ಹೊಸ ಹುಲಿ ಬರ್ತಿದೆ: ಯುವರಾಜ್ ಕುಮಾರ್ ಬೆನ್ನಿಗೆ ನಿಂತ ಶ್ರೀಮುರಳಿ

Public TV
3 Min Read
yuvarajkumar

ಶ್ರೀಮುರಳಿ (Srimuruli) ಗುಡುಗಿದ್ದಾರೆ. ಇಷ್ಟು ದಿನ ಸುಮ್ನನಿದ್ದ ಹುಲಿ ಏಕಾಎಕಿ ಗರ್ಜಿಸಿದೆ. `ದೊಡ್ಮನೆ ಯುಗ ಮುಗಿಯಿತು ಅನ್ನಬೇಡಿ. ಈಗ ಹೊಸ ಹುಲಿ ಬರುತ್ತಿದೆ. ಹುಷಾರಾಗಿರಿ…’ ಹೀಗಂತ ಧಗಧಗಿಸಿದ್ದಾರೆ ಶ್ರೀಮುರಳಿ. ಅದಕ್ಕೆ ಕಾರಣ ಏನು? ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು? ದೊಡ್ಮನೆ ಯುವ ನೆನಪಾಗಿದ್ದೇಕೆ? ಇನ್ನು ಮುಂದೆ ಯರ‍್ಯಾರಿಗೆ ಕಾದಿದೆ ಮಾರಿ ಹಬ್ಬ? ಅದರ ಇಂಚಿಂಚು ಮಾಹಿತಿ ನಿಮ್ಮ ಮುಂದೆ.

Yuvaraj Kumar

ದೊಡ್ಡಮನೆ… ಹೆಡ್ಡಾಫೀಸು… ಅಣ್ಣಾವ್ರ ಮನೆ… ಸದಾಶಿವನಗರದ ಬಂಗಲೆ… ವಾಟ್ ಎ ವರ್ಡ್ಸ್? ಸದಾಶಿವನಗರ ಅಂದರೆ ಸಾಕು ಕರುನಾಡಿನ ಯಾವುದೇ ಮೂಲೆಯಲ್ಲಿ ನಿಂತ ವ್ಯಕ್ತಿಯೂ ಹೇಳುತ್ತಿದ್ದ ಒಂದೇ ಒಂದು ಸಾಲು ಏನು ಗೊತ್ತೆ? `ಓಹ್…ಅಣ್ಣಾವ್ರು ಇರುತ್ತಾರಲ್ಲ ಆ ಏರಿಯಾನಾ?’ ಅದು ನೋಡಿ ರಾಜ್‌ಕುಮಾರ್‌ಗಿದ್ದ ತಾಕತ್ತು. ಅದು ನೋಡಿ ಅಣ್ಣಾವ್ರ ಹೆಸರಿಗಿದ್ದ ದೌಲತ್ತು. ಅದೊಂದೇ ಸಾಕು ರಾಜ್ಕುಮಾರ್ ಆಗಲೂ ಈಗಲೂ ಆಳಿ, ಬೆಳಗಿಮೆರೆಯುತ್ತಿರುವುದು. ಶಿವಣ್ಣ ಬಂದರು. ಜಾಗವನ್ನು ಭರ್ತಿ ಮಾಡಿಕೊಂಡರು. ಅಪ್ಪು ಬಂದ ಮೇಲಂತೂ ಅಣ್ಣಾವ್ರನ್ನೇ ನಾವು ನೋಡುತ್ತಿದ್ದೇವೆ ಎಂದು ಬಿಟ್ಟಿತು ಕರುನಾಡು. ಅಲ್ಲಿಗೆ ನಯಾ ರಾಜಕುಮಾರನ ಕಣ್ಣಲ್ಲಿ ಅಣ್ಣಾವ್ರ ನೆರಳು ದೀಪ ಹಚ್ಚಿತು.

