ಕೊಡಗು ಗಡಿಭಾಗಕ್ಕೆ ನಕ್ಸಲ್ ನಾಯಕ ವಿಕ್ರಂ ಗೌಡ, ತಂಡ ಬಂದಿರುವುದು ದೃಢ: ಎಸ್‌ಪಿ ರಾಮರಾಜನ್

Public TV
2 Min Read
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಡಿಕೇರಿ: ಅತೀ ಸೂಕ್ಷ್ಮ ಪ್ರದೇಶ ಎಂದು ಕರೆಸಿಕೊಳ್ಳುವ ಪಶ್ಚಿಮಘಟ್ಟ ಸಾಲಿನಲ್ಲಿ ಇದೀಗ ನಕ್ಸಲ್ (Naxal) ಭೀತಿ ಸೃಷ್ಟಿಯಾಗಿದೆ. ಕೊಡಗು (Kodagu) ಹಾಗೂ ದಕ್ಷಿಣ ಕನ್ನಡ (Dakshina Kannada) ಗಡಿ ಭಾಗದ ಕಡಮಕಲ್ಲು ಸಮೀಪದ ಕೂಜಿಮಲೆ ಎಂಬಲ್ಲಿ ನಕ್ಸಲ್ ಹೆಜ್ಜೆ ಸಪ್ಪಳ ಕೇಳಿ ಬಂದಿದ್ದು, ಚುನಾವಣೆ ಹೊತ್ತಿನಲ್ಲಿ ಕೆಂಪು ಉಗ್ರರ ನುಸುಳುವಿಕೆಯಿಂದ ಆತಂಕ ಸೃಷ್ಟಿಯಾಗಿದೆ. ಸೂಕ್ಷ್ಮ ಪ್ರದೇಶವಾದ ಬೆಟ್ಟಗಳ ಸಾಲಿನಲ್ಲಿ ಪೋಲಿಸರು ಹಾಗೂ ನಕ್ಸಲ್ ನಿಗ್ರಹ ಪಡೆಯ ತಂಡ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Kodagu Naxalites 1

ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನಕ್ಸಲರು ಪ್ರತ್ಯಕ್ಷವಾಗಿದ್ದಾರೆ. ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಕೆಂಪು ಉಗ್ರರ ಚಲನವಲನವಾಗುತ್ತಿರುವುದು ಕಳೆದ ಎರಡು ಮೂರು ದಿನಗಳಿಂದ ಗೋಚರಿಸಿದೆ. ಅದರಲ್ಲೂ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ದಕ್ಷಿಣ ಕನ್ನಡದ ಸುಬ್ರಹ್ಮಣ್ಯಕ್ಕೆ ಹತ್ತಿರವಿರುವ ಕೂಜಿಮಲೆಯಲ್ಲಿ 4 ನಕ್ಸಲರ ತಂಡ ಕಾಣಿಸಿಕೊಂಡಿದ್ದು, ಕೂಜಿಮಲೆಯ (Koojimale) ಕಲ್ಮಕಾರು ಎಂಬಲ್ಲಿ ಅಂಗಡಿಯೊಂದರಲ್ಲಿ 3,500 ರೂ. ಮೌಲ್ಯದ ದಿನಸಿ ವಸ್ತುಗಳನ್ನು ಖರೀದಿಸಿ ತೆರಳಿದ್ದಾರೆ. ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಶಸ್ತ್ರಸಜ್ಜಿತರಾಗಿ ಬಂದಿದ್ದ ಹಿನ್ನೆಲೆ ನಕ್ಸಲರು ಎಂಬ ಸಂಶಯ ವ್ಯಕ್ತವಾಗಿ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ನಕ್ಸಲ್ ನಿಗ್ರಹ ದಳಕ್ಕೆ (ಎಎನ್‌ಎಫ್) ಮಾಹಿತಿ ನೀಡಿದ್ದು, ಕಾರ್ಕಳದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕೂಂಬಿಂಗ್‌ಗೆ ಮುಂದಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ನಕ್ಸಲ್ ನಿಗ್ರಹ ದಳದೊಂದಿಗೆ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: RSS ಮುಖಂಡ ಶ್ರೀನಿವಾಸನ್ ಹತ್ಯೆಯ ಪ್ರಮುಖ ಆರೋಪಿಯ ಬಂಧಿಸಿದ NIA

