ಮರೆಯಲಾಗದ ಖುಷಿ – ಕೊಹ್ಲಿಯೊಂದಿಗೆ ಸಂತಸ ಹಂಚಿಕೊಂಡ ಕ್ಷಣ ನಿಜಕ್ಕೂ ಭಾವುಕ!

Public TV
4 Min Read
Virat Kohli

– ಆರ್‌ಸಿಬಿ ವನಿತೆಯರನ್ನು ಕೊಂಡಾಡಿದ ಗ್ಲೇನ್‌ ಮ್ಯಾಕ್ಸ್‌ವೆಲ್‌

ನವದೆಹಲಿ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ವನಿತೆಯರ (RCB Womens) ಗೆಲುವು ಎಲ್ಲೆಡೆ ಹರ್ಷೋದ್ಘಾರ ತರಿಸಿದೆ. ದೇಶಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳು ತಮ್ಮ‌ ಸೋಶಿಯಲ್‌ ಮೀಡಿಯಾಗಳಲ್ಲಿ ಸಂತಸದ ಸಂದೇಶಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ನಾಯಕಿ ಸ್ಮೃತಿ ಮಂಧಾನ, ಎಲ್ಲಿಸ್‌ ಪೆರ್ರಿ (Ellyse Perry), ಕನ್ನಡತಿ ಶ್ರೇಯಾಂಕ ಪಾಟೀಲ್‌ ಅವರನ್ನ ಹಾಡಿ ಹೊಗಳುತ್ತಿದ್ದಾರೆ.

ಈ ವೇಳೆ ಗೆಲುವಿನ ಖುಷಿ ತಡೆಯಲಾರೆ ಕ್ರಿಕೆಟ್‌ ಲೋಕದ ಕಿಂಗ್‌ ವಿರಾಟ್‌ ಕೊಹ್ಲಿ (Virat Kohli) ತಕ್ಷಣವೇ ವೀಡಿಯೋ ಕಾಲ್‌ ಮಾಡಿ ವನಿತೆಯರ ತಂಡದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ನಾಯಕಿ ಸ್ಮೃತಿ ಮಂಧಾನ ಹಾಗೂ ಇತರ ಮಹಿಳಾ ಮಣಿಗಳಿಗೆ ಅಭಿನಂದನೆ ಸಲ್ಲಿದ್ದಾರೆ. ಅಷ್ಟೇ ಅಲ್ಲ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲೂ ʻಸೂಪರ್‌ವುಮನ್‌ʼ ಎಂಬ ಬರಹದೊಂದಿಗೆ ಆರ್‌ಸಿಬಿ ಚಾಂಪಿಯನ್ಸ್‌ ಫೋಟೋವನ್ನ ಹಂಚಿಕೊಂಡಿದ್ದಾರೆ.

Virat Kohli 2

ಹೆಣ್ಮಕ್ಕಳೇ ಸ್ಟ್ರಾಂಗು ಗುರು:
ಕೊನೆಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ 16 ಪ್ರಶಸ್ತಿಯ ಬರ ನೀಗಿಸಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ನ ಮೊದಲ ಆವೃತ್ತಿಯಲ್ಲಿ ಹೀನಾಯವಾಗಿ ಸೋತಿದ್ದ ಆರ್‌ಸಿಬಿ 2ನೇ ಆವೃತ್ತಿಯಲ್ಲಿ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿದ್ದು, ಹೆಣ್ಮಕ್ಕಳೇ ಸ್ಟ್ರಾಂಗು ಗುರು ಎಂಬ ಮಾತನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 18.3 ಓವರ್‌ಗಲ್ಲಿ 113 ರನ್‌ ಗಳಿಗೆ ಆಲೌಟ್‌ ಆಯಿತು. 114 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 19.3 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 115 ರನ್‌ ಗಳಿಸಿ ಗೆಲುವು ಸಾಧಿಸಿತು.

