ಗೇರುಸೊಪ್ಪೆಯ ವೀರರಾಣಿ ಚೆನ್ನಭೈರಾದೇವಿಯ ಅಭೇದ್ಯ ಕಾನೂರು ಕೋಟೆ!

Public TV
2 Min Read
Kanuru kote

ಕಾಳುಮೆಣಸಿನ ರಾಣಿ ಎಂದೇ ಹೆಸರಾಗಿದ್ದ ರಾಣಿ ಚೆನ್ನಭೈರಾದೇವಿ (Rani Chennabhairadevi) ಸಾಳುವ ವಂಶದ ರಾಣಿ. 16ನೇ ಶತಮಾನದಲ್ಲಿ ಗೇರುಸೊಪ್ಪವನ್ನು (Gerusoppa) ರಾಜಧಾನಿಯಾಗಿಟ್ಟುಕೊಂಡು 1552ರಿಂದ 1606 ಸುಮಾರು 54 ವರ್ಷಗಳ ಕಾಲ ಆಕೆ ಆಳ್ವಿಕೆ ನಡೆಸಿದ್ದಳು. ಗೇರುಸೊಪ್ಪ ರಾಜಧಾನಿಯಾದರೂ ಪೋರ್ಚುಗೀಸರು ಹಾಗೂ ಬೇರೆ ರಾಜರುಗಳ ದಾಳಿಯಿಂದ ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳಲು ರಹಸ್ಯ ಕೋಟೆಯೊಂದನ್ನು ಆಕೆ ನಿರ್ಮಿಸಿಕೊಂಡಿದ್ದಳು. ಅದೇ ಈ ಕಾನೂರು ಕೋಟೆ.

ಈ ಕೋಟೆ ಸಾಗರ (Sagar) ತಾಲೂಕಿನ ಕೋಗಾರ್‌ ಅರಣ್ಯ ಪ್ರದೇಶದ ಕಾನೂರು ಎಂಬ ಶರಾವತಿ ವನ್ಯಜೀವಿ ಸೂಕ್ಷ್ಮ ವಲಯದಲ್ಲಿದೆ. ಈ ಕೋಟೆಯನ್ನು ತಲುಪಬೇಕಾದರೆ ಕಾನೂರಿನಿಂದ ಕೋಟೆಗೆ (Kanuru Fort) ಹತ್ತು ಕಿಲೋಮೀಟರ್‌ ಬೆಟ್ಟವೇರಬೇಕು. ದಟ್ಟ ಕಾಡಿನ ನಡುವಿನ ದುರ್ಗಮ ಶಿಖರದ ತಲೆಯ ಮೇಲೆ ಮಾನವ ನಿರ್ಮಿತ ಮಹದಚ್ಚರಿ ಈ ಕಾನೂರು ಕೋಟೆ ಎಂದರೆ ತಪ್ಪಾಗಲಾರದು. ಸುಮಾರು 54 ವರ್ಷಗಳ ಕಾಲ ಹೈವ, ತುಳುವ, ಕೊಂಕಣ ಪ್ರದೇಶಗಳನ್ನು ಗೇರುಸೊಪ್ಪೆಯನ್ನು ಕೇಂದ್ರವಾಗಿಟ್ಟುಕೊಂಡು ರಾಣಿ ಚೆನ್ನಭೈರಾದೇವಿ ಇಲ್ಲಿ ಆಡಳಿತ ನಡೆಸಿದ್ದಳು.‌ ಈ ಸ್ಥಳವನ್ನು ಗೇರುಸೊಪ್ಪ ಎಂದು ಸಹ ಕರೆಯಲಾಗುತ್ತದೆ.

Kanuru kote 2

ಚೆನ್ನಭೈರಾದೇವಿ ಆಳ್ವಿಕೆಯಲ್ಲಿ ಯೂರೋಪಿನ ದೇಶಗಳಿಗೆ ಇಲ್ಲಿಂದ ಕಾಳುಮೆಣಸು, ದಾಲ್ಚಿನಿ, ಶುಂಠಿ, ಗಂಧ ಹಾಗೂ ಇನ್ನಿತರ ವಸ್ತುಗಳು ರಫ್ತಾಗುತ್ತಿತ್ತು. ರಾಣಿಯ ಕಾಲದಲ್ಲಿ ನಿರ್ಮಾಣವಾದ ಮಿರ್ಜಾನ್‌ ಕೋಟೆ ಹಾಗೂ ಚತುರ್ಮುಖ ಬಸದಿ ಇಂದಿಗೂ ಕಾಣಬಹುದು.

ಗೇರುಸೊಪ್ಪೆ ಆಕೆಯ ರಾಜಧಾನಿಯಾಗಿದ್ದು, ಅದು ಸುಸಜ್ಜಿತ ನಗರವಾಗಿತ್ತು. ಹೆಸರಿಗೆ ರಾಜಧಾನಿ ಗೇರುಸೊಪ್ಪೆಯೇ ಆಗಿದ್ದರೂ, ತನ್ನ ಗುಪ್ತ ಧನ, ಗುಪ್ತ ದಳ ಮತ್ತು ಆಪತ್ತಿನ ಸಂದರ್ಭದಲ್ಲಿ ತನ್ನ ರಹಸ್ಯ ವಾಸ್ತವ್ಯಕ್ಕೆ ಈ ಕೋಟೆಯನ್ನು ನಿರ್ಮಿಸಲಾಗಿತ್ತು. ಕೋಟೆಯ ಮೂರು ದಿಕ್ಕಿನಲ್ಲಿ ಸಾವಿರಾರು ಅಡಿಗಳಿಗೂ ಆಳವಾದ ಕಣಿವೆ ಇದ್ದು, ಯಾವೊಬ್ಬ ಶತ್ರುವು ತಕ್ಷಣಕ್ಕೆ ದಾಳಿ ಎಸಗಲು ಸಾಧ್ಯವಾಗದಂತೆ ಈ ಕೋಟೆ ರಚನೆಯಾಗಿದೆ.

