ನಾನು ಲೋಕಸಭೆಗೆ ನಿಲ್ಲೋದಿಲ್ಲ: ಸಚಿವ ಹೆಚ್.ಸಿ.ಮಹದೇವಪ್ಪ ಸ್ಪಷ್ಟನೆ

Public TV
2 Min Read
h.c.mahadevappa

– ಚಾಮರಾಜನಗರದಲ್ಲಿ ಪುತ್ರನ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ ಸಚಿವ
– ಸಮಯ ಬಂದಾಗ ಸಚಿವರು ನಿಲ್ಲಬೇಕು ಎಂಬ ಡಿಕೆಶಿ ಮಾತಿಗೆ ಮಹದೇವಪ್ಪ ಹೇಳಿದ್ದೇನು?

ಬೆಂಗಳೂರು: ಅನಗತ್ಯ ಗೊಂದಲ ಬೇಡ. ನಾನು ಲೋಕಸಭೆಗೆ (Lok Sabha Election 2024) ನಿಲ್ಲೋದಿಲ್ಲ ಎಂದು ಸಚಿವ ಹೆಚ್.ಸಿ.ಮಹದೇವಪ್ಪ (H.C.Mahadevappa) ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಶನಿವಾರ ಭಾರತ ಸಂವಿಧಾನ ಹಾಗೂ ಐಕ್ಯತಾ ಸಮಾವೇಶಕ್ಕೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಚಾಮರಾಜನಗರ ಕ್ಷೇತ್ರ ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಸ್ಪರ್ಧೆ ಮಾಡಲ್ಲ, ಟಿಕೆಟ್ ಕೇಳಿಲ್ಲ. ಹೈಕಮಾಂಡ್ ಯಾರನ್ನೇ ನಿಲ್ಲಿಸಿದರೂ ಬೆಂಬಲ ನೀಡುತ್ತೇನೆ. ಸುನೀಲ್ ಬೋಸ್‌ಗೆ ಕೊಡಿ ಎಂದು ಕ್ಷೇತ್ರದ ಶಾಸಕರು, ಮುಖಂಡರು ಹೇಳ್ತಿದ್ದಾರೆ. ಸುನೀಲ್ ಬೋಸ್ ಹೆಸರೂ ಕೂಡಾ ಪ್ಯಾನೆಲ್‌ನಲ್ಲಿದೆ ಎಂದು ಚಾಮರಾಜನಗರದಲ್ಲಿ ಪುತ್ರನ ಸ್ಪರ್ಧೆಯ ಸುಳಿವು ಕೊಟ್ಟರು. ಇದನ್ನೂ ಓದಿ: ವಿಚಾರಣೆಗೆ ಖುದ್ದು ಹಾಜರಾಗುವಂತೆ ಕೇಜ್ರಿವಾಲ್‍ಗೆ ಕೋರ್ಟ್ ಆದೇಶ

