ಮಂದಸ್ಮಿತ, ಮುಗ್ಧಮುಖದ ಬಾಲರಾಮನ ಕಣ್ತುಂಬಿಕೊಂಡು ಪುನೀತರಾದ ರಾಮಭಕ್ತರು

Public TV
2 Min Read
AYODHYA 6

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಶ್ರೀರಾಮ (Ayodhya Ram Mandir) ಮತ್ತೆ ಪಟ್ಟಕ್ಕೇರಿದ್ದಾನೆ. ಆರಾಧ್ಯ ದೈವ ರಾಮ ಧರ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಸಂದರ್ಭವನ್ನು ಕಣ್ತುಂಬಿಕೊಂಡು ಭಕ್ತರು ಧನ್ಯತಾಭಾವ ಮೆರೆದಿದ್ದಾರೆ. ‘ಹೇ ರಾಮ’ ನಮ್ಮ ಜನ್ಮ ಸಾರ್ಥಕವಾಯಿತು ಎಂದು ಜನ ಭಕ್ತಿಯ ಪರಾಕಾಷ್ಠೆ ಮೆರೆದರು. ಜೈ ಶ್ರೀರಾಮ್ (Jai Shree Ram) ಎಂದು ಘೋಷಣೆ ಕೂಗುತ್ತಾ ಆನಂದಭಾಷ್ಪ ಸುರಿಸಿದ ಭಕ್ತರು ಅದೆಷ್ಟೋ ಮಂದಿ.

AYODHYA 5

ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮ ವಿರಾಜಮಾನನಾದ. ಆತನ ತೇಜಸ್ವಿ ಕಣ್ಣುಗಳು ಪುಣ್ಯಭೂಮಿ ಭಾರತವನ್ನು ನೋಡುತ್ತಿವೆ. ಮಂದಸ್ಮಿತನಾದ ಬಾಲರಾಮ ತನ್ನ ಭಕ್ತರನ್ನು ಕಂಡು ಹರಸುತ್ತಿದ್ದಾನೆ. 500 ವರ್ಷಗಳ ಬಳಿಕ ಕೊನೆಗೂ ಭಗವಾನ್ ರಾಮ ಭಕ್ತರಿಗೆ ದರ್ಶನ ನೀಡಿದ್ದಾನೆ. ಬಾಲರಾಮನ ಫೋಟೋಗಳು ವೈರಲ್ ಆಗುತ್ತಿವೆ. ‘ಜೈ ಶ್ರೀರಾಮ್’ ಘೋಷಣೆ ಮೊಳಗುತ್ತಿವೆ. ಎಲ್ಲರೆದೆಯಲ್ಲೂ ಹರ್ಷದ ಹೊನಲು ತುಂಬಿದೆ. ಬಾಲರಾಮನ ಮುಖಾರವಿಂದ ಕಣ್ತುಂಬಿಕೊಂಡು ಭಕ್ತರು ಭಕ್ತಿಯಲ್ಲಿ ಕಳೆದು ಹೋಗಿದ್ದಾರೆ. ರಾಮಲಲ್ಲಾನ ವಿಗ್ರಹ ನೋಡಿದರೆ ನಿಜಕ್ಕೂ ನೀವೂ ಒಂದು ಬಾರಿ ಕಳೆದುಹೋಗುವುದರಲ್ಲಿ ಎರಡು ಮಾತಿಲ್ಲ. ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಮೋದಿ ಸಾಷ್ಟಾಂಗ ನಮಸ್ಕಾರ

