ಲಕ್ನೋ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ (BSP) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ (Mayawati) ಹೇಳಿದ್ದಾರೆ. ಈ ಮೂಲಕ ಅವರು ಇಂಡಿಯಾ (INDIA) ಒಕ್ಕೂಟದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಎಸ್‌ಪಿ ತನ್ನ ಸ್ವಂತ ಬಲದ ಮೇಲೆ ಸಂಪೂರ್ಣ ಸಿದ್ಧತೆ ಮತ್ತು ಶಕ್ತಿಯೊಂದಿಗೆ ದೇಶದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣಾ ಮೈತ್ರಿ ಅಥವಾ ತೃತೀಯ ರಂಗ ರಚನೆಯ ಬಗ್ಗೆ ವದಂತಿಗಳನ್ನು ಹರಡುವುದು ಸಂಪೂರ್ಣ ಸುಳ್ಳು ಮಾಹಿತಿಯಾಗಿದೆ. ಇಂತಹ ಸುದ್ದಿಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಾರ್ಚ್ 13ರ ಒಳಗಡೆ 100 ಹೆದ್ದಾರಿ ಯೋಜನೆ, 10 ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ ಮೋದಿ
ವಿಶೇಷವಾಗಿ ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದ್ದು, ಪ್ರತಿಪಕ್ಷಗಳು ಸಾಕಷ್ಟು ಚಂಚಲತೆ ತೋರುತ್ತಿವೆ. ಆದ್ದರಿಂದಲೇ ದಿನವೂ ನಾನಾ ರೀತಿಯ ವದಂತಿಗಳನ್ನು ಹಬ್ಬಿಸಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಲೇ ಇರುತ್ತವೆ. ಆದರೆ ಬಹುಜನ ಸಮುದಾಯದ ಹಿತದೃಷ್ಟಿಯಿಂದ ಏಕಾಂಗಿಯಾಗಿ ಚುನಾವಣೆ ಎದುರಿಸುವ ಬಿಎಸ್‌ಪಿ ನಿರ್ಧಾರ ದೃಢವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಬಳಿಕ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‍ಗೆ ಶಾಕ್ – ಮಾಜಿ ಕೇಂದ್ರ ಸಚಿವ ಸೇರಿ ಹಲವು ನಾಯಕರು ಬಿಜೆಪಿಗೆ
ಮಾಯಾವತಿ ಅವರು ಲೋಕಸಭೆ ಚುನಾವಣೆಗೆ ಯಾವುದೇ ರೀತಿಯ ಮೈತ್ರಿಗೆ ಸೇರಲು ಹಲವು ಬಾರಿ ನಿರಾಕರಿಸಿದ್ದರು. ಅವರು ಇನ್ನೂ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಈ ಕಾರಣದಿಂದಾಗಿ ಅವರು ಇಂಡಿಯಾ ಮೈತ್ರಿಕೂಟಕ್ಕೆ ಸೇರುವ ಬಗ್ಗೆ ಊಹಾಪೋಹಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಮಾಯಾವತಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಕಿರಿಕ್ ಚೀನಾಗೆ ಠಕ್ಕರ್ – ವಿಶ್ವದ ಅತೀ ಉದ್ದದ ದ್ವಿಪಥ ಸುರಂಗ ಲೋಕಾರ್ಪಣೆಗೊಳಿಸಿದ ಮೋದಿ