– ಜನಪ್ರಿಯ ಘೋಷಣೆಗಳಿಲ್ಲದೇ ಅಧಿಕಾರಕ್ಕೆ ಬರುವ ವಿಶ್ವಾಸ
– ವಿಕಸಿತ ಭಾರತಕ್ಕೆ ಮೋದಿ ಆದ್ಯತೆ
ನವದೆಹಲಿ: ಕೇಂದ್ರ ಸರ್ಕಾರ ಬಜೆಟ್ (Union Budget) ಮಂಡಿಸುವ ಮೊದಲು ಸಾರ್ವತ್ರಿಕ ಚುನಾವಣೆ ಸನಿಹದಲ್ಲಿರುವ ಕಾರಣ ಇದು ಎಲೆಕ್ಷನ್ ಬಜೆಟ್ (Election Budget) ಆಗಬಹುದು. ಜನಪ್ರಿಯತೆಯ ಹಳಿ ಮೇಲೆ ಸಾಗಬಹುದು, ಉಚಿತ ಭರವಸೆಗಳ ಘೋಷಣೆಯಾಗಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದ್ದವು. ಆದರೆ ಬೆಳಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಮಂಡನೆ ಶುರು ಮಾಡಿದ ಸ್ವಲ್ಪ ಹೊತ್ತಿಗೆ ಈ ನಿರೀಕ್ಷೆಗಳು ಹುಸಿಯಾದವು.
ವಿಕಸಿತ ಭಾರತದ ಧ್ಯೇಯದೊಂದಿಗೆ 47.66 ಲಕ್ಷ ಕೋಟಿ ರೂಪಾಯಿ ಗಾತ್ರದ ಮಧ್ಯಂತರ ಬಜೆಟ್ ಅನ್ನು 59 ನಿಮಿಷಗಳಲ್ಲಿ ಮಂಡಿಸಿದರು. ಆರಂಭದಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ವಿತ್ತ ಸಚಿವೆ ವಿವರಿಸಿದರು. ಬಡವರು, ಮಹಿಳೆಯರು, ಯುವಕರು, ರೈತರ ಅಭಿವೃದ್ಧಿ, ಕಲ್ಯಾಣವೇ ಪ್ರಥಮ ಆದ್ಯತೆ ಆಗಬೇಕು ಎಂಬ ಪ್ರಧಾನಿ ಸಲಹೆ ಮೇರೆಗೆ ಬಜೆಟ್ ರೂಪಿಸಲಾಗಿದೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಘೋಷಣೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಉತ್ತಮಗೊಳಿಸಿದೆ ಎಂದು ತಿಳಿಸಿದರು.
ರಾಮ ಮಂದಿರದ (Ram Mandir) ಪ್ರಸ್ತಾಪವನ್ನು ಮಾಡಿದ ಅವರು ಮುಂದಿನ ಐದು ವರ್ಷದಲ್ಲಿ ಭಾರತ (India) ಅದ್ಭುತವಾದ ಪ್ರಗತಿ ಸಾಧಿಸಲಿದೆ ಎಂಬ ಕನಸು ಹರವಿಟ್ಟರು. ಬಳಿಕ ಮಧ್ಯಂತರ ಬಜೆಟ್‌ನ ಪ್ರಮುಖ ಅಂಶಗಳನ್ನು ಓದಿ ಲೋಕಸಭೆಯ ಅನುಮೋದನೆ ಪಡೆದುಕೊಂಡರು. ಎಲ್ಲಿಯೂ ವಿತ್ತ ಸಚಿವೆ ಎಲೆಕ್ಷನ್ ಸಲುವಾಗಿ ಗಿಮಿಕ್ ಮಾಡಿದಂತೆ ಕಾಣಲಿಲ್ಲ. ಯಾವುದೇ ಪುಕ್ಕಟೆ ಯೋಜನೆ ಪ್ರಕಟಿಸಲಿಲ್ಲ. ಜುಲೈನಲ್ಲಿ ನಾವು ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತೇವೆ. ವಿಕಸಿತ ಭಾರತಕ್ಕೆ ಬೇಕಾದ ರೋಡ್ ಮ್ಯಾಪ್ ಪ್ರಕಟಿಸುತ್ತೇವೆ ಎನ್ನುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಗೆಲ್ಲೋದು ನಾವೇ ಎಂಬ ವಿಶ್ವಾಸವನ್ನು ವಿತ್ತ ಸಚಿವೆ ವ್ಯಕ್ತಪಡಿಸಿದರು. ಅಲ್ಲದೇ ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸೋದಾಗಿ ಘೋಷಿಸಿದರು. ಇದನ್ನೂ ಓದಿ: 6 ಬಜೆಟ್, 6 ಸೀರೆ – ಪ್ರತಿ ಬಜೆಟ್‌ನಲ್ಲೂ ಸೀರೆಯಿಂದ್ಲೆ ಸುದ್ದಿಯಾಗ್ತಾರೆ ಕೇಂದ್ರ ಸಚಿವೆ
ಮಧ್ಯಂತರ ಬಜೆಟ್ ಪ್ರಮುಖಾಂಶ
* ಮುಂದಿನ ಐದು ವರ್ಷದಲ್ಲಿ 2 ಕೋಟಿ ಮನೆ ನಿರ್ಮಾಣ
* ರೂಫ್ ಟಾಪ್ ಸೋಲಾರ್ ವ್ಯವಸ್ಥೆ ಮೂಲಕ 1 ಕೋಟಿ ಕುಟುಂಬಗಳಿಗೆ 300 ಯೂನಿಟ್ ಉಚಿತ ವಿದ್ಯುತ್
* ಲಕ್ಷಪತಿ ದೀದಿ ಯೋಜನೆ ವಿಸ್ತರಣೆ – 3 ಕೋಟಿ ಮಹಿಳೆಯರಿಗೆ ವಿಸ್ತರಿಸುವ ಗುರಿ
* ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ವಿಸ್ತರಣೆ
* ಗರ್ಭಕಂಠ ಕ್ಯಾನ್ಸರ್ ತಡೆಗೆ 9-14 ವರ್ಷದ ಹೆಣ್ಮಕ್ಕಳಿಗೆ ಉಚಿತ ವ್ಯಾಕ್ಸಿನ್
* 40 ಸಾವಿರ ಬೋಗಿಗಳಿಗೆ `ವಂದೇಭಾರತ್’ ಲುಕ್
* ಇಂಧನ-ಖನಿಜ-ಸೀಮೆಂಟ್ ರೈಲ್ವೇ ಕಾರಿಡಾರ್
* 2-3 ಹಂತದ ನಗರಗಳಿಗೂ ಏರ್‌ಪೋರ್ಟ್, ವಿಮಾನ ಸಂಪರ್ಕ
* ಡೀಪ್‌ಟೆಕ್ ಉತ್ತೇಜನಕ್ಕಾಗಿ ಹೊಸ ಯೋಜನೆ – 1 ಲಕ್ಷ ಕೋಟಿ ರೂ. ನಿಧಿ ಸ್ಥಾಪನೆ – ಕಡಿಮೆ/ಶೂನ್ಯ ಬಡ್ಡಿದರದಲ್ಲಿ ಸಾಲ
* ರಾಜ್ಯಗಳಿಗೆ 75 ಸಾವಿರ ಕೋಟಿ ರೂ.ವರೆಗೂ ಬಡ್ಡಿರಹಿತ ಸಾಲ – 50 ವರ್ಷದ ದೀರ್ಘಾವಧಿ ಸಾಲ
* ಹೆಚ್ಚು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸಮಿತಿ ರಚನೆ
* ದೇಶಿಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ – ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಇದನ್ನೂ ಓದಿ: ಕೇಂದ್ರ ಬಜೆಟ್ 2024 – ಯಾರಿಗೆ ಲಾಭ? ಯಾರಿಗೆ ನಷ್ಟ?
