Lok Sabha 2024: ಉಡುಪಿ-ಚಿಕ್ಕಮಗಳೂರು ಟಿಕೆಟ್‌ ಗಿಟ್ಟಿಸಿ ಹ್ಯಾಟ್ರಿಕ್‌ ನಗೆ ಬೀರ್ತಾರಾ ಕರಂದ್ಲಾಜೆ?

Public TV
5 Min Read
Udp and CKM

– ಚುನಾವಣೆ ಹೊತ್ತಲ್ಲೇ ಕೇಂದ್ರ ಸಚಿವೆ ವಿರುದ್ಧ ‘ಗೋ ಬ್ಯಾಕ್’‌ ಅಭಿಯಾನ
– ಸಿಎಂ ಅಂಗಳದಲ್ಲಿ ‘ಕೈ’ ನಾಯಕರ ಟಿಕೆಟ್‌ ಗುದ್ದಾಟ

ಬಿಜೆಪಿ ಭದ್ರಕೋಟೆ ಉಡುಪಿ-ಚಿಕ್ಕಮಗಳೂರು (Udupi – Chikkamagaluru) ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ (Lok Sabha Elections 2024) ರಂಗೇರಿದೆ. ಈ ಬಾರಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದ್ದಾರೆ. ಸ್ಥಳೀಯವಾಗಿ ಕಾರ್ಯಕರ್ತರಿಂದ ಶೋಭಾ ವಿರುದ್ಧ ಒಂದಷ್ಟು ಅಸಮಾಧಾನ ಇದೆ. ಆದರೂ ಅವರಿಗೇ ಟಿಕೆಟ್ ಎಂಬುದನ್ನು ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಕ್ಷೇತ್ರದಲ್ಲಿ ಕಮಲಕ್ಕೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಕೂಡ ಸಿದ್ಧತೆ ನಡೆಸಿದೆ. ಹಾಗಾದ್ರೆ, ಕಾಫಿನಾಡ ಲೋಕಸಭಾ ಕ್ಷೇತ್ರದ ಚುನಾವಣಾ ರಾಜಕೀಯ ಸ್ಥಿತಿ-ಗತಿ ಹೇಗಿದೆ?

Udp and CKM 2

ಕ್ಷೇತ್ರ ಪರಿಚಯ
2002 ರಲ್ಲಿ ಡಿಲಿಮಿಟೇಶನ್ ಕಮಿಷನ್ ಆಫ್ ಇಂಡಿಯಾದ ಶಿಫಾರಸಿನ ಆಧಾರದ ಮೇಲೆ 2008 ರಲ್ಲಿ ಕ್ಷೇತ್ರ ರಚನೆಯಾಯಿತು. 2009 ರಲ್ಲಿ ಕ್ಷೇತ್ರದಲ್ಲಿ ಮೊದಲ ಚುನಾವಣೆ ನಡೆಯಿತು. ಅದರ ಮೊದಲ ಸದಸ್ಯರಾಗಿ ಬಿಜೆಪಿ ಡಿ.ವಿ.ಸದಾನಂದ ಗೌಡ (D.V.Sadananda Gowda) ಆಯ್ಕೆಯಾಗಿ ಸಂಸತ್ ಪ್ರವೇಶಿಸಿದರು. ಇದನ್ನೂ ಓದಿ: Lok Sabha 2024: ‘ಲೋಕ’ ಸಮರಕ್ಕೆ ಬಳ್ಳಾರಿ ಅಖಾಡ ಸಜ್ಜು; ಕಾಂಗ್ರೆಸ್‌ಗೆ ಪ್ರತಿಷ್ಠೆ, ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ

ಶೋಭಾಗೆ ಹ್ಯಾಟ್ರಿಕ್ ಗೆಲುವು?
2019ರಲ್ಲಿ ಅಖಾಡಕ್ಕಿಳಿದಿದ್ದ ಶೋಭಾ ಕರಂದ್ಲಾಜೆ (Shobha Karandlaje) ಮೋದಿ ಹೆಸರಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಬೀಗಿದ್ರು. ಈ ಬಾರಿ ಮತ್ತೊಮ್ಮೆ ಅದೇ ಮೋದಿ ಹೆಸರಲ್ಲಿ ಅದೃಷ್ಟ ಪರೀಕ್ಷೆಗೆ ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಕಳೆದ ಬಾರಿ ಜೆಡಿಎಸ್ (JDS) ಜೊತೆ ಮೈತ್ರಿಯಾಗಿ ಉಡುಪಿಯ ಪ್ರಮೋದ್ ಮಧ್ವರಾಜ್ ಮೈತ್ರಿ ಅಭ್ಯರ್ಥಿಯಾಗಿದ್ದರು. ಮೋದಿ ಅಲೆ ಮುಂದೆ ಕೊಚ್ಚಿ ಹೋಗಿದ್ದರು. ಆದರೆ, ಈ ಬಾರಿ ಚಿಕ್ಕಮಗಳೂರಿನಲ್ಲಿ ಐದಕ್ಕೆ ಐದು ಕಾಂಗ್ರೆಸ್ ಗೆದ್ದಿರೋದ್ರಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳ್ಳಿ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಆರತಿ ಕೃಷ್ಣ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಅದೇ ರೀತಿ ಬಿಜೆಪಿಯಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರೋ ಸಿ.ಟಿ.ರವಿ ಕೂಡ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಮಾಜಿ ಸಚಿವ ಡಿ.ಎನ್.ಜೀವರಾಜ್, ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಉಡುಪಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ಬಾರಿ ಬಿಜೆಪಿಯಲ್ಲಿದ್ದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಶೋಭಾ ಕರಂದ್ಲಾಜೆ ಅಥವಾ ಸಿ.ಟಿ.ರವಿಗೆ (C.T.Ravi) ಟಿಕೆಟ್ ಸಿಗುವ ಲಕ್ಷಣಗಳು ದಟ್ಟವಾಗಿದೆ. ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಹೋದ್ರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಮಲದ ಅಭ್ಯರ್ಥಿ ಸಿ.ಟಿ.ರವಿ ಅಥವಾ ಡಿ.ಎನ್.ಜೀವರಾಜ್ ಆಗಲಿದ್ದಾರೆ ಎನ್ನಲಾಗುತ್ತಿದೆ.

udupi chikkamagaluru

ಉಡುಪಿ-ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳೆಷ್ಟು?
ಎರಡು ಜಿಲ್ಲೆಯಿಂದ ಒಟ್ಟು 8 ತಾಲೂಕುಗಳು ಈ ಜಂಟಿ ಕ್ಷೇತ್ರಕ್ಕೆ ಸೇರಿದೆ. ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು, ಕಾಪು ಕ್ಷೇತ್ರಗಳು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಕಡೂರು ಕ್ಷೇತ್ರಗಳು. ಉಡುಪಿಯ ಐದು ಕ್ಷೇತ್ರದಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಚಿಕ್ಕಮಗಳೂರಿನ ಐದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆದ್ದಿದೆ. ಇದನ್ನೂ ಓದಿ: ವಯಸ್ಸು, ಆರೋಗ್ಯ ಕಾರಣದಿಂದ ಕೆಲವರ ಬದಲಾವಣೆ ಆಗುತ್ತೆ: ಆರ್.ಅಶೋಕ್

ಇಂದಿರಾ ಗಾಂಧಿಗೆ ಪುನರ್ಜನ್ಮ ಕ್ಷೇತ್ರ
2009 ರ ವರೆಗೂ ಚಿಕ್ಕಮಗಳೂರು ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ಬಿಜೆಪಿಯ ಭದ್ರಕೋಟೆಯಾಗಿತ್ತು. ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ ಎಂಬ ಹೆಗ್ಗಳಿಕೆ ಪಾತ್ರವಾದ ಚಿಕ್ಕಮಗಳೂರು ಇಂದಿರಾಗಾಂಧಿ ಸೇರಿ, ಡಿ.ಕೆ.ತಾರಾದೇವಿ, ಡಿ.ಬಿ.ಚಂದ್ರೇಗೌಡರಂತಹ ಘಟಾನುಘಟಿ ಕಾಂಗ್ರೆಸ್ ನಾಯಕರನ್ನ ದೆಹಲಿಗೆ ಕಳಿಸಿದ್ರು. ಆದ್ರೆ, 1990 ರ ಬಳಿಕ ಚಿಕ್ಕಮಗಳೂರು ಸಂಪೂರ್ಣ ಬಿಜೆಪಿಯ ಭದ್ರಕೋಟೆಯಾಗಿದೆ. 2012ರಲ್ಲಿ ಸದಾನಂದಗೌಡರು ಸಿಎಂ ಆದ ಬಳಿಕ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಡ್ಗೆ ಎರಡು ವರ್ಷ ಸಂಸದರಾಗಿ ಇದ್ದದ್ದು ಬಿಟ್ಟರೆ ಕಳೆದ 25 ವರ್ಷಗಳಿಂದ ಕಾಫಿನಾಡು ಬಿಜೆಪಿಯ ಭದ್ರಕೋಟೆಯಾಗಿದೆ. 2009ರಲ್ಲಿ ಕ್ಷೇತ್ರ ವಿಂಗಡಣೆಯ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರಿದರೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು, ಶೃಂಗೇರಿ-ಮೂಡಿಗೆರೆ ಜೊತೆ ಉಡುಪಿಯ ಕುಂದಾಪುರ, ಉಡುಪಿ, ಕಾರ್ಕಳ, ಕಾಪು ಕ್ಷೇತ್ರಗಳು ಸೇರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಗಿ ಹೊರಹೊಮ್ಮಿದೆ. ಅಂದಿನದಿಂದಲೂ 2 ವರ್ಷ ಬಿಟ್ಟರೆ ಜಂಟಿ ಕ್ಷೇತ್ರ ಬಿಜೆಯ ಭದ್ರಕೋಟೆಯೆ.

