ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ನಿಮಿತ್ತ ನಾನು ಅಯೋಧ್ಯೆಗೆ ಹೋಗಲ್ಲ: ಸಿದ್ಧಲಿಂಗ ಶ್ರೀ

Public TV
1 Min Read
mdk siddalinga swamiji

ತುಮಕೂರು: ಅಯ್ಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ನನಗೂ ಕೂಡ ಆಹ್ವಾನ ಬಂದಿದೆ. ಆದರೆ ನಾನು ಹೋಗಲು ಆಗುವುದಿಲ್ಲ.‌ ಕಾರಣ ಅದೇ ದಿನದಂದು ಲಿಂಗೈಕ್ಯ, ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ (Dr. Shivakumara Swamiji) 5ನೇ ವರ್ಷದ ಪುಣ್ಯ ಸ್ಮರಣೆ ಇರುವ ಕಾರಣ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ನಾನು ಹೋಗಲು ಆಗುವುದಿಲ್ಲ ಎಂದು ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಅವರು ಸ್ಪಷ್ಟಪಡಿಸಿದರು.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಉದ್ಘಾಟನೆಯ ಮುನ್ನ ದಿನವೇ ಅಂದರೆ ಜನವರಿ 20ರಂದು ಬಂದು ಅಯೋಧ್ಯೆಯಲ್ಲಿ ತಂಗುವಂತೆ ಮನವಿ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಜನವರಿ 23 ರಂದೇ ಹಿಂದಿರುಗಲು ಹೇಳಿದ್ದಾರೆ. ಆದರೆ ನಾನು ಹೋಗಲು ಆಗುತ್ತಿಲ್ಲ. ಕಾರಣ, ಜನವರಿ 21ರಂದು ಡಾ. ಶಿವಕುಮಾರ ಸ್ವಾಮೀಜಿಯವರ ಪುಣ್ಯ ಸ್ಮರಣೆ ಇದೆ. ಈ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ಹೋಗಲು ಆಗುತ್ತಿಲ್ಲ. ಆದರೆ ಶ್ರೀ ಸಿದ್ದಗಂಗಾ ಮಠದಿಂದ ರಾಮ ಮಂದಿರ ಉದ್ಘಾಟನೆ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿ ಪತ್ರವನ್ನು ಕಳುಹಿಸಿಕೊಡಲಾಗಿದೆ ಎಂದು ಸ್ವಾಮೀಜಿ ಅವರು ಸ್ಪಷ್ಟನೆ ನೀಡಿದರು.

ayodhya ram mandir

ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ಶ್ರೀ ರಾಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ನಿಂದ ಆಹ್ವಾನ ಬಂದಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಅಧಿಕೃತವಾಗಿ ಅಂಚೆ ಮೂಲಕ ಆಹ್ವಾನ ಪತ್ರಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಅಪಾರ ಸಂತಸ ತಂದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಗಮನಾರ್ಹ ಸಾಧನೆಯಾಗಿದೆ. ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಪ್ರದರ್ಶಿಸದೆ ಏಕತೆಯ ಸಂಕೇತವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.

ರಾಮ ಮಂದಿರ ದೇವಾಲಯ ಪೂರ್ಣಗೊಂಡಿರುವುದು ಒಂದು ಐತಿಹಾಸಿಕ ಮೈಲುಗಲ್ಲು ಆಗಿದೆ. ರಾಮ ಮಂದಿರದ ವಾಸ್ತುಶಿಲ್ಪದ ವಿನ್ಯಾಸವು ಸಾಂಪ್ರದಾಯಕ ಹಾಗೂ ಆಧುನಿಕತೆಯ ಮಿಶ್ರಣಗೊಂಡಿರುವುದು ಖುಷಿ ತಂದಿದೆ ಎಂದು ಶ್ರೀಗಳು ಹರ್ಷ ವ್ಯಕ್ತಪಡಿಸಿದರು.

Share This Article