ಇನ್ನೂ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೂಜಿಮಲೆಯಲ್ಲಿ ಭಾನುವಾರ ಸಂಜೆ ಕಾಣಿಸಿಕೊಂಡ ಈ ನಕ್ಸಲರ ತಂಡವು ಬೇರೆ ಕಡೆ ಸಂಚರಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸುತ್ತ ರಬ್ಬರ್ ಎಸ್ಟೇಟ್ ಇರುವ ಕಾರಣ ನಕ್ಸಲರು ಎಸ್ಟೇಟ್ ಮೂಲಕ ಅರಣ್ಯದೊಳಗೆ ತೆರಳಿರುವ ಸಂಶಯ ಮೂಡಿದೆ. ಅಲ್ಲದೇ ಬಂದಿದ್ದ ನಾಲ್ವರು ನಕ್ಸಲರು, ನಾವು ಬಡವರ್ಗದ ಜನರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ತಾವುಗಳು ನಮಗೆ ಸಪೋರ್ಟ್ ಮಾಡಬೇಕು. ನಾವು ಬಂದು ಹೋಗಿರುವುದು ಯಾರಿಗೂ ಹೇಳಬೇಡಿ ಎಂದು ಹೇಳಿದ್ದಾರೆ. ಅಲ್ಲದೇ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತಾನಾಡಿದ್ದಾರೆ ಎಂದು ಅಂಗಡಿ ವ್ಯಾಪಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಈ ಅಪರಿಚಿತರು ವಾಂಟೆಡ್ ಲಿಸ್ಟ್ನಲ್ಲಿರುವ ನಕ್ಸಲರೇ ಎಂಬ ಮಾಹಿತಿ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಗೆ ಗೊತ್ತಾಗಿದೆ. ಮೋಸ್ಟ್ ವಾಂಟೆಡ್ ವಿಕ್ರಂ ಗೌಡ ಈ ತಂಡದಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಂಡಿರುವ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಸಿಇಎನ್ ಪೊಲೀಸರ ಭರ್ಜರಿ ಬೇಟೆ – 2.93 ಕೋಟಿ ರೂ. ನಗದು ಜಪ್ತಿ

2012ರಲ್ಲಿ ಮಡಿಕೇರಿ ತಾಲೂಕಿನಲ್ಲಿ ಕಾಲೂರು ಗ್ರಾಮದಲ್ಲಿ ನಕ್ಸಲರು ಪ್ರತ್ಯಕ್ಷಗೊಂಡಿದ್ದರು. ನಂತರ, 2018ರ ಫೆಬ್ರವರಿ ತಿಂಗಳಲ್ಲಿ ಇದೇ ವ್ಯಾಪ್ತಿಯ ಸಂಪಾಜೆ ಗುಡ್ಡೆಗದ್ದೆಯಲ್ಲೂ ನಕ್ಸಲರು ಕಾಣಿಸಿಕೊಂಡಿದ್ದರು. ಇದೀಗಾ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತೀ ಬಾರಿಯೂ ಕೊಡಗು ಜಿಲ್ಲೆಯ ಗಡಿ ಪ್ರದೇಶದಲ್ಲಿ ನಕ್ಸಲರ ಚಲನವಲನಗಳು ಗೋಚರಿಸುತ್ತಿದ್ದು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಗ್ರಾಮಸ್ಥರ ನೆಮ್ಮದಿ ಕಸಿದುಕೊಳ್ಳುತ್ತಿದೆ. ಇದನ್ನೂ ಓದಿ: JMM ತೊರೆದು ಬಿಜೆಪಿ ಸೇರಿದ ಹೇಮಂತ್ ಸೊರೇನ್‌ ಸೊಸೆ ಸೀತಾ ಸೊರೇನ್‌

Share This Article