ಕಲಬುರಗಿ ಜಿಲ್ಲಾಡಳಿತಕ್ಕೆ ಭಾರೀ ಮುಖಭಂಗ – ಸೂಲಿಬೆಲೆಯ ಚಿತ್ತಾಪುರ ಕಾರ್ಯಕ್ರಮಕ್ಕೆ ಅನುಮತಿ

Public TV
1 Min Read
Chakravarti Sulibele

ಕಲಬುರಗಿ: ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ನಮೋ ಭಾರತ್‌ (Namo Bharat) ಕಾರ್ಯಕ್ರಮ ನಿರ್ಬಂಧ ಹೇರಿದ್ದ ಕಲಬುರಗಿ ಜಿಲ್ಲಾಡಳಿತಕ್ಕೆ ಭಾರೀ ಮುಖಭಂಗವಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರ ಪ್ರವೇಶಕ್ಕೆ  ಜಿಲ್ಲಾಡಳಿತ ಹೇರಿದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ (High Court of Karnataka, Kalaburagi Bench) ತೆರವುಗೊಳಿಸಿದೆ.

ಗುರುವಾರ ಸಂಜೆ 6 ಗಂಟೆಗೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಪ್ರತಿನಿಧಿಸುವ ಚಿತ್ತಾಪುರ (Chittapur) ಪಟ್ಟಣದ ಬಾಪುರಾವ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಮೋ ಭಾರತ್‌ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ರಾತ್ರೋರಾತ್ರಿ ಜಿಲ್ಲಾಡಳಿತ ರದ್ದು ಮಾಡಿ ಸೂಲಿಬೆಲೆ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.  ಇದನ್ನೂ ಓದಿ: ಮೋದಿ ಸಾಧನೆ ಬಗ್ಗೆ ಮಾತಾಡೋದನ್ನ ಸಹಿಸೋಕಾಗದೆ ಕಾರ್ಯಕ್ರಮ ಕ್ಯಾನ್ಸಲ್: ಸೂಲಿಬೆಲೆ ಕಿಡಿ

ಸೂಲಿಬೆಲೆ ಜಿಲ್ಲೆ ಪ್ರವೇಶಿಸಿದರೆ ಶಾಂತಿ ಕದಡುತ್ತಾರೆ ಹಾಗೂ ಕಾನೂನು ವ್ಯವಸ್ಥೆ ಹಾಳಾಗಬಹುದು ಎಂಬ ನಿಟ್ಟಿನಲ್ಲಿ ಕಲಬುರಗಿ ಸಹಾಯಕ ಆಯುಕ್ತರು ಫೆ.‌29 ರಿಂದ ಮಾರ್ಚ್‌ 4ರವರೆಗೆ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು.  ಇದನ್ನೂ ಓದಿ: 200ಕ್ಕೂ ಅಧಿಕ ಪೊಲೀಸರಿಂದ ಭದ್ರತೆ – ಅಲ್ದೂರಿನಲ್ಲಿ ಸೂಲಿಬೆಲೆಯ ನಮೋ ಭಾರತ್ ಕಾರ್ಯಕ್ರಮ ಯಶಸ್ವಿ

 

ಜಿಲ್ಲಾಡಳಿತದ ಆದೇಶವನ್ನ ಪ್ರಶ್ನಿಸಿ ನಮೋ ಬ್ರಿಗೇಡ್ ಮತ್ತು ಬಿಜೆಪಿ ಹೈಕೋರ್ಟ್ ಮೊರೆ ಹೋಗಿತ್ತು ಅರ್ಜಿಯನ್ನು ಮಾನ್ಯ ಮಾಡಿದ ನ್ಯಾ. ಶ್ರೀಶಾನಂದ ಅವರಿದ್ದ ಪೀಠ, ಈ ಹಿಂದೆ ಕಾರ್ಯಕ್ರಮ ನಡೆಸಲು ಪೊಲೀಸರು ನೀಡಿದ್ದ ಅನುಮತಿಯನ್ನು ನೀಡಬೇಕು. ಪೊಲೀಸರು ನೀಡಿದ್ದ ನಿಯಮಾವಳಿಗೆ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸಬೇಕು. ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಹೇಳಿ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ತೆರವು ಮಾಡಿತು.

ಕೋರ್ಟ್‌ ತೀರ್ಪು ಬಂದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸೂಲಿಬೆಲೆ, ಅಂಬೇಡ್ಕರ್‌ ನೀಡಿದ ಸಂವಿಧಾನದಿಂದ ಧೈರ್ಯವಾಗಿ ಪ್ರಶ್ನೆ ಮಾಡಿ ನಾವು ಕಾರ್ಯಕ್ರಮಕ್ಕೆ ಅನುಮತಿ ಪಡೆದಿದ್ದೇವೆ. ದೇಶ ಭಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ತಾಪುರಕ್ಕೆ ಬರಬೇಕು ಎಂದು ಅವರು ಮನವಿ ಮಾಡಿದರು.

 

Share This Article