Kanuru kote 1

ಪೋರ್ಚುಗೀಸ್ ಕ್ಯಾಪ್ಟನ್ ಲೂಯೀಸ್ ದೆ ಅಟಾಯ್ದೆ ಹೊನ್ನಾವರದ ಮೇಲೆ ದಾಳಿ ನಡೆಸಿ, ಇನ್ನೂ ಗೇರುಸೊಪ್ಪೆಯ ಕೋಟೆಯನ್ನು ಆಕ್ರಮಿಸಲು ಬಂದಾಗ ಆ ಸ್ಥಳದಲ್ಲಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿ ರಾಣಿ ಕಾನೂರಿನಲ್ಲಿರುವುದನ್ನು ತಿಳಿದು ಅವಳನ್ನು ಬಂಧಿಸಲು ಬಂದಾಗ ಇದೇ ಕೋಟೆಯ ಮೇಲಿಂದ ಕಲ್ಲುಗಳನ್ನು ಉರುಳಿಸಲಾಗಿತ್ತು. ಈ ವೇಳೆ ಕೋಟೆಯನ್ನು ವಶಪಡಿಸಿಕೊಳ್ಳುವ ಕನಸನ್ನು ಬಿಟ್ಟು ಪೋರ್ಚೂಗೀಸ್‌ ಸೇನೆ ತೆರಳಿತ್ತು. 

ಬಳಿಕ ರಾಣಿ ಚೆನ್ನಭೈರಾದೇವಿ 1606ರಲ್ಲಿ ಕೆಳದಿಯ ಅರಸು ಹಿರಿಯ ವೆಂಕಟಪ್ಪ ನಾಯಕ ಮತ್ತು ಬಿಳಿಗಿಯ ಅರಸರು ಒಪ್ಪಂದ ಮಾಡಿಕೊಂಡು ದಳವಾಯಿ ಲಿಂಗಣ್ಣ ಎನ್ನುವ ಸರದಾರನ ಮೂಲಕ ಮೋಸದಿಂದ ಸೆರೆ ಹಿಡಿಸುತ್ತಾರೆ. ನಂತರ ಆಕೆಯನ್ನು ಹಳೆ ಇಕ್ಕೇರಿ ಕೋಟೆಯಲ್ಲಿ ಬಂಧನದಲ್ಲಿಟ್ಟು ಆಕೆ ಅಲ್ಲಿಯೇ ಕೊನೆಯುಸಿರೆಳೆಯುತ್ತಾಳೆ.

ಕೆಳದಿಯ ನಾಯಕರು ಕೋಟೆಯನ್ನು ವಶಪಡಿಸಿಕೊಂಡ ನಂತರ ಇದನ್ನು ಕೆಳದಿ ಕೋಟೆ ಎಂದು ಕರೆಯುತ್ತಿದ್ದರಂತೆ. ವೀರ ಮಹಿಳೆಯ ಶಕ್ತಿಕೇಂದ್ರವಾಗಿ ಮೆರೆದಿದ್ದ ಕಾನೂರು ಕೋಟೆ ಇಂದು ಸರ್ಕಾರ ಹಾಗೂ ಜನರ ನಿರ್ಲಕ್ಷ್ಯದಿಂದ ಅವನತಿಯ ಸ್ಥಿತಿ ತಲುಪಿದೆ. ಕೋಟೆಯಲ್ಲಿರುವ ಜೈನಮಂದಿರ ಹಾಗೂ ಶಿವಾಲಯ ನಿಧಿ ಕಳ್ಳರ ದಾಳಿಗೆ ತುತ್ತಾಗುತ್ತಿದೆ. ಇನ್ನಾದರೂ ಸಂಶೋಧಕರು, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಿದರೆ ಉತ್ತಮ ಪ್ರವಾಸಿ ತಾಣ ಹಾಗೂ ಐತಿಹಾಸಿಕ ಸ್ಮಾರಕ ಮುಂದಿನ ಪೀಳಿಗೆಗೆ ಉಳಿಯಲಿದೆ. 

ಹೋಗೋದು ಹೇಗೆ?: ಈ ಕೋಟೆ ಸಾಗರದಿಂದ 71 ಕಿ.ಮೀ ದೂರ ಇದ್ದು, ಸಾಗರ ಹಾಗೂ ಭಟ್ಕಳ ಮಾರ್ಗದ ನಡುವಿನ ಕೋಗಾರ್‌ ಸಮೀಪ ಇದೆ. ಈ ಕೋಟೆ ಹಾಗೂ ಅರಣ್ಯ ಪ್ರದೇಶಕ್ಕೆ ತೆರಳಲು ಸಾಗರದ ಅರಣ್ಯ ಇಲಾಖೆಯ ಅಧಿಕಾರಿಗಳ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಅರಣ್ಯ ಇಲಾಖೆ ವಾಹನಗಳನ್ನು ಹೊರತುಪಡಿಸಿದರೆ ಖಾಸಗಿ ವಾಹನಗಳಿಗೆ ಸಹ ಅನುಮತಿ ಕಡ್ಡಾಯ. 

Share This Article