Indira gandhi

ಈ ಬಾರಿ ವಿಭಿನ್ನ ಕ್ಷೇತ್ರ
2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದಕ್ಕೆ ಐದು ಕಾಂಗ್ರೆಸ್ (Congress) ಗೆದ್ದಿದೆ. ಉಡುಪಿ ಜಿಲ್ಲೆಯಲ್ಲಿ ಐದಕ್ಕೆ ಐದು ಬಿಜೆಪಿ ಗೆದ್ದಿದೆ. ಹಾಗಾಗಿ, ಕಾಂಗ್ರೆಸ್ಸಿಗೆ ಪಂಚ ಗ್ಯಾರಂಟಿಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಐದು ಕಾಂಗ್ರೆಸ್ ಹಿಡಿತದಲ್ಲಿರುವುದರಿಂದ ಉಡುಪಿಯ ಸಾಂಪ್ರದಾಯಿಕ ಕಾಂಗ್ರೆಸ್ ಮತಗಳಿಂದ ನಾವು ಗೆಲ್ಲುತ್ತೇವೆ ಎಂದು ಚುನಾವಣೆಗೆ ಅಣಿಯಾಗುತ್ತಿದ್ದಾರೆ. ಆದರೆ, ಚಿಕ್ಕಮಗಳೂರು-ಉಡುಪಿ ಅಪ್ಪಟ ಮಲೆನಾಡು. ಹಿಂದೂತ್ವದ ಭದ್ರಕೋಟೆ. ಚಿಕ್ಕಮಗಳೂರಲ್ಲಿ ಬಿಜೆಪಿ ಸೋತಿದ್ದರು ಕೂಡ ಸೋಲಿನ ಅಂತರ 100, 700, 5,000 ಮತಗಳಷ್ಟೆ. ಹಾಗಾಗಿ ಬಿಜೆಪಿ ಕೂಡ ಅಯೋಧ್ಯೆ, ಜ್ಞಾನವಾಪಿ, ಪ್ರತ್ಯೇಕ ರಾಷ್ಟ್ರದ ಹೇಳಿಕೆ, ಧರ್ಮ ದಂಗಲ್ ಜೊತೆ ಮೋದಿ ಎಂಬ ಸಮುದ್ರದ ಅಲೆಯಲ್ಲಿ ಯಾರು ನಿಲ್ಲಲ್ಲ ಅಂತ ಬಿಜೆಪಿ (BJP) ಕೂಡ ಗೆಲುವಿನ ನಗೆ ಬೀರಲು ಮುಂದಾಗಿದೆ. ಆದ್ರೆ, ರಾಜ್ಯದ ಚುನಾವಣೆ ಬೇರೆ-ದೇಶದ ಚುನಾವಣೆ ಬೇರೆ ಅನ್ನೋದು ಮತದಾರರಿಗೆ ಚೆನ್ನಾಗಿ ಗೊತ್ತು ಎರಡು ಪಕ್ಷದವರಿಗೂ ಚೆನ್ನಾಗಿ ಗೊತ್ತು.

