ಎರಡೇ ದಿನಗಳಿಗೆ 33 ವಿಕೆಟ್‌ ಉಡೀಸ್‌; ಹರಿಣರ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಜಯ – ಸರಣಿ ಸಮಬಲ

Public TV
3 Min Read
Team India Test 2

ಕೇಪ್‌ಟೌನ್‌: ಜಸ್ಪ್ರೀತ್‌ ಬುಮ್ರಾ (Jasprit Bumrah), ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಭಾರತ (Team India), ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ 2ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿತು. ಈ ಮೂಲಕ ತವರಿನಲ್ಲೇ ಹರಿಣರನ್ನು ಬಗ್ಗುಬಡಿದು 1-1ರಲ್ಲಿ ಸರಣಿ ಸಮಬಲಗೊಳಿಸಿತು.

Team India Test

ಈ ಗೆಲುವಿನ ಮೂಲಕ ರೋಹಿತ್ ಶರ್ಮಾ (Rohit Sharma) ಕೇಪ್‌ಟೌನ್‌ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಏಷ್ಯಾದ ಮೊದಲ ನಾಯಕ ಎಂಬ ಕೀರ್ತಿಗೆ ಪಾತ್ರರಾದರು. ಅಲ್ಲದೇ ಎಂ.ಎಸ್ ಧೋನಿ ನಂತರ ದಕ್ಷಿಣ ಆಫ್ರಿಕಾದಲ್ಲಿ (South Africa) ಟೆಸ್ಟ್ ಸರಣಿಯನ್ನು ಸಮಬಲಗೊಳಿಸಿದ 2ನೇ ಭಾರತೀಯ ನಾಯಕ ಎಂಬ ಹಿರಿಮೆಗೂ ರೋಹಿತ್‌ ಪಾತ್ರರಾದರು. ಇದನ್ನೂ ಓದಿ: ಪಂದ್ಯದ ವೇಳೆ ರಾಮ್ ಸಿಯಾ ರಾಮ್ ಹಾಡಿಗೆ ರಾಮನಂತೆ ಬಿಲ್ಲು ಹಿಡಿದ ಕೊಹ್ಲಿ ವೀಡಿಯೋ ವೈರಲ್

Team India Test 3

ಕೇವಲ ಎರಡೇ ದಿನಗಳಲ್ಲಿ ಮುಕ್ತಾಯಗೊಂಡ ಈ ಪಂದ್ಯವು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಚುಟುಕು ಪಂದ್ಯ ಎನಿಸಿಕೊಂಡಿತು. ಇತ್ತಂಡಗಳ ಇನ್ನಿಂಗ್ಸ್‌ಗಳಿಂದ ಒಟ್ಟು 642 ಎಸೆತಗಳು ದಾಖಲಾದವು. 1932ರಂದು ಮೆಲ್ಬರ್ನ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ 656 ಎಸೆತಗಳು ಹಾಗೂ 1935ರಲ್ಲಿ ‌ಬ್ರಿಡ್ಜ್‌ಟೌನ್‌ನಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದಲ್ಲಿ 672 ಎಸೆತಗಳು ದಾಖಲಾಗಿದ್ದು, ಈವರೆಗಿನ ಸಾಧನೆಯಾಗಿತ್ತು.

KL Rahul 1

ಮೊದಲ ಟೆಸ್ಟ್‌ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ್ದ ಟೀಂ ಇಂಡಿಯಾ 2ನೇ ಟೆಸ್ಟ್‌ ಪಂದ್ಯದಲ್ಲಿ ಗೆದ್ದು ಸೇಡು ತೀರಿಸಿಕೊಂಡಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್‌ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ ಬಿಟ್ಟುಕೊಟ್ಟಿತು. ಇದನ್ನೂ ಓದಿ: ಇದು ಇಡೀ ಭಾರತದ ಶ್ರೇಷ್ಠ ಕ್ಷಣ – ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಆಹ್ವಾನ ಪಡೆದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ

ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ಮಾರಕ ದಾಳಿಗೆ ತುತ್ತಾದ ದಕ್ಷಿಣ ಆಫ್ರಿಕಾ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ ಸಹ 153 ರನ್‌ಗಳಿಗೆ ಆಲೌಟ್‌ ಆಯಿತು. ಪುನಃ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ 17 ಓವರ್‌ಗಳಲ್ಲಿ 62 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಮೊದಲ ದಿನದ ಇನ್ನಿಂಗ್ಸ್‌ ಅಂತ್ಯಗೊಳಿಸಿತ್ತು. ಗುರುವಾರ ತನ್ನ ಸರದಿ ಆರಂಭಿಸಿದ ಹರಿಣರು ಏಡನ್‌ ಮಾರ್ಕ್ರಮ್‌ ಭರ್ಜರಿ ಶತಕದೊಂದಿಗೆ 36.5 ಓವರ್‌ಗಳಲ್ಲಿ 176 ರನ್‌ಗಳಗೆ ಸರ್ವಪತನ ಕಂಡಿತು. ಇದರಿಂದ ಟೀಂ ಇಂಡಿಯಾಕ್ಕೆ 79 ರನ್‌ಗಳ ಗುರಿ ನೀಡಿತು.

Siraj

ದಕ್ಷಿಣ ಆಫ್ರಿಕಾ ಪರ ಆರಂಭಿಕ ಏಡನ್‌ ಮಾರ್ಕ್ರಮ್‌ 103 ಎಸೆತಗಳಲ್ಲಿ 2 ಸಿಕ್ಸರ್‌, 17 ಬೌಂಡರಿಯೊಂದಿಗೆ 106 ರನ್‌ ಬಾರಿಸಿದರೆ, ಡೀನ್‌ ಎಲ್ಗರ್‌ 12 ರನ್‌, ಡೇವಿಡ್ ಬೆಡಿಂಗ್ಹ್ಯಾಮ್ ಮತ್ತು ಮಾರ್ಕೋ ಜಾನ್ಸೆನ್‌ ತಲಾ 11 ರನ್‌ ಗಳಿಸಿದರು. ಇನ್ನುಳಿದ ಆಟಗಾರರ ಕೇವಲ ಒಂದಂಕಿಯ ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದನ್ನೂ ಓದಿ: ಸಿರಾಜ್ ಬೌಲಿಂಗ್ ಅಬ್ಬರಕ್ಕೆ ತತ್ತರಿಸಿದ ದಕ್ಷಿಣ ಆಫ್ರಿಕಾ ಪಡೆ, 55ಕ್ಕೆ ಅಲೌಟ್

79 ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ, ನಾಯಕ ರೋಹಿತ್‌ ಶರ್ಮಾ ಅವರ ತಾಳ್ಮೆಯ ಬ್ಯಾಟಿಂಗ್‌ನಿಂದ 12 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 80 ರನ್‌ ಗಳಿಸಿ ಗೆಲುವು ಸಾಧಿಸಿತು. ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್‌ 28 ರನ್‌, ರೋಹಿತ್‌ ಶರ್ಮಾ 16 ರನ್‌, ಶುಭಮನ್‌ ಗಿಲ್‌ 10 ರನ್‌, ವಿರಾಟ್‌ ಕೊಹ್ಲಿ 12 ರನ್‌, ಶ್ರೇಯಸ್‌ ಅಯ್ಯರ್‌ 4 ರನ್‌ ಗಳಿಸಿದರು. ಅಂತಿಮ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 13.5 ಓವರ್‌ಗಳಲ್ಲಿ 61 ರನ್‌ ಬಿಟ್ಟುಕೊಟ್ಟ ಬುಮ್ರಾ 6 ವಿಕೆಟ್‌ ಕಿತ್ತರೆ, ಮುಕೇಶ್‌ ಕುಮಾರ್‌ 2, ಸಿರಾಜ್‌ ಹಾಗೂ ಪ್ರಸಿದ್ಧ್‌ ಕೃಷ್ಣ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

Share This Article