ಗಂಗಾವತಿಯಲ್ಲಿ ‘ಗಾಲಿ’ಗೆ ಗಾಳ ಹಾಕಿದ ‘ಕೈ’ ಪಡೆ

Public TV
2 Min Read
Gali Janardhan Reddy Congress

ಕೊಪ್ಪಳ: ಗಂಗಾವತಿ (Gangavati) ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ (Iqbal Ansari) ಸ್ಥಳೀಯ ‘ಕೈ’ ನಾಯಕರಿಂದಲೇ 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲಾಯಿತು ಎನ್ನುವ ಆಡಿಯೋ ವೈರಲ್ ಆಗಿದ್ದೇ ತಡ ಕಾಂಗ್ರೆಸ್ (Congress) ಹೈಕಮಾಂಡ್ ಎಚ್ಚೆತ್ತುಕೊಂಡಿದೆ. ಗಂಗಾವತಿಯ ಸದ್ಯದ ಶಾಸಕ ಕೆಆರ್‌ಪಿಪಿ (KRPP) ಸಂಸ್ಥಾಪಕ ಜನಾರ್ದನ ರೆಡ್ಡಿ ಗಾಲಿಯವರಿಗೆ (G. Janardhana Reddy) ಇದೀಗ ಕಾಂಗ್ರೆಸ್ ಗಾಳ ಹಾಕಿದೆ.

ಕೊಪ್ಪಳದ (Koppal) ಗಂಗಾವತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಇಕ್ಬಾಲ್ ಅನ್ಸಾರಿ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳಿದ್ದರೂ ಜಿಲ್ಲೆಯ ‘ಕೈ’ ನಾಯಕರೇ ಅವರ ಸೋಲಿಗೆ ಕಾರಣರಾದರು ಎನ್ನುವ ಅಸಮಾಧಾನವನ್ನು ಅನ್ಸಾರಿ ಇತ್ತೀಚಿಗೆ ಹೊರಹಾಕಿದ್ದರು. ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿ ಜನಾರ್ದನರೆಡ್ಡಿಯವರ ಜೊತೆ ‘ಹೊಂದಾಣಿಕೆ’ ಮಾಡಿಕೊಂಡು ಚುನಾವಣೆಯಲ್ಲಿ ಹಣಿಯುವ ಹವಣಿಕೆ ಮಾಡಿ ಅದರಲ್ಲಿ ಗೆದ್ದಿರುವ ಸ್ಥಳೀಯ ‘ಕೈ’ ನಾಯಕರಿಗೆ ಅಲ್ಪಸಂಖ್ಯಾತ ಬಂಧುಗಳು ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ. ಪ್ರತಿಯೊಬ್ಬ ಮುಸ್ಲಿಂ ಮತದಾರರ ಮನೆಮನೆಗೆ ತೆರಳಿ ತಮಗಾದ ಅನ್ಯಾಯವನ್ನು ಹೇಳುವುದಾಗಿ ಅನ್ಸಾರಿ ಹಾಕಿರುವ ಆಕ್ರೋಶದ ಬಾಂಬ್‌ಗೆ ಕೈ ನಾಯಕರು ನಡುಗಿದ್ದಾರೆ. ಇದನ್ನೂ ಓದಿ: ನಂಬರ್‌ ಗೇಮ್‌ನಲ್ಲಿ ಮೂರು ಪಕ್ಷಗಳು – ಬಿಜೆಪಿ ಅತೃಪ್ತರು, ರೆಡ್ಡಿ ನಡೆ ಕುತೂಹಲ

ಕೆಆರ್‌ಪಿಪಿ ವಿಲೀನದ ಪ್ರತಿತಂತ್ರ:
ಅನ್ಸಾರಿ ಆಡಿಯೋ ಬಾಂಬ್‌ನಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ಹೈಕಮಾಂಡ್, ಅದಕ್ಕೆ ತಕ್ಕ ಪ್ರತಿತಂತ್ರ ಹೆಣೆದಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿಶ್ವಾಸ ಕುದುರಿಸುವಲ್ಲಿ ಯಶಸ್ವಿಯಾಗಿರುವ ಕೈ ಪಡೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕಾಂಗ್ರೆಸ್ ಬೆಂಬಲಿಸುವ ಭರವಸೆಯನ್ನು ಗಾಲಿ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ (Bengaluru) ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಮ್ಮುಖದಲ್ಲಿ ಮೊದಲ ಹಂತದ ಮಾತುಕತೆ ನಡೆದಿದ್ದು, ಬರುವ ದಿನಗಳಲ್ಲಿ ಕೆಆರ್‌ಪಿಪಿ ಕಾಂಗ್ರೆಸ್‌ನೊಂದಿಗೆ ವಿಲೀನವಾಗುವ ಸಾಧ್ಯತೆಗಳಿವೆ ಎಂಬ ಸಂದೇಶ ಅನ್ಸಾರಿ ಪಡೆಗೆ ತಲುಪಿದೆ. ಇದನ್ನೂ ಓದಿ: ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಲ್ಲಿ ದುಡ್ಡಿಲ್ಲ: ಸ್ವಪಕ್ಷದ ವಿರುದ್ಧ ಶಾಸಕ ಅಲ್ಲಮಪ್ರಭು ಪಾಟೀಲ್ ಅಸಮಾಧಾನ

ಕಾಂಗ್ರೆಸ್ ಹಾಗೂ ಅನ್ಸಾರಿ ನಡುವಿನ ಹಗ್ಗಜಗ್ಗಾಟದಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಮತದಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಸಮುದಾಯದ ಪರವಾಗಿರುವ ಪಕ್ಷವನ್ನು, ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕೋ? ಸಮುದಾಯದ ಮುಖಂಡ ಅನ್ಸಾರಿ ನಿಲುವನ್ನು ಬೆಂಬಲಿಸಬೇಕೋ? ಎನ್ನುವ ಗೊಂದಲ ಇದೀಗ ಅಲ್ಪಸಂಖ್ಯಾತ ಮತದಾರರಲ್ಲಿ ಉದ್ಭವಿಸಿದೆ. ಇದನ್ನೂ ಓದಿ: ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕೆಂದು ಜನ ನಿರೀಕ್ಷಿಸುತ್ತಿದ್ದಾರೆ, ನಾನು ಯೋಚನೆ ಮಾಡುತ್ತಿದ್ದೇನೆ: ಡಾ. ಮಂಜುನಾಥ್

Share This Article