ಮೈತ್ರಿ ಬಿಜೆಪಿಗೆ ಪ್ಲಸ್?
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಅನುಕೂಲವಾಗಲಿದೆ. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಐದರಲ್ಲೂ ಸೋತಿದೆ. ಆದ್ರೆ ನಾಲ್ಕರಲ್ಲಿ ಸೋಲಿಸಿದ್ದು ಇದೇ ಜೆಡಿಎಸ್. ಅದರಲ್ಲಿ ಕಡೂರು ಹಾಸನ ಲೋಕಸಭಾ ಕ್ಷೇತ್ರ ಸೇರಲಿದೆ. ಅದನ್ನ ಬಿಟ್ಟರೆ, ಚಿಕ್ಕಮಗಳೂರಲ್ಲಿ ಜೆಡಿಎಸ್ ಭೋಜೇಗೌಡ ಜೆಡಿಎಸ್ ಬಿಟ್ಟು ನೇರವಾಗಿ ಸಿ.ಟಿ.ರವಿ ಸೋಲಿಸಲು ಮುಂದಾದ ಪರಿಣಾಮ ಸಿ.ಟಿ.ರವಿ 5 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಮೂಡಿಗೆರೆಯಲ್ಲಿ ಬಿಜೆಪಿಯ ಕುಮಾರಸ್ವಾಮಿ ಜೆಡಿಎಸ್‌ನಿಂದ ನಿಂತು 19 ಸಾವಿರ ಮತ ಪಡೆದು ಬಿಜೆಪಿಯ ಅಭ್ಯರ್ಥಿಯನ್ನ 700 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಶೃಂಗೇರಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ 17 ಸಾವಿರ ಮತ ಪಡೆದು ಬಿಜೆಪಿ ಡಿ.ಎನ್.ಜೀವರಾಜ್‌ರನ್ನ 100 ಮತಗಳ ಅಂತರದಿಂದ ಸೋಲಿಸದ್ದಾರೆ. ಹಾಗಾಗಿ, ಉಡುಪಿ ಕೇಳೋದೇ ಬೇಡ. ಬಿಜೆಪಿಯ ಭದ್ರಕೋಟೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಐದು ಕ್ಷೇತ್ರ ಸೋತಿದ್ದರೂ ಕೂಡ ಬಿಜೆಪಿ ಹಾಗೂ ಹಿಂದುತ್ವದ ಬೆಲ್ಟ್. ಬಿಜೆಪಿಗೆ ಅದೇ ಪ್ಲಸ್. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರವಿದ್ದರೆ ಪ್ರಮಾಣವಚನ ಸ್ವೀಕಾರಕ್ಕೆ ಬಿಡಬಾರದು: ಸಚಿವ ಕೆ.ಎನ್.ರಾಜಣ್ಣ

SHOBHA KARANDLAJE 2

ಕ್ಷೇತ್ರದ ಒಟ್ಟು ಮತದಾರರೆಷ್ಟು?
ಒಟ್ಟು ಮತದಾರರು: 15,56,117
ಪುರುಷರು: 7,56,951
ಮಹಿಳೆಯರು: 7,99,127
ಇತರೆ: 6,158

ಆಕಾಂಕ್ಷಿಗಳು ಯಾರ‍್ಯಾರು?
ಕಾಂಗ್ರೆಸ್: ಜಯಪ್ರಕಾಶ್ ಹೆಗ್ಡೆ (99% ಇವರೇ ಅಭ್ಯರ್ಥಿ), ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಕರ್ನಾಟಕದ ಅನಿವಾಸಿ ಭಾರತೀಯ ಉಪಾಧ್ಯಕ್ಷರು ಡಾ. ಆರತಿ ಕೃಷ್ಣ, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ.
ಬಿಜೆಪಿ: ಸಿ.ಟಿ.ರವಿ, ಶೋಭಾ ಕರಂದ್ಲಾಜೆ (99% ಇವರೇ ಅಭ್ಯರ್ಥಿ), ಡಿ.ಎನ್.ಜೀವರಾಜ್, ಪ್ರಮೋದ್ ಮಧ್ವರಾಜ್

ಕ್ಷೇತ್ರದ ಜಾತಿವಾರು ಬಲ
ಮೊಗವೀರ-ಮೀನುಗಾರ: 1,14,000
ಬಿಲ್ಲವ-ಈಡಿಗ: 1,90,000
ಲಿಂಗಾಯತರು: 1,02,000
ಬಂಟರು-ಶೆಟ್ಟಿ-ಒಕ್ಕಲಿಗ: 1,80,324
ಬ್ರಾಹ್ಮಣ: 1,18,454
ಮುಸ್ಲಿಂ: 1,45,245
ಕ್ರಿಶ್ಚಿಯನ್: 80,500
ಪರಿಶಿಷ್ಟ ಜಾತಿ: 2,10,576
ಪರಿಶಿಷ್ಟ ಪಂಗಡ: 55,067
ಜೈನ: 9,650
ಕೊಂಕಣಿ-ಜಿಎಸ್‌ಬಿ, ಆರ್‌ಎಸ್‌ಬಿ: 10,240
ದೇವಾಡಿಗ: 28,000
ಗಾಣಿಗ: 14,576
ಕೊಂಕಣ ಖಾರ್ವಿ: 11,000
ಒಕ್ಕಲಿಗರು: 1‌,02,788
ಕುರುಬರು: 67,345
ಇತರೆ: 68,719

Share This Article