siddaramaiah h.c.mahadevappa

ಅನಗತ್ಯ ಗೊಂದಲ ಬೇಡ, ನಾನು ಲೋಕಸಭೆಗೆ ನಿಲ್ಲೋದಿಲ್ಲ. ನಲವತ್ತು ವರ್ಷಗಳಾಯ್ತು ನಾನು ರಾಜಕೀಯಕ್ಕೆ ಬಂದು. ಸರ್ವೆ ಮಾಡಿಸಿಕೊಂಡು ಹೆಸರು ಬರೋ ಹಾಗೆ ಮಾಡ್ಕೋಬೇಕಾ ನಾನು? ಚಾಮರಾಜನಗರ ಕಾಂಗ್ರೆಸ್‌ನ ಭದ್ರಕೋಟೆ. ಎದುರಾಳಿಗಳು ಯಾರೇ ನಿಂತರೂ ಕಾಂಗ್ರೆಸ್ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರ ಸ್ಪರ್ಧೆಗೆ ಹೈಕಮಾಂಡ್ ಸೂಚನೆ ವಿಚಾರವಾಗಿ ಮಾತನಾಡಿ, ನಾನು ಲೋಕಸಭೆ ಚುನಾವಣೆಗೆ ನಿಲ್ಲೋದಿಲ್ಲ. ಸಿಎಂ ಎದುರೇ ಈ ಮಾತು ಹೇಳಿದ್ದೀನಿ. ಸಿಎಂ, ಡಿಸಿಎಂ ಬೆಸ್ಟ್ ಅಭ್ಯರ್ಥಿಗಳು ಲೋಕಸಭೆಗೆ. ಅವರಿಗೆ ಯಾವ ಕ್ಷೇತ್ರ ಕೊಡಬೇಕೆಂದು ನೀವೇ ಹುಡುಕಿ, ಸರ್ವೆ ಮಾಡಿಸಿ. ಸಚಿವರು ಸ್ಪರ್ಧೆ ಮಾಡಬೇಕು, ತ್ಯಾಗ ಮಾಡಬೇಕು ಅನ್ನೋ ಹೈಕಮಾಂಡ್ ಸೂಚನೆ ಗೊತ್ತಿಲ್ಲ. ನಾನೂ ಪಕ್ಷಕ್ಕೆ ಬೇಕಾದಷ್ಟು ತ್ಯಾಗ ಮಾಡಿದ್ದೀನಿ. ಒಂದು ಸಿದ್ಧಾಂತ ಇಟ್ಕೊಂಡು ಹೋರಾಟ ಮಾಡೋನು ನಾನು. ನಾನು ಅಧಿಕಾರಕ್ಕಾಗಿ ಇರೋನಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಏಕಾಏಕಿ ಮಲ್ಲಿಕಾರ್ಜುನ ಖರ್ಗೆಗೆ Z+ ಸೆಕ್ಯೂರಿಟಿ

ಸಚಿವರ ಸ್ಪರ್ಧೆ ಕುರಿತ ಪ್ರಶ್ನೆಗಳಿಗೆ ತಾಳ್ಮೆ ಕಳೆದುಕೊಂಡ ಮಹಾದೇವಪ್ಪ, ಸಮಯ ಬಂದಾಗ ಸಚಿವರು ನಿಲ್ಲಬೇಕು ಎಂಬ ಡಿಕೆಶಿ ಹೇಳಿಕೆ ಕುರಿತು ಮಾತನಾಡಿ, ಅಧ್ಯಕ್ಷರಾಗಿ ಅವರು ಹಾಗೆ ಹೇಳಲೇಬೇಕು. ಹೇಳದೇ ಇರಕ್ಕಾಗಲ್ಲ, ಅವರು ಹೇಳ್ತಾರೆ ಎಂದರು.

ನಾನು ಮಗನ ಪರ ಬೇಡಿಕೆ ಇಟ್ಟಿಲ್ಲ. ಅದರ ಬಗ್ಗೆ ಹೈಕಮಾಂಡ್ ನಾಯಕರೂ ನನ್ನ ಕೇಳಿಲ್ಲ. ಮೂರು ಸಲದಿಂದ ಸುನೀಲ್ ಬೋಸ್‌ಗೆ ಅಸೆಂಬ್ಲಿ ಟಿಕೆಟ್ ಸಿಕ್ಕಿಲ್ಲ. ಆದರೂ ಬೇಸರ ಮಾಡಿಕೊಳ್ಳದೇ ಕೆಲಸ ಮಾಡ್ತಿದ್ದಾನೆ. ಸುನೀಲ್ ನನ್ನ ಮಗ ಅನ್ನೋದಕ್ಕಿಂತ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದರಲ್ಲದೇ, ನಾವು ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ತೇವೆ. ಎಲ್ಲ ಒಗ್ಗಟ್ಟಿನಲ್ಲಿ ಕೆಲಸ ಮಾಡ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ

ಸಂವಿಧಾನದ ಮಹತ್ವ ಬಗ್ಗೆ ಜಾಗೃತಿ ಮೂಡಿಸಲು ಸಮಾವೇಶ ಮಾಡಲಾಗ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಸಂವಿಧಾನ ಮತ್ತು ಐಕ್ಯತಾ ಸಮಾವೇಶ ಆಯೋಜನೆ ಮಾಡಲಾಗುವುದು. ಇದೇ ತಿಂಗಳು 24, 25 ರಂದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಚಿವ ಮಹದೇವಪ್ಪ ಅವರು, ಭಾರತ ಸಂವಿಧಾನ ಹಾಗೂ ಐಕ್ಯತಾ ಸಮವೇಶದ ಲೋಗೋ ಅನವಾರಣಗೊಳಿಸಿದರು.

Share This Article