ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅನುಮೋದನೆ

Public TV
1 Min Read
president droupadi murmu

ಡೆಹ್ರಾಡೂನ್: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಬುಧವಾರ ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆಗೆ ಅನುಮೋದನೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ದೃಢಪಡಿಸಿದೆ.

ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಉತ್ತರಾಖಂಡವು ಯುಸಿಸಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಲು ಸಿದ್ಧವಾಗಿದೆ. ಉತ್ತರಾಖಂಡದ (Uttarakhand) ರಾಜ್ಯಪಾಲ ಗುರ್ಮಿತ್ ಸಿಂಗ್ ಅವರು ಫೆ.29 ರಂದು ರಾಜ್ಯ ಸರ್ಕಾರವು ಕಳುಹಿಸಿದ್ದ ಮಸೂದೆಯನ್ನು ರಾಷ್ಟ್ರಪತಿ ಮುರ್ಮು ಅವರ ಅನುಮೋದನೆಗೆ ಕಳುಹಿಸಿದ್ದರು. ಇದನ್ನೂ ಓದಿ: ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ

Pushkar Singh Dhami

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸರ್ಕಾರವು ಫೆ.6 ರಂದು ಯುಸಿಸಿ ಮಸೂದೆಯನ್ನು ಮಂಡಿಸಿ, ಅದರ ಮಹತ್ವವನ್ನು ಒತ್ತಿಹೇಳಿತ್ತು. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯ ಅಂಗೀಕಾರವು ಉತ್ತರಾಖಂಡದ ಇತಿಹಾಸದಲ್ಲಿ ಐತಿಹಾಸಿಕ ದಿನ ಎಂದು ಬಣ್ಣಿಸಿದ್ದರು.

ಫೆ.7 ರಂದು ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಬಹುಮತದೊಂದಿಗೆ ಅಂಗೀಕರಿಸಲಾಗಿತ್ತು. ಎಲ್ಲಾ ಸಮುದಾಯಗಳಿಗೆ ಒಂದೇ ರೀತಿಯ ಅಥವಾ ಏಕರೂಪದ ಕಾನೂನುಗಳನ್ನು ಪ್ರಸ್ತಾಪಿಸುವ ಏಕರೂಪ ನಾಗರಿಕ ಸಂಹಿತೆಯನ್ನು ಮುಖ್ಯಮಂತ್ರಿಯವರು ವಿಶೇಷ ಅಧಿವೇಶನದಲ್ಲಿ ಮಂಡಿಸಿದ್ದರು. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..

ಏಕರೂಪ ನಾಗರಿಕ ಸಂಹಿತೆಯು ಭಾರತದಲ್ಲಿ ಎಲ್ಲಾ ನಾಗರಿಕರಿಗೆ ವೈಯಕ್ತಿಕ ವಿಷಯಗಳಿಗೆ ಏಕರೂಪದ ಕಾನೂನು ಅನ್ವಯಿಸುವ ಪ್ರಸ್ತಾಪವಾಗಿದೆ. ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಆಸ್ತಿ ಹಕ್ಕುಗಳು ಇದರಲ್ಲಿ ಸೇರಿವೆ. ಯುಸಿಸಿ ಎಲ್ಲಾ ನಾಗರಿಕರಿಗೆ ಅವರ ಧರ್ಮ, ಲಿಂಗ ಅಥವಾ ಲೈಂಗಿಕ ದೃಷ್ಟಿಕೋನವನ್ನು ಲೆಕ್ಕಿಸದೆ ಸಮಾನವಾಗಿ ಅನ್ವಯಿಸುತ್ತದೆ.

Share This Article