RCB 011

114 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಸಹ ನಿಧಾನಗತಿ ಬ್ಯಾಟಿಂಗ್‌ ನಡೆಸಿತು. ವಿಕೆಟ್‌ ತೆಗೆಯದಿದ್ದರೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಉತ್ತಮ ಫೀಲ್ಡಿಂಗ್‌ ಪ್ರದರ್ಶನ ತೋರಿತ್ತು. ಇದರಿಂದ ವಿಜಯಲಕ್ಷ್ಮಿ ಯಾರ ಪಾಲಿಗೆ ಒಲಿಯುತ್ತಾಳೆ ಎಂಬ ಕುತೂಹಲ ಕೊನೆಯವರೆಗೂ ಇತ್ತು. ಓವರ್‌ನಲ್ಲೂ ಒಂದೊಂದು ಎಸೆತವೂ ಏನಾಗುತ್ತದೆ ಎಂದು ಅಭಿಮಾನಿಗಳು ಕುತೂಹಲದಿಂದಲೇ ವೀಕ್ಷಿಸುತ್ತಾ, ಕ್ಷಣ-ಕ್ಷಣಕ್ಕೂ ಆರ್‌ಸಿಬಿ ಆರ್‌ಸಿಬಿ ಘೋಷಣೆ ಕೂಗುತ್ತಿದ್ದರು. ಆರ್‌ಸಿಬಿ ಪರ ಸ್ಮೃತಿ ಮಂಧಾನ (Smriti Mandhana) 31 ರನ್‌, ಸೋಫಿ ಡಿವೈನ್‌ 32 ರನ್‌, ಗಳಿಸಿದ್ರೆ, ಕೊನೇ ವರೆಗೂ ಹೋರಾಟ ನಡೆಸಿದ ಆಲ್‌ರೌಂಡರ್‌ ಎಲ್ಲಿಸ್‌ ಪೆರ್ರಿ 35 ರನ್‌, ರಿಚಾ ಘೋಷ್‌ 17 ರನ್‌ ಗಳಿಸುವ ಮೂಲಕ ಗೆಲುವಿಗೆ ಕಾರಣರಾದರು.

WPL RCB

49 ರನ್‌ಗಳಿಗೆ 10 ವಿಕೆಟ್‌ ಉಡೀಸ್‌:
ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ನಾಯಕಿ ಮೆಗ್‌ ಲ್ಯಾನ್‌, ಶಫಾಲಿ ವರ್ಮಾ ಸ್ಫೋಟಕ ಪ್ರದರ್ಶನ ತೋರಿದ್ದರು. ಪವರ್‌ ಪ್ಲೇನಲ್ಲಿ 6 ಓವರ್‌ಗಳಿಗೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ 61 ರನ್‌ ಬಾರಿಸಿದ್ದರು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 200 ರನ್‌ಗಳ ಗಡಿ ದಾಟಲಿದೆ ಎಂದು ನಿರೀಕ್ಷಿಸಲಾಗಿತ್ತು. ಪವರ್‌ ಪ್ಲೇ ಮುಗಿಯುತ್ತಿದ್ದಂತೆ ಪೆವಿಲಿಯನ್‌ ಪೆರೇಡ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮುಂದಿನ 49 ರನ್‌ ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು.