AYODHYA RAM MANDIR.3png

ಇಂದು (ಸೋಮವಾರ) ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶಾಸ್ತ್ರೋಕ್ತವಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಪುಷ್ಪಗಳಿಂದ ಅಲಂಕೃತನಾಗಿದ್ದ ಬಾಲರಾಮ ಇಡೀ ಜಗತ್ತಿಗೆ ದರ್ಶನ ಕೊಟ್ಟನು. ಮೈ ತುಂಬಾ ಆಭರಣಗಳೊಂದಿಗೆ ಮಿಂಚುತ್ತಿರುವ ರಾಮ ಮಂದಹಾಸ ಬೀರುತ್ತಿರುವುದನ್ನು ನೋಡಿದ್ರೆ ಒಂದು ಬಾರಿ ಕಣ್ತುಂಬಿ ಬರುತ್ತೆ. ಹಣೆಯಲ್ಲಿ ನಾಮ, ತಲೆಯಲ್ಲಿ ಕಿರೀಟ, ಬಾಣ ಹಾಗೂ ಬಿಲ್ಲು ರಾಮನ ಕೈಯಲ್ಲಿದೆ. ಒಟ್ಟಿನಲ್ಲಿ ಸರ್ವಾಲಂಕಾರಭೂಷಿತನಾಗಿರುವ ಅಯೋಧ್ಯೆಯ ಶ್ರೀರಾಮನನ್ನು ನೋಡುವುದೇ ಆನಂದ.

RAMA 1

ರಾಮನ ಕಣ್ಣುಗಳ ಬಗ್ಗೆ ವರ್ಣಿಸಲು ಪದಗಳೇ ಸಾಲದು. ಬಾಲರಾಮನ ಕಣ್ಣುಗಳಲ್ಲಿ ತೇಜಸ್ಸಿದೆ. ಕಣ್ಣುಗಳನ್ನು ನೋಡುತ್ತಿದ್ದರೆ ಸಾಕ್ಷಾತ್ ರಾಮನೇ ಬಂದು ನಿಂತು ಭಕ್ತರನ್ನು ನೋಡಿ ಮಂದಹಾಸ ಬೀರುವಂತಿದೆ.

ಒಟ್ಟಿನಲ್ಲಿ ತಲೆತಲಾಂತರಗಳಿಂದ ಕಾಯುತ್ತಿದ್ದ ರಾಮಭಕ್ತರು ಇಂದು ಧನ್ಯತಾ ಭಾವ ಮೆರೆದಿದ್ದಾರೆ. ಬಾಲರಾಮ ಕೊನೆಗೂ ತನ್ನ ಸ್ಥಾನಕ್ಕೆ ಮರಳಿದ್ದಾರೆ. ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ ಗರ್ಭಗುಡಿಯ ಒಳಗೆ ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸಿನಿ ತಾರೆಯರು, ರಾಜಕೀಯ ಗಣ್ಯರು ಹಾಗೂ ರಾಮಭಕ್ತರು ಹೀಗೆ ಸಾಕಷ್ಟು ಮಂದಿ ಸಾಕ್ಷಿಯಾಗಿದ್ದಾರೆ.

ಇತ್ತ ರಾಮಲಲ್ಲಾನ ಪ್ರಾಣ ಪ್ರತಿಷ್ಠಾನ ಕ್ಷಣ ಕಣ್ತುಂಬಿಕೊಂಡು ಹಿರಿಯ ಜೀವಿಗಳು ಭಾವುಕಾರಾದವು. ಕಣ್ಣಂಚಲಿ ಆನಂದಭಾಷ್ಪ ಜಿನುಗಿದರೆ, ಇತ್ತ ರಾಮಭಕ್ತರು ಮೈ ಮರೆತು ಸಂಭ್ರಮಿಸಿದರು. ನಾವು ಜೀವಿತಾವಧಿಯಲ್ಲಿ ಇಂತಹ ಕ್ಷಣವನ್ನ ನೋಡುತ್ತೇವೆ ಅನ್ನೋ ನಂಬಿಕೆ ಇರಲಿಲ್ಲ. ರಾಮ ಮತ್ತೆ ಹುಟ್ಟಿ ಬಂದಷ್ಟೇ ಸಂತಸ ಆಗ್ತಿದೆ. ಗುಡಿಸಲಲ್ಲಿದ್ದ ರಾಮನನ್ನ ನೋಡಿ ಬಹಳ ನೋವಾಗುತ್ತಿತ್ತು. ಇಂದು ಭವ್ಯ ಮಂದಿರದೊಳಗೆ ಸ್ವಾಮಿ ಪ್ರತಿಷ್ಠಾಪನಾಗಿದ್ದಾನೆ. ಇಂತಹ ಅದ್ಭುತ ಕ್ಷಣಕ್ಕಿಂತ ಇನ್ನೇನು ಸೌಭಾಗ್ಯ ಬೇಕು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Share This Article