ಪ್ರಮುಖ ಯೋಜನೆಗಳಿಗೆ ಎಷ್ಟು ಅನುದಾನ?
* ನರೇಗಾ – 86,000 ಕೋಟಿ ರೂ. (ಕಳೆದ ವರ್ಷ 60,000 ಕೋಟಿ ರೂ.)
* ಆಯುಷ್ಮಾನ್ ಭಾರತ್ – 7,500 ಕೋಟಿ ರೂ. (ಕಳೆದ ವರ್ಷ 7,200 ಕೋಟಿ ರೂ.)
* ಸೋಲಾರ್ ಶಕ್ತಿ – 8,500 ಕೋಟಿ ರೂ. (ಕಳೆದ ವರ್ಷ 4,970 ಕೋಟಿ ರೂ.)
* ಕೈಗಾರಿಕೆ-ಇನ್‌ಸೆಂಟೀವ್ ಸ್ಕೀಂ – 6,200 ಕೋಟಿ ರೂ. (ಕಳೆದ ವರ್ಷ 4,645 ಕೋಟಿ ರೂ.)
* ಸೆಮಿ ಕಂಡಕ್ಟರ್ ವಲಯ – 6,903 ಕೋಟಿ ರೂ. (ಕಳೆದ ವರ್ಷ 3,000 ಕೋಟಿ ರೂ.)
* ಗ್ರೀನ್ ಹೈಡ್ರೋಜೆನ್ ಮಿಷನ್ – 6,00 ಕೋಟಿ (ಕಳೆದ ವರ್ಷ 297 ಕೋಟಿ)
ಯಾವ ಇಲಾಖೆಗೆ ಎಷ್ಟು ಕೋಟಿ ರೂ. ಅನುದಾನ?
* ರಕ್ಷಣಾ ಇಲಾಖೆ – 6.2 ಲಕ್ಷ ಕೋಟಿ ರೂ.
* ರಸ್ತೆ ಸಾರಿಗೆ-ಹೆದ್ದಾರಿ ಇಲಾಖೆ – 2.78 ಲಕ್ಷ ಕೋಟಿ ರೂ.
* ರೈಲ್ವೇ ಇಲಾಖೆ – 2.55 ಲಕ್ಷ ಕೋಟಿ ರೂ.
* ಗ್ರಾಹಕ ವ್ಯವಹಾರ ಇಲಾಖೆ – 2.13 ಲಕ್ಷ ಕೋಟಿ ರೂ.
* ಗೃಹ ಇಲಾಖೆ – 2.03 ಲಕ್ಷ ಕೋಟಿ ರೂ.
* ಗ್ರಾಮೀಣಾಭಿವೃದ್ಧಿ ಇಲಾಖೆ – 1.77 ಲಕ್ಷ ಕೋಟಿ ರೂ.
* ರಸಗೊಬ್ಬರ-ಕೆಮಿಕಲ್ ಇಲಾಖೆ – 1.68 ಲಕ್ಷ ಕೋಟಿ ರೂ.
* ಮಾಹಿತಿ,ಸಂವಹನ ಇಲಾಖೆ – 1.37 ಲಕ್ಷ ಕೋಟಿ ರೂ.
* ಕೃಷಿ, ರೈತ ಕಲ್ಯಾಣ ಇಲಾಖೆ – 1.27 ಲಕ್ಷ ಕೋಟಿ ರೂ. ಇದನ್ನೂ ಓದಿ: ಮಹತ್ವದ ಘೋಷಣೆ, ಉಚಿತ ಭರವಸೆಗಳಿಗೆ ಬ್ರೇಕ್ – ಅಧಿಕಾರಿಗಳಿಗೆ ಮೋದಿ ಸೂಚಿಸಿದ್ದೇನು?