yuvaraj kumar

ಅಪ್ಪು (Puneeth) ನೋಡನೋಡುತ್ತಲೇ ಪುನೀತ್ ರಾಜ್‌ಕುಮಾರ್, ಅಣ್ಣಾವ್ರ ಜಾಗವನ್ನು ತುಂಬಲು ಸಜ್ಜಾದರು. ಸೇಮ್ ಟು ಸೇಮ್ ಅಣ್ಣಾವ್ರ ರೀತಿ ವಿಭಿನ್ನ ಪಾತ್ರಗಳನ್ನು ಮಾಡಿದರು. ಮಾಸ್, ಕ್ಲಾಸ್, ಫ್ಯಾಮಿಲಿ ಮ್ಯಾನ್, ಆಕ್ಷನ್ ಹೀರೋ, ಲವ್ವರ್ ಬಾಯ್…ಎಲ್ಲವೂ ಅಪ್ಪು ಸಿನಿಮಾಗಳಲ್ಲಿ ಹೊಳೆದವು. ಕರುನಾಡು ಆ ದೀಪ ಆರದಂತೆ ನೋಡಿಕೊಳ್ಳಲು ನಿರ್ಧರಿಸಿತು. ಒಂದೊಂದೇ ಸಿನಿಮಾಕ್ಕೆ ಜೀವ ತುಂಬುತ್ತಾ ತುಂಬುತ್ತಾ ಅಪ್ಪು ಕಡೇ ದಿನಗಳಲ್ಲಿ ಮೆರವಣಿಗೆ ಹೊರಟರು. ಅದೇ ರಾಜಕುಮಾರ ಸಿನಿಮಾ. ಅಕ್ಷರಶಃ ಆ ಚಿತ್ರದಲ್ಲಿ ಅಪ್ಪು ಥೇಟ್ ಅಣ್ಣಾವ್ರನ್ನೇ ಮೈ ಮೇಲೆ ಆವಾಹಿಸಿಕೊಂಡಿದ್ದರು. ನಯಾ ರಾಜಕುಮಾರ ಸಿಂಹಾಸನದಲ್ಲಿ ವಿರಾಜಮಾನರಾದರು.

Yuvaraj Kumar 3

ಇಲ್ಲ ದೇವರು ಅದ್ಯಾಕೊ ಕ್ರೂರಿಯಾಗಿಬಿಟ್ಟ. ಕೆಲವೇ ಕೆಲವು ನಿಮಿಷಗಳಲ್ಲಿ ಅಪ್ಪು ಈ ಲೋಕಕ್ಕೆ ವಿದಾಯ ಹೇಳಬೇಕಾಯಿತು. ಅದು ನಂಬುವ ಮಾತಾ? ಅದು ಅರಗಿಸಿಕೊಳ್ಳುವ ವಿಷಯವಾ? ಎದೆ ಎದೆ ಬಡಿದುಕೊಂಡಿತು ಕರುನಾಡು. ವಾರಗಟ್ಟಲೆ ಒಲೆ ಊರಿಯಲಿಲ್ಲ. ನಿದ್ದೆ ಹತ್ತಲಿಲ್ಲ.  ಜೀವ ಕಳೆದುಕೊಂಡವರು ಎಷ್ಟೋ ಮಂದಿ ಸಾಕು ಈ ಜನ್ಮ ಎಂದಿದ್ದು ಸುಳ್ಳಲ್ಲ. ಅದು ಅಪ್ಪು ನೀಡಿದ ಮರ್ಮಾಘಾತ. ಅಲ್ಲಿಂದ ಕೆಲವು ಕಿಡಿಗೇಡಿಗಳು ಬೊಗಳಲು ಆರಂಭಿಸಿದವು. `ಅಣ್ಣಾವ್ರ ಸಾಮ್ರಾಜ್ಯ ಅಷ್ಟೇ…ಇನ್ನು…ಮುಗೀತು ಬಿಡಿ…’ ಎಲುಬಿಲ್ಲದ ನಾಲಿಗೆ ಅಲ್ಲಾಡಿದವು. ಅದಕ್ಕೆ ಉತ್ತರ ಎನ್ನುವಂತೆ ಶ್ರೀಮುರಳಿ ಗುಡುಗಿದ್ದಾರೆ. `ಯುವ  (Yuvaraj Kumar) ಹುಲಿ ಬರ್ತಿದೆ, ನೋಡ್ತಾ ಇರಿ…’

