ನವದೆಹಲಿ: ಮಾರಣಾಂತಿಕ ದಾಳಿ ನಡೆಸುವ ಪಿಟ್‍ಬುಲ್, ಅಮೆರಿಕನ್ ಬುಲ್‍ಡಾಗ್ (American Bulldog), ರಾಟ್‍ವೀಲರ್ (Rottweiler) ಸೇರಿದಂತೆ 23 ನಾಯಿ ತಳಿಗಳನ್ನು ಅಪಾಯಕಾರಿ (Ferocious dog breeds) ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಈ ವಿದೇಶಿ ನಾಯಿ ತಳಿಗಳ ಸಂತಾನೋತ್ಪತ್ತಿ, ಸಾಕುವುದು, ಮಾರಾಟ ಮಾಡುವುದನ್ನು ನಿಷೇಧಿಸುವಂತೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ನಿರ್ದೇಶನ ನೀಡಿದೆ.
ಕೇಂದ್ರ ಪಶುಸಂಗೋಪನೆ ಇಲಾಖೆಯ (Department of Animal Husbandry and Dairying) ಜಂಟಿ ಕಾರ್ಯದರ್ಶಿ ಓ.ಪಿ ಚೌಧರಿ ಅವರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ಆದೇಶ ರವಾನಿಸಿದ್ದಾರೆ. ಆದೇಶದಲ್ಲಿ ಜನರ ಜೀವಕ್ಕೆ ಅಪಾಯ ತಂದೊಡ್ಡುವ ಪಿಟ್‍ಬುಲ್, ಅಮೆರಿಕನ್ ಬುಲ್‍ಡಾಗ್ ಸೇರಿ ವಿವಿಧ ತಳಿಯ ವಿದೇಶಿ ನಾಯಿಗಳನ್ನು ಸಾಕಲು ಅನುಮತಿ ನೀಡದಂತೆ ಇಲಾಖೆ ಸೂಚಿಸಿದೆ. ಜೊತೆಗೆ ಅಂತಹ ತಳಿಗಳ ನಾಯಿಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ನಿಷೇಧ ಹೇರಲಾಗಿದೆ. ಈಗ ಗುರುತಿಸಿರುವ ನಾಯಿಗಳನ್ನು ವಿವಿಧ ಸ್ಪರ್ಧೆಗೆ ಬಳಸುವುದನ್ನೂ ನಿಷೇಧಿಸಬೇಕು ಎಂದು ಪ್ರಾಣಿ ದಯಾ ಸಂಘ (ಪೆಟಾ) ಮನವಿ ಸಲ್ಲಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.
- Advertisement -
- Advertisement -
ದೇಶದಲ್ಲಿ ಹೆಚ್ಚಿನ ಪೆಟ್‍ಶಾಪ್‍ಗಳು ಮತ್ತು ಬ್ರೀಡರ್‌ಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ಅವುಗಳು ರಾಜ್ಯ ಪ್ರಾಣಿ ದಯಾ ಸಂಘಗಳಲ್ಲಿ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ನಾಯಿ ಸಾಕಣೆ ಮತ್ತು ಮಾರುಕಟ್ಟೆ ನಿಯಮ 2017 ಮತ್ತು ಪೆಟ್ ಶಾಪ್ ನಿಯಮಗಳು 2018ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಈಗ ಮುಂದಾಗಿದೆ.
- Advertisement -
- Advertisement -
ಯಾವ ನಾಯಿ ತಳಿಗಳಿಗೆ ನಿಷೇಧ: ಪಿಟ್‍ಬುಲ್ ಟೆರಿಯರ್, ಟೋಸಾ ಇನು, ಅಮೆರಿಕನ್ ಸ್ಟಾಫರ್ಡ್‍ಶೈರ್ ಟೆರಿಯರ್, ಫಿಲಾ ಬ್ರೆಸಿಲೆರಿಯೊ, ಡೋಗೊ ಅಜೆರ್ಂಟಿನೋ, ಅಮೆರಿಕನ್ ಬುಲ್‍ಡಾಗ್, ಬೋರ್‍ಬೋಲ್, ಕಂಗಲ್, ಶಫರ್ಡ್ ಡಾಗ್ಸ್, ಟೊರ್ನ್‍ಜಾಕ್, ಬ್ಯಾಂಡೋಗ್, ಸಪ್ರ್ಲಾನಿನಾಕ್, ಜಪಾನೀಸ್ ಟೋಸಾ, ಅಕಿತಾ, ಮಾಸ್ಟಿಫ್ಸ್, ರಾಟ್‍ವೀಲರ್, ರೊಡೇಸಿಯನ್ ರಿಜ್‍ಬ್ಯಾಕ್, ವುಲ್ಫ್ ಡಾಗ್ಸ್, ಕೆನಾರಿಯೊ, ಅಕ್ಬಾಶ್, ಮಾಸ್ಕೋ ಗಾರ್ಡ್‍ಡಾಗ್ ಮತ್ತು ಸಾಮಾನ್ಯವಾಗಿ ಬ್ಯಾನ್ ಡಾಗ್ ಎಂದು ಗುರುತಿಸಲ್ಪಡುವ ನಾಯಿಗಳಿಗೆ ನಿಷೇಧ ಹೇರಲಾಗಿದೆ.