ಕಾರಿನಲ್ಲಿ ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಹಲ್ಲೆ- ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ

Public TV
1 Min Read
HASSAN ARREST

ಹಾಸನ: ಅರಣ್ಯ ಇಲಾಖೆ (Forest Department) ಆರ್‌ಆರ್‌ಟಿ ಸಿಬ್ಬಂದಿಯೊಬ್ಬ ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ, ಹೊರಗೆಳೆದು ಹಲ್ಲೆ ನಡೆಸಿದ ಘಟನೆ ಸಕಲೇಶಪುರದ (Sakleshpura) ಅಗ್ನಿ ಗ್ರಾಮದಲ್ಲಿ ನಡೆದಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಮದನ್ ಹಲ್ಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ. ಮದನ್‍ಗೆ ಮದುವೆಯಾಗಿದ್ದು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯಿಂದ ದೂರವಾಗಿದ್ದ. ಬಳಿಕ ಗ್ರಾಮದ ಮಹಿಳೆಯೊಬ್ಬರ ಮೊಬೈಲ್ ನಂಬರ್ ಪಡೆದು ಮೆಸೇಜ್ ಮಾಡುತ್ತಿದ್ದ. ಈ ವೇಳೆ ಮಹಿಳೆ, ಮೆಸೇಜ್ ಮಾಡದಂತೆ ಎಚ್ಚರಿಕೆ ನೀಡಿ ನಂಬರ್ ಬ್ಲಾಕ್ ಮಾಡಿದ್ದರು. ಬಳಿಕ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ ಪುತ್ರಿಯ ನಂಬರ್ ಸಂಗ್ರಹಿಸಿ ಆಕೆಗೆ ಕರೆ ಮಾಡುವುದು, ಮೆಸೇಜ್ ಮಾಡುವುದು ಮಾಡಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮದುವೆ ವಾರ್ಷಿಕೋತ್ಸವಕ್ಕೆ ಗಿಫ್ಟ್‌ ಕೊಟ್ಟಿಲ್ಲವೆಂದು ಗಂಡನಿಗೆ ಚಾಕು ಇರಿದ್ಲು – ಬೆಂಗಳೂರಲ್ಲಿ ಘಟನೆ

ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದ ಕಾರಣ ಯುವತಿ ಮನೆಗೆ ಬಂದಿದ್ದಳು. ಮನೆಗೆ ಬಸ್‍ನಲ್ಲಿ ಬರುವಾಗ ಮದನ್ ಪದೇ ಪದೇ ಫೋನ್, ಮೆಸೇಜ್ ಮಾಡುತ್ತಿದ್ದು, ಇದರಿಂದ ಬೇಸತ್ತ ಯುವತಿ, ಮದನ್ ಎಂಬ ವ್ಯಕ್ತಿ ಕಿರುಕುಳ ನೀಡುತ್ತಿದ್ದಾನೆ ಎಂದು ಪೋಷಕರಿಗೆ ತಿಳಿಸಿದ್ದಾಳೆ. ಇತ್ತ ಬೆಂಗಳೂರಿಗೆ ತೆರಳಲು ಕಾರಿನಲ್ಲಿ ಸಕಲೇಶಪುರಕ್ಕೆ ಹೊರಟಿದ್ದ ವೇಳೆ ಮದನ್ ಕರೆ ಮಾಡಿದ್ದಾನೆ. ಇದರಿಂದ ಸಿಟ್ಟಾದ ಯುವತಿ ತನ್ನ ತಾಯಿಗೆ ಹೇಳಿದ್ದಾಳೆ. ಈ ವೇಳೆ ಯುವತಿಯ ತಾಯಿ ದೂರು ಕೊಡುವುದಾಗಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಇದರಿಂದ ಕೆರಳಿದ ಮದನ್ ಯುವತಿ ತೆರಳುತ್ತಿದ್ದ ಕಾರನ್ನು ತಡೆದು ಆಕೆಯ ಮೇಲೆ ಹಲ್ಲೆ ಮಾಡಿ ಬಟ್ಟೆ ಹರಿದು ಎಳೆದಾಡಿದ್ದಾನೆ ಎನ್ನಲಾಗಿದೆ. ಇದನ್ನು ಕಂಡ ಕಾರು ಚಾಲಕ ಯುವತಿಯ ರಕ್ಷಣೆಗೆ ಬಂದಿದ್ದು, ಮದನ್ ಸ್ಥಳದಿಂದ ಎಸ್ಕೇಪ್ ಆಗಿದ್ದ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಬಾಂಬ್ ಬ್ಲಾಸ್ಟ್‌ ತನಿಖೆಗಿಳಿದ ಎನ್ಐಎ – ಸಿಸಿಬಿಯಿಂದ ತನಿಖಾ ಫೈಲ್ NIAಗೆ ಹಸ್ತಾಂತರ

Share This Article