ದುಬೈ: UAE ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ (Mohammed bin Zayed Al Nahyan) ಅವರಿಗೆ ಎದ್ದು ನಿಂತು ಗೌರವ ಸಲ್ಲಿಸುವಂತ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮನವಿ ಮಾಡಿಕೊಂಡರು.
ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ಹಿಂದೂ ದೇಗುಲ (Hindu Temple Abudhabi) ಉದ್ಘಾಟಿಸಿ ಮಾತನಾಡಿದ ಅವರು, ಈ ದೇವಾಲಯವು ಏಕತೆ ಮತ್ತು ಸೌಹಾರ್ದತೆಯ ಸಂಕೇತವಾಗಲಿದೆ. ದೇವಾಲಯದ ನಿರ್ಮಾಣದಲ್ಲಿ ಯುಎಇ ಸರ್ಕಾರದ ಪಾತ್ರ ಶ್ಲಾಘನೀಯವಾಗಿದೆ ಎಂದರು.
ಇಲ್ಲಿಯವರೆಗೆ ಬುರ್ಜ್ ಖಲೀಫಾ, ಫ್ಯೂಚರ್ ಮ್ಯೂಸಿಯಂ, ಶೇಖ್ ಜಾಯೆದ್ ಮಸೀದಿ ಮತ್ತು ಇತರ ಹೈಟೆಕ್ ಕಟ್ಟಡಗಳಿಗೆ ಹೆಸರುವಾಸಿಯಾಗಿದ್ದ ಯುಎಇ ಈಗ ಮತ್ತೊಂದು ಸಾಂಸ್ಕೃತಿಕ ಅಧ್ಯಾಯವನ್ನು ಸೇರಿಸಿದೆ. ಮುಂಬರುವ ದಿನಗಳಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂಬುದಾಗಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ
ಇನ್ನು ಮುಂದೆ ಯುಎಇಗೆ ಬರುವವರ ಸಂಖ್ಯೆಯೂ ಹೆಚ್ಚುತ್ತದೆ. ಈ ಮೂಲಕ ಜನರ ಸಂಪರ್ಕವೂ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಇಂದು ನಾನು ಪ್ರಪಂಚದಾದ್ಯಂತ ವಾಸಿಸುವ ಲಕ್ಷಾಂತರ ಭಾರತೀಯರ ಪರವಾಗಿ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹಾಗೂ ಯುಎಇ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಯುಎಇ ಉಪ-ರಾಷ್ಟ್ರಪತಿ ಭಾರತೀಯ ಕಾರ್ಮಿಕರ ಆಸ್ಪತ್ರೆ ನಿರ್ಮಾಣಕ್ಕಾಗಿ ದುಬೈನಲ್ಲಿ ಭೂಮಿಯನ್ನು ನೀಡುವುದಾಗಿ ಘೋಷಿಸಿದ್ದಾರೆ ಎಂದು ಇದೇ ವೇಳೆ ಮೋದಿ ತಿಳಿಸಿದರು.