yuvarajkumar 1

ಶ್ರೀಮುರುಳಿ ಹೇಳಿದ್ದು ಇಷ್ಟೇ. ಆದರೆ ಅದರಲ್ಲಿ ಅದೆಷ್ಟೋ ವರ್ಷಗಳ ಕಿಚ್ಚು ಕೆರಳಿತ್ತು. ಮನಸೊಳಗೆ ಹುದುಗಿಸಿಟ್ಟಿದ್ದ ನೋವು, ಅಸಮಾಧಾನ, ಸಂಕಟ ಎಲ್ಲವನ್ನೂ ಅದೊಂದು ಮಾತಿನಲ್ಲಿ ಹೇಳಿ ನಿರಮ್ಮಳವಾದರು ಶ್ರೀಮುರುಳಿ. ಅಪ್ಪು ಹೋದ ಮೇಲೆ ಹಿಂದಿಂದೆ ಕುಹಕ ಮಾಡಿದವರು ಅದ್ಯಾವುದೋ ಶಾಪ ಎಂದು ಹೀಗಳೆದವರು. ಅಪ್ಪು ಹೋದ ಮೇಲೆ ನಮ್ಮದೇ ಸಾಮ್ರಾಜ್ಯ ಎಂದು ವಿಕೃತಿ ತೋರಿಸಿದವರಿಗೆ ಮುರುಳಿ ಮರಳಿ ಮರಳಿ ಹೊರಳಿ ಏಳದಂತೆ ಉತ್ತರ ನೀಡಿದ್ದಾರೆ. ಪರಿಣಾಮ ಕಣ್ಣ ಮುಂದಿದೆ. ಯುವರಾಜ್‌ಕುಮಾರ್ ಯುವನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಯಾರ‍್ಯಾರು ನಶೆ ಏರಿಸಿಕೊಂಡು ಬೊಗಳಿದ್ದರೊ ಅವರಿಗೆಲ್ಲ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ.

 

ಇದು ನೋಡಿ ಶ್ರೀಮುರುಳಿ ಮಾತಿನ ಮರ್ಮ. ಬಣ್ಣದ ಲೋಕ ಅಂದರೆ ಅಸೂಯೆ, ಕೋಪ, ಅಸಹನೆ ಇದ್ದದ್ದೇ. ಆದರೆ ಅದ್ಯಾವಾಗ ದ್ವೇಷಕ್ಕೆ ತಿರುಗುತ್ತದೋ ಆಗಿನಿಂದಲೇ ಆರಂಭ ರಕ್ತಪಾತದ ಸಂಚು, ಸ್ಕೆಚ್ಚು. ಅಂಥ ದೇಹಗಳಿಗೆ ನೀರಿಳಿಸಲು ಯುವ ಮೈ ಕೊಡವಿ ಎದ್ದು ನಿಂತಿದ್ದಾರೆ. ಅಪ್ಪು ಬಿಟ್ಟು ಹೋದ ಸಿಂಹಾಸನ ಖಾಲಿಯಾಗಿದೆ. ಅದರ ಮೇಲೆ ನೀವೇ ಕೂಡಬೇಕು ಎನ್ನುತ್ತಿದ್ದಾರೆ ಜನ. ಬರೀ ಅಪ್ಪು ರಾಜ್ ಭಕ್ತಗಣ ಮಾತ್ರ ಅಲ್ಲ. ಸಕಲ ಅಸಲಿ ಕನ್ನಡಿಗರು ಇದನ್ನೆ ಜಪ ಮಾಡುತ್ತಿದ್ದಾರೆ. ಆ ಯುದ್ಧ ಆರಂಭವಾಗಲಿದೆ. ಇನ್ನೇನಿದ್ದರೂ ದೊಡ್ಮನೆ ಮೆರವಣಿಗೆಯಷ್ಟೇ ಬಾಕಿ.

Share This Article