ್‌ ಗೆದ್ದ ಹೈದರಾಬಾದ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ಅಮೋಘ ಪ್ರದರ್ಶನ ನೀಡಿತು. ಆರಂಭಿಕ ಬ್ಯಾಟರ್‌ ಫಿಲಿಪ್‌ ಸಾಲ್ಟ್‌ ಸಮಯೋಜಿತ ಅರ್ಧಶತಕ (54) ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು.

ಈ ಮಧ್ಯೆ 51 ರನ್‌ಗಳಿರುವಾಗಲೇ ತಂಡವು 4 ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಸುನಿಲ್‌ ನರೈನ್‌ (2), ವೆಂಕಟೇಶ್‌ ಅಯ್ಯರ್‌ (7), ನಾಯಕ ಶ್ರೇಯಸ್‌ ಅಯ್ಯರ್‌ (0) ಮತ್ತು ನಿತೀಶ್‌ ರಾಣಾ (9) ಅಲ್ಪ ಮೊತ್ತಕ್ಕೆ ಪೆವಿಲಿಯನ್‌ ಪರೇಡ್‌ ನಡೆಸಿದರು.

ಈ ವೇಳೆ ರಮನ್‌ದೀಪ್‌ ಸಿಂಗ್‌ ಮತ್ತು ಫಿಲಿಪ್‌ 54 ರನ್‌ಗಳ ಜೊತೆಯಾಟವಾಡಿದರು. ರಮನ್‌ದೀಪ್‌ 35 ರನ್‌ ಗಳಿಸಿದರು. ಸ್ಟಾಲ್‌ ಅರ್ಧಶತಕ ಗಳಿಸಿ ಮಿಂಚಿದರು. ಇವರ ಬಳಿಕ ಮತ್ತೆ ಜೊತೆಗೂಡಿದ ರಸೆಲ್‌ ಮತ್ತು ರಿಂಕು ಸಿಂಗ್‌ ಹೈದರಾಬಾದ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ರಸೆಲ್‌ ಔಟಾಗದೇ 25 ಬಾಲ್‌ಗಳಿಗೆ 64 ರನ್‌ ಸಿಡಿಸಿ ಆರ್ಭಟಿಸಿದರು. ರಿಂಕು ಸಿಂಗ್‌ 23 ರನ್‌ ಗಳಿಸಿ ಸವಾಲಿನ ಮೊತ್ತ ಪೇರಿಸುವಲ್ಲಿ ತಂಡಕ್ಕೆ ನೆರವಾದರು. ಒಟ್ಟಾರೆ 20 ಓವರ್‌ಗೆ ಕೆಕೆಆರ್‌ 7 ವಿಕೆಟ್‌ ಕಳೆದುಕೊಂಡು 208 ರನ್‌ ಗಳಿಸಿತು.

ಹೈದರಾಬಾದ್‌ ಪರ ಟಿ.ನಟರಾಜನ್‌ 3, ಮಯಂಕ್‌ ಮಾರ್ಕಂಡೆ 2 ವಿಕೆಟ್‌ ಗಳಿಸಿದರು.

ಕೆಕೆಆರ್‌ ನೀಡಿದ 209 ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಹೈದರಾಬಾದ್‌ ಕೊನೆ ಕ್ಷಣದವರೆಗೂ ಗೆಲುವಿನ ಭರವಸೆ ಮೂಡಿಸಿತ್ತು. ಮಯಾಂಕ್ ಅಗರ್ವಾಲ್ (32), ಅಭಿಷೇಕ್ ಶರ್ಮಾ (32), ರಾಹುಲ್ ತ್ರಿಪಾಠಿ (20), ಐಡೆನ್ ಮಾರ್ಕ್ರಾಮ್ (18) ತಂಡದ ಮೊತ್ತವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದರು.

ಈ ಹಂತದಲ್ಲಿ ಬಂದ ಹೆನ್ರಿಕ್ ಕ್ಲಾಸೆನ್ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಕ್ಲಾಸೆನ್‌ 29 ಬಾಲ್‌ಗೆ 63 ರನ್‌ (8 ಸಿಕ್ಸ್‌) ಗಳಿಸಿದರು. ಕೊನೆ ವರೆಗೂ ಪಂದ್ಯ ರೋಚಕತೆಯಿಂದ ಕೂಡಿತ್ತು. ಆದರೆ ಕೊನೆ ಹಂತದಲ್ಲಿ ಹೈದರಾಬಾದ್‌ಗೆ ಅದೃಷ್ಟ ಲಕ್ಷ್ಮಿ ಒಲಿಯಲಿಲ್ಲ. ಕ್ಲಾಸೆನ್‌, ಅಬ್ದುಲ್ ಸಮದ್, ಶಹಬಾಜ್ ಅಹಮದ್ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್‌ ಇತ್ತು ಔಟಾದರು. ಇದು ತಂಡದ ಭರವಸೆ ಕುಗ್ಗುವಂತೆ ಮಾಡಿತು. ಕೊನೆ ಬಾಲ್‌ಗೆ 4 ರನ್‌ ಬೇಕಿತ್ತು. ಆದರೆ ಪ್ಯಾಟ್‌ ಕಮಿನ್ಸ್‌ ಡಾಟ್‌ ಬಾಲ್‌ ಮಾಡಿದರು. ಎಲ್ಲಾ ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ ಹೈದರಾಬಾದ್‌ 204 ರನ್‌ ಗಳಿಸಿ ಸೋತಿತು.

ಕೆಕೆಆರ್‌ ಪರ ಹರ್ಷಿತ್ ರಾಣಾ 3 ವಿಕೆಟ್‌ ಕಬಳಿಸಿ ಮಿಂಚಿದರು. ಆಂಡ್ರೆ ರಸೆಲ್ 2 ಹಾಗೂ ವರುಣ್ ಚಕ್ರವರ್ತಿ, ಸುನಿಲ್ ನರೈನ್ ತಲಾ 1 ವಿಕೆಟ್‌ ಪಡೆದರು.

Share This Article