ಆರ್‌ಸಿಬಿಗೆ ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
ಪವರ್‌ಪ್ಲೇ ನಲ್ಲಿ ಕಳಪೆ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಪ್ರದರ್ಶನದಿಂದಾಗಿ 6 ಓವರ್‌ಗಳಲ್ಲಿ 61 ರನ್‌ ಚಚ್ಚಿಸಿಕೊಂಡಿದ್ದ ಆರ್‌ಸಿಬಿ, ನಂತರ ಡೆಲ್ಲಿ ಆಟಕ್ಕೆ ಬ್ರೇಕ್‌ ಹಾಕಿತು. 8ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ಸೋಫಿ ಮೊಲಿನೆಕ್ಸ್ ಮೊದಲ 4 ಎಸೆತಗಳಲ್ಲೇ ಅಗ್ರ ಕ್ರಮಾಂಕದ 3 ವಿಕೆಟ್‌ (ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್‌, ಅಲಿಸ್‌ ಕ್ಯಾಪ್ಸಿ) ಉರುಳಿಸಿ, ಕೇವಲ 1 ರನ್‌ ಬಿಟ್ಟುಕೊಟ್ಟರು. ಇದರಿಂದ 7 ಓವರ್‌ಗಳಲ್ಲಿ 64 ರನ್‌ ಗಳಿಸಿದ್ದ ಡೆಲ್ಲಿ ತಂಡ 81 ರನ್‌ ಗಳಿಸುವ ವೇಳೆಗೆ ಕೇವಲ 17 ರನ್‌ಗಳ ಅಂತರದಲ್ಲೇ ಪ್ರಮುಖ 6 ವಿಕೆಟ್‌ ಕಳೆದುಕೊಂಡಿತ್ತು. ಇದು ಆರ್‌ಸಿಬಿಗೆ ಬಹುದೊಡ್ಡ ಲಾಭವಾಯಿತು. ಅಲ್ಲಿಂದ ಒಂದೊಂದು ರನ್‌ ಕದಿಯುವುದಕ್ಕೂ ಹೆಣಗಾಡುತ್ತಿದ್ದ ಡೆಲ್ಲಿ ತಂಡ ವಿಕೆಟ್‌ಗಳನ್ನು 113 ರನ್‌ಗಳಿಗೆ ಆಲೌಟ್‌ ಆಯಿತು.

Shreyanka Patil

ಡೆಲ್ಲಿ ಕ್ಯಾಪಿಟಲ್ಸ್‌ ಪರ ಸ್ಫೋಟಕ ಪ್ರದರ್ಶನ ನೀಡಿದ ಶಫಾಲಿ ವರ್ಮಾ 27 ಎಸೆತಗಳಲ್ಲಿ 44 ರನ್‌ ಚಚ್ಚಿದರೆ (3 ಸಿಕ್ಸರ್‌, 2 ಬೌಂಡರಿ), ಮೆಗ್‌ ಲ್ಯಾನಿಂಗ್‌ 23 ರನ್‌, ರಾಧಾ ಯಾಧವ್‌ 12 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಜೆಮಿಮಾ ರೊಡ್ರಿಗ್ಸ್‌, ಅಲಿಸ್‌ ಕ್ಯಾಪ್ಸಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ರೆ, ಜೆಸ್‌ ಜೊನಾಸೆನ್‌ 3 ರನ್‌, ಮಾರಿಜಾನ್ನೆ ಕಪ್‌ 8 ರನ್‌, ಮಿನ್ನು ಮಣಿ 5 ರನ್‌, ಅರುಂಧತಿ ರೆಡ್ಡಿ 10 ರನ್‌, ಶಿಖಾ ಪಾಂಡೆ 5 ರನ್‌ ಗಳಿಸಿದರು.

ಕನ್ನಡತಿಯ ಕೈಚಳಕ:
ಆರ್‌ಸಿಬಿ ಪರ ಬೌಲಿಂಗ್‌ ಕೈಚಳಕ ತೋರಿದ ಕನ್ನಡತಿ ಶ್ರೇಯಾಂಕಾ ಪಾಟೀಲ್ 3.3 ಓವರ್‌ಗಳಲ್ಲಿ ಕೇವಲ 12 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ಸೋಫಿ ಮೊಲಿನೆಕ್ಸ್ 3 ವಿಕೆಟ್‌ ಹಾಗೂ ಆಶಾ ಸೋಭನಾ 2 ವಿಕೆಟ್‌ ಪಡೆದು ಮಿಂಚಿದರು.

Share This Article